ಮಡಿಕೇರಿ, ಸೆ. 14: ಕೊಡಗು ಜಿಲ್ಲೆಯಾದ್ಯಂತ ಗಣೇಶ ಚತುರ್ಥಿಯ ದಿನವಾದ ಗುರುವಾರದಂದು ವಿಘ್ನ ನಿವಾರಕ, ಆದಿಪೂಜಿತ, ಗಣಪತಿಯ ಆರಾಧನೆ ನಡೆಯಿತು. ಆದರೆ ಈ ಹಿಂದಿನ ವರ್ಷಗಳಂತೆ ಈ ಬಾರಿಯ ಉತ್ಸವದಲ್ಲಿ ಹೆಚ್ಚಿನ ಆಡಂಬರ - ಸಂಭ್ರಮ, ಸಡಗರಗಳು ಇರಲಿಲ್ಲ. ಕೇವಲ ಸಾಂಪ್ರದಾಯಿಕವಾಗಿ ಮಾತ್ರ ಪೂಜೆ ಪುನಸ್ಕಾರಗಳೊಂದಿಗೆ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು.
ಜಿಲ್ಲೆಯಲ್ಲಿ ಈ ಬಾರಿ ಸಂಭವಿಸಿದ ಪ್ರಾಕೃತಿಕ ದುರಂತಗಳು ಸಾವು-ನೋವುಗಳಂತಹ ಮರೆಯಲಾಗದ ಘಟನೆಗಳು ನಡೆದು ಹೋಗಿರುವ ಹಿನ್ನೆಲೆಯಲ್ಲಿ ಕೇವಲ ಸಂಪ್ರದಾಯಬದ್ಧವಾಗಿ ಮಾತ್ರ ಅತ್ಯಂತ ಸರಳತೆಯೊಂದಿಗೆ ಚುತುರ್ಥಿ ಆಚರಿಸಲ್ಪಟ್ಟಿದೆ. ಜಿಲ್ಲೆಯಲ್ಲಿನ ಬಹುತೇಕ ಕಡೆಗಳಲ್ಲಿ ಇ ಬಾರಿಯ ದುರಂತದ ಸನ್ನಿವೇಶದಿಂದಾಗಿ ಎಲ್ಲಾ ಉತ್ಸವ ಸಮಿತಿಗಳು ಸರಳ ಆಚರಣೆಗೆ ಮಾತ್ರ ಈ ಕೈಂಕರ್ಯವನ್ನು ಸೀಮಿತಗೊಳಿಸುವ ನಿರ್ಣಯ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಈ ಹಿಂದಿನ ವರ್ಷಗಳಂತೆ ವೈಭವ ಪೂರ್ಣ ಗಣೇಶೋತ್ಸವ ಬದಲಾಗಿ ಸರಳತೆಯ ಆರಾಧನೆ ಮಾತ್ರ ನಡೆದಿರುವದು ಈ ಬಾರಿಯ ಕೊಡಗಿನ ವಾಸ್ತವತೆಯಾಗಿದೆ.
ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಲವಾರು ದಿನಗಳ ಕಾಲ ವೈವಿಧ್ಯಮಯವಾದ ಕಾರ್ಯಕ್ರಮಗಳ ಮೂಲಕ ದಿನಗಟ್ಟಲೆ ನಡೆಯಿತ್ತಿದ್ದ ಉತ್ಸವ ಈ ಬಾರಿ ನಡೆಯಲಿಲ್ಲ. ಬದಲಾಗಿ ಬೆಳಿಗ್ಗೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೆಚ್ಚು ಸದ್ದು-ಗದ್ದಲವಿಲ್ಲದೆ ಆ ದಿನವೇ ಸಂಜೆ ವೇಳೆಗೆ ಉತ್ಸವ ಮೂರ್ತಿಯ ವಿಸರ್ಜನೋತ್ಸವವೂ ಹಲವೆಡೆ ಮುಗಿದು ಹೋಗಿದೆ.
ಪ್ರಮುಖ ದೇವಾಲಯಗಳಲ್ಲೂ ಕೇವಲ ಪೂಜೆ-ಪುನಸ್ಕಾರಗಳಿಗೆ ಮಾತ್ರ 2018ರ ಗಣೇಶೋತ್ಸವ ಸೀಮತಿವಾದಂತಿದ್ದು, ಭಕ್ತಾದಿಗಳ ಪಾಲ್ಗೊಳ್ಳುವಿಕೆಯೂ ಇಳಿಮುಖವಾದಂತಿತ್ತು.
