ವೀರಾಜಪೇಟೆ, ಸೆ. 14: ಎಸ್‍ಎಸ್‍ಎಲ್‍ಸಿ ವಿದ್ಯಾಭ್ಯಾಸ ವಿದ್ಯಾರ್ಥಿ ಜೀವನದ ಪ್ರಾರಂಭದ ತಳಹದಿಯಾಗಿದ್ದು ಯಾವದೇ ಭಯ ಭೀತಿ ಇಲ್ಲದೆ ಪರೀಕ್ಷೆಯನ್ನು ಎದುರಿಸ ಬೇಕು ಎಂದು ಕಾಕೋಟುಪರಂಬು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್, ಪರಿವರ್ತನಾ ಶಾಲೆ ಮತ್ತು ಕಾಲೇಜು ಶ್ರೀರಂಗಪಟ್ಟಣ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯಲ್ಲಿ ಸಂತ ಅನ್ನಮ್ಮ ಶಾಲಾ ಸಭಾಂಗಣ ದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಧ್ಯೆರ್ಯ ಇದ್ದರೆ ಏನನ್ನು ಬೇಕಾದರು ಸಾಧಿಸ ಬಹುದು. ಪರೀಕ್ಷೆ ಬಂದಾಗ ಹಗಲು ರಾತ್ರಿ ಓದಿ ದೇಹದ ಸ್ಥಿತಿಯನ್ನು ಹಾಳು ಮಾಡಿಕೊಳ್ಳುವದ ಕ್ಕಿಂತ ಶ್ರದ್ಧೆ, ಏಕಾಗ್ರತೆ ಹಾಗೂ ದೃಢ ಮನಸ್ಸಿನಿಂದ ಅಭ್ಯಾಸ ಮಾಡಿದರೆ ಗುರಿ ಸಾಧಿಸಬಹುದು ಎಂದು ಹೇಳಿದರು. ಶ್ರಿರಂಗಪಟ್ಟಣದ ಪರಿವರ್ತನಾ ಸಂಸ್ಥೆಯ ಡೀನ್ ಹಾಗೂ ಅಂತರಾಷ್ಟ್ರೀಯ ತರಬೇತು ದಾರರಾದ ಆರ್.ಎ. ಚೇತನ್‍ರಾಮ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ಕೌಟುಂಬಿಕ, ಶ್ಯೆಕ್ಷಣಿಕ, ವೈಯಕ್ತಿಕ ಅಧ್ಯಯನದ ಸಮಸ್ಯೆಗಳು ಇರಬಾರದು. ಪರೀಕ್ಷಾ ತಯಾರಿಯಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ನಿದ್ರೆಯ ಶಕ್ತಿಯನ್ನು ಕಳೆದುಕೊಳ್ಳಬಾರದು. ವೇಗವಾಗಿ ಬರೆಯುವ, ಓದುವ ಮತ್ತು ಅಧ್ಯಯನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಮೌಲ್ಯ ಮಾಪಕರು ಒಪ್ಪುವಂತಹ ಸರಿ ಉತ್ತರವನ್ನು ಓದಲು ಅರ್ಹವಾಗಿರು ವಂತೆ ಬರೆಯುವದರ ಮೂಲಕ ಉತ್ತಮ ಅಂಕವನ್ನು ಪಡೆದುಕೊಳ್ಳ ಬಹುದಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‍ನ ತಾಲೂಕು ಅಧ್ಯಕ್ಷ ಮುಲ್ಲೇಂಗಡ ಮದೋಷ್ ಪೂವಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲ ಮದಲೈಮುತ್ತು, ಬಿಇಒ ಲೋಕೇಶ್, ಸಾಹಿತ್ಯ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಉಪಸ್ಥಿತರಿದ್ದರು. ಜೆಫ್ರಿ ಡಿಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಕಾರ್ಯಕ್ರಮ ನಿರೂಪಿಸಿದರು.