ಮಡಿಕೇರಿ, ಸೆ. 12: ಮಡಿಕೇರಿ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್‍ಡಿ) ಬ್ಯಾಂಕ್‍ನ ಸದಸ್ಯರು ತಮಗೆ ಬರಬೇಕಾಗಿರುವ ಡಿವಿಡೆಂಡನ್ನು ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ನೀಡಲು ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್‍ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಡಿಕೇರಿ ತಾಲೂಕು ಪಿಎಲ್‍ಡಿ ಬ್ಯಾಂಕ್ ಈ ಬಾರಿ ಸುಮಾರು ರೂ. 18.51 ಲಕ್ಷಗಳ ಲಾಭಗಳಿಸಿದ್ದು, ಈ ಪೈಕಿ ಶೇ. 8 ರಷ್ಟು ಲಾಭಾಂಶವನ್ನು ತನ್ನ ಸದಸ್ಯರಿಗೆ ನೀಡಲು ತೀರ್ಮಾನಿಸಿತ್ತು. ಆದರೆ ತಾ. 7 ರಂದು ನಡೆದ ಮಹಾಸಭೆಯಲ್ಲಿ ಬ್ಯಾಂಕ್‍ನ ಬಹುತೇಕ ಸದಸ್ಯರು ತಮಗೆ ಬರಬೇಕಾಗಿರುವ ಲಾಭಾಂಶವನ್ನು ಸಂತ್ರಸ್ತರಿಗೆ ನೆರವು ನೀಡಲು ತೀರ್ಮಾನಿಸಿದ್ದು, ಅದರಂತೆ ಬ್ಯಾಂಕ್‍ನ ಸಿಬ್ಬಂದಿಗಳು ರೂ. 40 ಸಾವಿರ ಸೇರಿದಂತೆ ಒಟ್ಟು ರೂ. 10 ಲಕ್ಷಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್‍ನಿಂದ 61 ಸದಸ್ಯರು ಸುಮಾರು ರೂ. 2 ಕೋಟಿಗಳಿಗೂ ಅಧಿಕ ಸಾಲ ಪಡೆದಿದ್ದು, ಈ ಬಾರಿ ಅತಿವೃಷ್ಟಿಯಿಂದಾಗಿ ಸದಸ್ಯರು ಸಂಕಷ್ಟಕ್ಕೆ ಸಿಲುಕಿರುವದರಿಂದ ಅವರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಸರಕಾರ ಮತ್ತು ಕೇಂದ್ರ ಬ್ಯಾಂಕ್‍ನ್ನು ಕೋರಲು ನಿರ್ಧರಿಸಲಾಗಿದೆ. 1957 ರಲ್ಲಿ ಅಡಮಾನ ಬ್ಯಾಂಕ್ ಆಗಿ ಕೊಡಗು ವ್ಯಾಪ್ತಿಯನ್ನೊಳಗೊಂಡು 25 ಸದಸ್ಯರು ಹಾಗೂ ರೂ. 3 ಸಾವಿರ ಷೇರು ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್ ಪ್ರಸಕ್ತ 2534 ಮಂದಿ ಸದಸ್ಯರು ಹಾಗೂ ರೂ. 97.66 ಲಕ್ಷಗಳ ಷೇರು ಬಂಡವಾಳವನ್ನು ಹೊಂದಿದ್ದು, ಕಳೆದ 13 ವರ್ಷಗಳಿಂದ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಮನು ಮುತ್ತಪ್ಪ ಹೇಳಿದರು.
ತಾಲೂಕಿನ ಖಾಲಿ ಜಮ್ಮಾ ಬಾಣೆ ಜಮೀನಿಗೆ ಸಾಲ ಸೌಲಭ್ಯ ನೀಡುತ್ತಿರುವ ಪ್ರಥಮ ಬ್ಯಾಂಕ್ ಇದಾಗಿದ್ದು, ಇದರಿಂದಾಗಿ ತಾಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ತೆಂಗು, ರಬ್ಬರ್ ತೋಟಗಳ ಅಭಿವೃದ್ಧಿ ಸಾಧ್ಯವಾಗಿದೆ. ಸರಕಾರದ ಆದೇಶದಂತೆ ಇತ್ತೀಚಿನ ವರ್ಷಗಳಲ್ಲಿ ಶೇ. 3 ರ ಬಡ್ಡಿ ದರದಲ್ಲಿ ರೈತರಿಗೆ ಎಲ್ಲಾ ತರಹದ ಕೃಷಿ ಉದ್ದೇಶಕ್ಕೆ ಸಾಲ ನೀಡಲಾಗುತ್ತಿದೆ. ಇದರೊಂದಿಗೆ ಸಕಾಲದಲ್ಲಿ ಸಾಲ ಮರುಪಾವತಿಸುವ ಸದಸ್ಯರಿಗೆ ರೂ. 5 ಸಾವಿರಗಳವರೆಗೆ ಬಡ್ಡಿ ರಿಯಾಯಿತಿಯನ್ನೂ ನೀಡುತ್ತಿದೆ. ಇಂತಹ ಸೌಲಭ್ಯ ನೀಡುತ್ತಿರುವ ಬ್ಯಾಂಕ್‍ಗಳಲ್ಲಿ ರಾಜ್ಯದಲ್ಲೇ ತಮ್ಮ ಬ್ಯಾಂಕ್ ಮೊದಲನೆಯದ್ದಾಗಿದೆ ಎಂದರು. ಬ್ಯಾಂಕ್ 2017-18ನೇ ಸಾಲಿನಲ್ಲಿ ರೂ. 425.49 ಲಕ್ಷಗಳ ಸಾಲ ನೀಡಿದ್ದು, ಸದಸ್ಯರಿಂದ ಬ್ಯಾಂಕ್‍ಗೆ ರೂ. 939.04 ಲಕ್ಷ ಬರಬೇಕಾಗಿದೆ. ಅದೇ ರೀತಿ ರಾಜ್ಯ ಬ್ಯಾಂಕ್‍ಗೆ ರೂ. 846.69 ಲಕ್ಷಗಳನ್ನು ನೀಡಲು ಬಾಕಿ ಇದ್ದು, ರಾಜ್ಯ ಬ್ಯಾಂಕ್‍ಗೆ ಹೆಚ್ಚುವರಿಯಾಗಿ ರೂ. 92.35 ಲಕ್ಷಗಳನ್ನು ಮರುಪಾವತಿ ಮಾಡಲಾಗಿದೆ. ಅಲ್ಲದೆ 2017-18ನೇ ಸಾಲಿನ ತಗಾದೆಯನ್ನು ಪೂರ್ಣ ಮರುಪಾವತಿ ಮಾಡಲಾಗಿದೆ ಎಂದು ಮನುಮುತ್ತಪ್ಪ ವಿವರಿಸಿದರು.