ಒಂದೆಡೆ ಪ್ರಕೃತಿ ವಿಕೋಪದ ನೋವು ತುಂಬಿದ್ದರೂ, ಆದಿ ಪೂಜಿತ ಗಣಪತಿಯ ಆರಾಧನೆಯೂ ಅಷ್ಟೇ ಮುಖ್ಯವಾಗಿದ್ದರಿಂದ ಕೇವಲ ಮನಸ್ಸಿನ ಅಂತರಾಳದ ಪ್ರಾರ್ಥನೆಯೊಂದಿಗೆ ಪೂಜಾ ವಿಧಿ ವಿಧಾನಗಳನ್ನು ಪೂರೈಸಲಾಗಿದೆ.
ಈ ಸನ್ನಿವೇಶ ಜಿಲ್ಲಾ ಕೇಂದ್ರ ಮಡಿಕೇರಿ, ಗಣಪತಿ ಉತ್ಸವಕ್ಕೆ ಹೆಸರಾಗಿರುವ ವೀರಾಜಪೇಟೆ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸಾಮಾನ್ಯವಾಗಿತ್ತು. ಇದರೊಂದಿಗೆ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ಮಂದಿ ಪ್ರಸ್ತುತ ಆಶ್ರಯ ಪಡೆದಿರುವ ಕೇಂದ್ರಗಳಲ್ಲೇ ಸಾಮೂಹಿಕ ಪೂಜೆ-ಪುನಸ್ಕಾರಗಳನ್ನೂ ನಡೆಸಿರುವದು ವಿಶೇಷವಾಗಿದೆ.
ಮಡಿಕೇರಿ: ಪ್ರಕೃತಿ ವಿಕೋಪದ ನೋವಿನ ನಡುವೆಯೂ ಪ್ರಥಮ ಪೂಜಿತ ಸಂಕಷ್ಟ ಹರ ವಿನಾಯಕನಿಗೆ ಭಕ್ತಿಪೂರ್ವಕವಾಗಿ ನಮಿಸಿದ ಜನರು ಸಂಕಷ್ಟ ಪರಿಹರಿಸುವಂತೆ ಬೇಡಿಕೊಂಡರು. ಮಡಿಕೇರಿ ನಗರದ ಇತಿಹಾಸ ಪ್ರಸಿದ್ದ ಕೋಟೆ ಗಣಪತಿ ದೇವಾಲಯದಲ್ಲಿ ಗಣೇಶೋತ್ಸವದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಆಗಮಿಸಿದ್ದ ಭಕ್ತಾಧಿಗಳು ಪ್ರಥಮ ಪೂಜಿತನಿಗೆ ಈಡುಗಾಯಿ ಹೊಡೆದು ಹರಕೆ ಸಲ್ಲಿಸಿದರು. ನಗರದ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವದ ಅಂಗವಾಗಿ ಸಾಮೂಹಿಕ ಗಣಹೋಮ ಹಾಗೂ ಪೂಜಾ ಕೈಂಕರ್ಯಗಳು ಜರುಗಿದವು. ದೃಷ್ಟಿ ಗಣಪತಿ ದೇವಾಲಯದಲ್ಲಿ ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇಚೂರು ರಾಮ ಮಂದಿರದಲ್ಲಿ ಗಣೇಶೋತ್ಸವದ ಅಂಗವಾಗಿ ವಿನಾಯಕನಿಗೆ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ದೇವತಾಕಾರ್ಯದಲ್ಲಿ ಭಕ್ತಾಧಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಮಡಿಕೇರಿ ನಗರದ ವಿವಿಧೆಡೆಗಳಲ್ಲಿ ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ ವಿವಿದೆಡೆಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹಿಂದು ಯುವ ಶಕ್ತಿಯಿಂದ ನಗರದ ಮೊಣ್ಣಪ್ಪ ಗ್ಯಾರೇಜ್‍ನಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಂತಿ ನಿಕೇತನ ಯುವಕ ಸಂಘದಿಂದ, ಮಂಗಳಾದೇವಿನಗರ ಆದಿಪರಾಶಕ್ತಿ ಯುವಕ ಸಂಘ, ನಗರದ ಅಶೋಕಪುರದಲ್ಲಿ, ಅಭಿಶ್ರಪ್ರದ ವಿನಾಯಕ ಯುವಕ ಸಂಘದಿಂದ ನಗರದ ತ್ಯಾಗರಾಜ ಕಾಲೋನಿಯಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಚಾಮುಂಡೇಶ್ವರಿ ನಗರದ ಕೇಸರಿ ಯುವಕ ಸಂಘದ ವತಿಯಿಂದ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಥಮ ಪೂಜಿತನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹದೇವಪೇಟೆ ವಿನಾಯಕ ಮಿತ್ರ ಮಂಡಳಿ ವತಿಯಿಂದ ವಿಘ್ನ ವಿನಾಯಕನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಪ್ರಮುಖವಾಗಿ ನಗರದ 31 ಕಡೆಗಳಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲ ದಿನ ಮಡಿಕೇರಿಯಲ್ಲಿ 19 ಉತ್ಸವ ಮೂರ್ತಿಗಳ ವಿಸರ್ಜನೆ ನಡೆಯಿತು.
ವೀರಾಜಪೇಟೆ : ಶತಮಾನಗಳ ಹಿಂದಿನ ಇತಿಹಾಸ ಪ್ರಸಿದ್ಧವಾದ ಗೌರಿಗಣೇಶನ ಯಾವುದೇ ಅದ್ಧೂರಿ ಆಡಂಬರಗಳಿಲ್ಲದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 21 ಕಡೆಗಳಲ್ಲಿ ವಿಲಂಜಿ ನಾಮ ಸಂವತ್ಸರದ ಶುದ್ಧ ತೃತೀಯದಂದು ಗುರುವಾರ ಪ್ರತಿಷ್ಠಾಪನೆ ನಡೆಯಿತು.
ಕಳೆದ 2017ರಲ್ಲಿ ಇದೇ 21 ಕಡೆಗಳಲ್ಲಿ ಭಾರೀ ಅದ್ದೂರಿಯಿಂದ ಗೌರಿಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಭಾರೀ ಪೆಂಡಾಲ್‍ಗಳು ವಿದ್ಯುತ್ ಅಲಂಕೃತಗಳು ಗಣೇಶನ ಮಂಟಪ ಹಾಗೂ ಪೆಂಡಾಲ್‍ಗಳಲ್ಲಿ ರಾರಾಜಿಸುತ್ತಿದ್ದವು. ಈ ವರ್ಷ ಗೌರಿ ಗಣೇಶನ ಪ್ರತಿಷ್ಠಾಪನೆಗೆ ನಾದಸ್ವರ ವಾದ್ಯಗೋಷ್ಠಿ ಧ್ವನಿ ವರ್ಧಕದ ಬಳಕೆಗೂ ಕೆಲವು ಉತ್ಸವ ಸಮಿತಿಗಳು ಕಡಿವಾಣ ಹಾಕಿದಾಗ ನೋಡಿದಾಗ ಗೌರಿ ಗಣೇಶನ ಸರಳ ಆಚರಣೆ ಅನೇಕ ದಶಕಗಳಲ್ಲಿ ಇದು ಮೊದಲು ಎನ್ನಬಹುದು.
ಇಲ್ಲಿನ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಾಲಯದ ಗೌರಿ ಗಣೇಶ ಉತ್ಸವ ಸಮಿತಿಯಿಂದ ಎಂದಿನಂತೆ ವಿಶಾಲವಾದ ಪೆಂಡಾಲ್ ಹಾಗೂ ವಿದ್ಯುತ್ ಅಲಂಕೃತ ಮಾಡಲಾಗಿದ್ದರೂ ಆಚರಣೆ ಮಾತ್ರ ಸಾಂಪ್ರದಾಯಿಕ ಬದ್ದವಾಗಿ ಸರಳವಾಗಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇಲ್ಲಿನ ಗಡಿಯಾರ ಕಂಬದ ಬಳಿಯ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ದೇವಾಲಯಕ್ಕೆ ವಿದ್ಯುತ್ ದೀಪಗಳಿಂದ ಅಲಂಕೃತ ಮಾಡಲಾಗಿದ್ದರೂ ಆಚರಣೆಯಲ್ಲಿ ಸರಳತೆಯನ್ನು ಕಾಪಾಡುವದಾಗಿ ತಿಳಿಸಿದಾರೆ.