ಕಳೆದ 13 ವರ್ಷಗಳಿಂದ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿರುವ ಪಿಎಲ್‍ಡಿ ಬ್ಯಾಂಕ್ 2017-18ನೇ ಸಾಲಿನಲ್ಲಿ ರೂ. 18.51 ಲಕ್ಷಗಳ ನಿವ್ವಳ ಲಾಭ ಗಳಿಸಿದೆ. ಸರಕಾರದಿಂದ ಬಡ್ಡಿ ರಿಯಾಯಿತಿ ಮತ್ತು ಬಡ್ಡಿ ಮನ್ನಾದ ಬಾಪ್ತು ರೂ. 101.99 ಲಕ್ಷಗಳು ಬರಬೇಕಾಗಿದ್ದು, ಇದನ್ನೂ ಸೇರಿದಂತೆ ರೂ. 164.99 ಲಕ್ಷಗಳನ್ನು ಕಾದಿರಿಸಲಾಗಿರುವದರಿಂದ ಮುಂದಿನ ವರ್ಷಗಳಲ್ಲಿ ಲಾಭ ಗಳಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಬ್ಯಾಂಕ್ 1999-2000ನೇ ಸಾಲಿನಿಂದ ಸ್ವಂತ ಬಂಡವಾಳದಿಂದ ಚಿನ್ನಾಭರಣ, ಸಂಬಳ ಆಧಾರ ಹಾಗೂ ಇತರ ಉದ್ದೇಶಗಳ ಸಾಲವನ್ನು ನೀಡುತ್ತಿದ್ದು, ಇದರಿಂದ ಇದುವರೆಗೆ ಸುಮಾರು ರೂ. 84.34 ಲಕ್ಷಗಳ ಲಾಭವನ್ನು ಗಳಿಸಿದಂತಾಗಿದೆ. ಒಂದು ಕಾಲದಲ್ಲಿ ಸಂಪೂರ್ಣವಾಗಿ ನಷ್ಟದಲ್ಲಿದ್ದು, ಮುಚ್ಚುವ ಹಂತದಲ್ಲಿದ್ದ ಬ್ಯಾಂಕ್, ಹೆಚ್ಚುವರಿ ಖರ್ಚುಗಳಿಗೆ ಕಡಿವಾಣ ಹಾಗೂ ಸಿಬ್ಬಂದಿ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆ ಮಾಡುವ ಮೂಲಕ ಲಾಭದಲ್ಲಿ ಮುನ್ನಡೆಯಲಾರಂಭಿಸಿದೆ. ಬ್ಯಾಂಕ್‍ನ ಸದಸ್ಯರ ಮಕ್ಕಳು ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿಯಲ್ಲಿ ಶೇ. 75 ಕ್ಕಿಂತ ಅಧಿಕ ಅಂಕ ಪಡೆದಲ್ಲಿ ಅವರಿಗೆ ಉತ್ತಮ ಮೊತ್ತದ ಪ್ರೋತ್ಸಾಹಧನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ ಎಂದು ಮನುಮುತ್ತಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಲ್ಲಚಂಡ ವಿಠಲ್ ಕಾವೇರಪ್ಪ, ನಿರ್ದೇಶಕರುಗಳಾದ ಬೆಪ್ಪುರನ ಮೇದಪ್ಪ, ಮಾತಂಡ ಪೊನ್ನಮ್ಮ ಬೆಳ್ಯಪ್ಪ, ಹೆಚ್.ಆರ್. ವಾಸಪ್ಪ ಹಾಗೂ ವ್ಯವಸ್ಥಾಪಕ ಎನ್.ಎಸ್. ಬಾಲಗಂಗಾಧರ ಉಪಸ್ಥಿತರಿದ್ದರು.