ಗಣಪತಿ ಹಾಗೂ ಬಸವೇಶ್ವರ ದೇವಾಲಯಗಳ ಉತ್ಸವ ಸಮಿತಿಗಳು ಹೊರತುಪಡಿಸಿದಂತೆ ಇತರ ಎಲ್ಲ ಉತ್ಸವ ಸಮಿತಿಗಳು ಗೌರಿ ಗಣೇಶನ ಪ್ರತಿಷ್ಠಾಪನೆ ಮಾಡಿದ್ದರೂ ಹತ್ತು ದಿನಗಳವರೆಗೆ ಅಪರಾಹ್ನ ಹಾಗೂ ರಾತ್ರಿ ಪೂಜಾ ಸೇವೆಗಳು ಸಾಂಪ್ರದಾಯಿಕವಾಗಿ ನಡೆಯಲಿದ್ದು ದುಬಾರಿ ವೆಚ್ಚದ ಮನರಂಜನೆಗಳನ್ನು ಕೈ ಬಿಡಲಾಗಿದೆ. ಎಲ್ಲ ಉತ್ಸವ ಸಮಿತಿಗಳು ಅನಂತ ಪದ್ಮನಾಭ ವೃತ್ತದ ದಿನದಂದು ಗೌರಿ ಗಣೇಶನ ವಿಸರ್ಜನೋತ್ಸವದ ಸಾಮೂಹಿಕ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಮೆರವಣಿಗೆಯಲ್ಲಿ ಭಾಗವಹಿಸುವ ಅಧಿಕ ಉತ್ಸವ ಸಮಿತಿಗಳು ವಿದ್ಯುತ್ ಅಲಂಕೃತ ಪ್ರಭಾವಳಿ, ಮೆರವಣಿಗೆಯ ಇತರ ಎಲ್ಲ ಮನರಂಜನೆಗಳಿಗೂ ಕಡಿವಾಣ ಹಾಕಲಾಗಿದೆ.
ಕೊಡಗಿನ ಪ್ರಕೃತಿ ವಿಕೋಪದ ದುರಂತದ ಹಿನ್ನಲೆಯಲ್ಲಿ "ವೀರರಾಜೇಂದ್ರಪೇಟೆ ಗೌರಿ ಗಣೇಶ ನಾಡಹಬ್ಬದ ಒಕ್ಕೂಟ" ಈ ಹಿಂದೆ ತೀರ್ಮಾನಿಸಿದಂತೆ ಎಲ್ಲ ಉತ್ಸವ ಸಮಿತಿಗಳು ಗೌರಿ ಗಣೇಶನ ಉತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಿವೆ. ಉತ್ಸವ ಸಮಿತಿಗಳು ಉತ್ಸವವನ್ನು ಸರಳವಾಗಿ ಆಚರಿಸಿದರೂ ಪೊಲೀಸರು ಎಲ್ಲ ಪ್ರತಿಷ್ಠಾಪನೆ ಸ್ಥಳಗಳಲ್ಲು ಪೊಲೀಸ್ ಸೇರಿದಂತೆ ಹೋಮ್‍ಗಾರ್ಡ್‍ಗಳನ್ನು ಬಂದೋಬಸ್ತ್‍ಗಾಗಿ ನೇಮಿಸಲಾಗಿದೆ.
ಸೋಮವಾರಪೇಟೆ : ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ವಿವಿಧೆಡೆಗಳಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ದಿನಂಪ್ರತಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಉತ್ಸವ ಮೂರ್ತಿಗಳನ್ನು ತಾ. 16ರಂದು ಮೆರವಣಿಗೆ ಮೂಲಕ ಕೊಂಡೊಯ್ದು ವಿಸರ್ಜಿಸಲು ತೀರ್ಮಾನಿಸಲಾಗಿದ್ದು, ಅಂದೇ ಇತರ ಉತ್ಸವ ಮೂರ್ತಿಗಳ ವಿಸರ್ಜನೋತ್ಸವವೂ ನಡೆಯಲಿದೆ.
ಸಮೀಪದ ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘದ ವತಿಯಿಂದ ಸಮುದಾಯ ಭವನದಲ್ಲಿ, ಬಸವೇಶ್ವರ ಯುವಕ ಸಂಘದ ವತಿಯಿಂದ ತಣ್ಣೀರುಹಳ್ಳದ ಬಸ್ ನಿಲ್ದಾಣದಲ್ಲಿ, ಅಭಿಮಠ ಬಾಚಳ್ಳಿ, ಪಟ್ಟಣದ ಬಸವೇಶ್ವರ ರಸ್ತೆ, ಕಾನ್ವೆಂಟ್ ಬಾಣೆ, ಕಾರೇಕೊಪ್ಪದ ಗಣಪತಿ ದೇವಾಲಯದಲ್ಲಿ, ಯಡವನಾಡು ಸೇರಿದಂತೆ ಪಟ್ಟಣದ ವಿವಿಧ ದೇವಾಲಯಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವಂತೆ, ಪ.ಪಂ. ವ್ಯಾಪ್ತಿಯಲ್ಲಿ 8 ಹಾಗೂ ಗ್ರಾಮೀಣ ಭಾಗದಲ್ಲಿ 62 ಕಡೆಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಕ್ಲೋಸ್‍ಬರ್ನ್: ಕಡಗದಾಳು ಗ್ರಾಮದ ಕ್ಲೋಸ್‍ಬರ್ನ್‍ನ ಶ್ರೀ ವಿನಾಯಕ ದೇವಾಲಯದಲ್ಲಿ 34ನೇ ವರ್ಷದ ಗೌರಿ - ಗಣೇಶೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಬೆಳಿಗ್ಗೆ 11 ಗಂಟೆಗೆ ಗೌರಿ - ಗಣೇಶನನ್ನು ಪ್ರತಿಷ್ಠಾಪಿಸಿ ಸಂಜೆ 3.30 ಗಂಟೆಗೆ ಕಾಲ್ನಡಿಗೆಯಲ್ಲೇ ತೆರಳಿ ವಿಸರ್ಜಿಸಲಾಯಿತು. ಪ್ರತಿವರ್ಷ ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು. ಅತಿವೃಷ್ಟಿಯ ಕಾರಣದಿಂದ ಅತ್ಯಂತ ಸರಳವಾಗಿ ಆಚರಿಸಲಾಯಿತು. ಊರಿನವರು, ಭಕ್ತರೆಲ್ಲರೂ ದೇವರ ಆಶೀರ್ವಾದವನ್ನು ಪಡೆದು ಕೊಡಗಿನ ಎಲ್ಲಾ ಸಂತ್ರಸ್ತರ ಏಳಿಗೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕುಶಾಲನಗರ: ಗಣೇಶ ಚತುರ್ಥಿ ಹಬ್ಬವನ್ನು ಕುಶಾಲನಗರದ ವಿವಿಧೆಡೆ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ನಡೆಯದಿರುವದು ಕಂಡುಬಂತು.
ಕುಶಾಲನಗರ ಪಟ್ಟಣ ಸೇರಿದಂತೆ ನೆರೆಯ ಬೈಚನಹಳ್ಳಿ, ಮಾದಾಪಟ್ಟಣ, ಗುಡ್ಡೆಹೊಸೂರು, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ ವ್ಯಾಪ್ತಿಯಲ್ಲಿ ಗೌರಿ ಗಣೇಶೋತ್ಸವ ಆಚರಣೆ ಸಾಂಪ್ರದಾಯಿಕವಾಗಿ ನಡೆಯಿತು.
ಕಾವೇರಿ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ನಿರ್ಭಂದ ಹಾಕಲಾಗಿದ್ದು ನದಿ ಮಾಲಿನ್ಯ ತಡೆಗಟ್ಟಲು ಪೂರಕವಾಗಿ ಕುಶಾಲನಗರ ಪಟ್ಟಣ ಪಂಚಾಯ್ತಿ ಅನೂಕೂಲ ಕಲ್ಪಿಸಿದೆ. ನದಿ ತಟದಲ್ಲಿ ಬೃಹತ್ ಗುಂಡಿ ನಿರ್ಮಿಸಿ ಪ್ಲಾಸ್ಟಿಕ್ ಹೊದಿಕೆ ಅಳವಡಿಸಿ ನೀರು ತುಂಬಿ ವಿಸರ್ಜನೆಗೆ ಅನುವು ಮಾಡಿಕೊಡಲಾಗಿದೆ. ಕೆರೆ, ನದಿಗಳಿಗೆ ಗಣಪತಿ ವಿಗ್ರಹಗಳನ್ನು ವಿಸರ್ಜಿಸಿದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿರುವ ಪಪಂ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ನಿರ್ದಿಷ್ಟ ಜಾಗದಲ್ಲಿ ವಿಸರ್ಜಿಸುವಂತೆ ಕೋರಿದ್ದಾರೆ.