ಮಡಿಕೇರಿ, ಸೆ. 14: ಅತಿವೃಷ್ಟಿಯಿಂದ ಹಾನಿಗೊಳಗಾದ ಹೆಬ್ಬೆಟ್ಟಗೇರಿ, ದೇವಸ್ತೂರು, ತಂತಿಪಾಲ, ಕಾಲೂರು, ಕುಂದರಕೋಡಿ ಮತ್ತಿತರ ಗ್ರಾಮಗಳಿಗೆ ಕೇಂದ್ರ ತಂಡದ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು. ತಂಡವು ಹೆಬ್ಬೆಟ್ಟಗೇರಿಗೆ ಭೇsÀಟಿ ನೀಡಿದ ಸಂದರ್ಭ ಅದೇ ಊರಿನವರಾದ ಜಿಲ್ಲಾ ಬಿ.ಜೆ.ಪಿ.ಯ ಹಿರಿಯ ಮುಖಂಡ ಎಂ.ಬಿ. ದೇವಯ್ಯ ಅವರು ಸಂಸದ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡ ದೃಶ್ಯ ಎದುರಾಯಿತು. ಕೇಂದ್ರ ತಂಡಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ತಂಡಕ್ಕೆ ಭೂ ಪರಿವರ್ತನೆ ಬಗ್ಗೆ ಮಾಹಿತಿ ನೀಡುತ್ತಿದ್ದ ವೇಳೆ ನೀವು ನಮ್ಮ ಜನಪ್ರತಿನಿಧಿಗಳು ನಮ್ಮ ಪರ ಕೆಲಸ ಮಾಡಿ.

ನಿಮ್ಮನ್ನು ಗೆಲ್ಲಿಸಿದ್ದೆ ತಪ್ಪಾಯ್ತು. ಜನರು ಭೂ ಪರಿವರ್ತನೆ ಮಾಡ್ತಿದ್ದಾರೆ ಎಂಬ ಮಾಹಿತಿ ನೀಡುತ್ತಿರುವದು ತಪ್ಪು. ಇದರಿಂದ ಇಲ್ಲಿನ ಜನರಿಗೆ ಸಮಸ್ಯೆ ಸೃಷ್ಟಿಯಾಗುತ್ತದೆ. ತಪ್ಪು ಮಾಹಿತಿ ನೀಡಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸ್ತಿದ್ದೀರ ಬೆಂದ ಗಾಯಕ್ಕೆ ನೀವು ಉಪ್ಪು ನೀರು ಸುರೀತಿದೀರ ನಿಮ್ಮಂತಹವರಿಂದ ಪಕ್ಷ ಉದ್ಧಾರ ಆಗಲ್ಲ. ನೀವು ನಮ್ಮ ಪಕ್ಷದ ಎಂಪಿ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಬೇಕು. ಪಕ್ಷದಲ್ಲಿ ನನ್ ವಿರುದ್ಧ ಏನು ಕ್ರಮ ತಗೊಳ್ತಿರೋ ತಗೋಳ್ಳಿ ಎಂದು ಸ್ಥಳೀಯ ಶಾಸಕರ ಮುಂದೆಯೇ ಹೌಹಾರಿದರು. ಅವರನ್ನು ಸಮಾಧಾನಿಸಲು ನಡೆಸಿದ ಕೆಲವರ ಪ್ರಯತ್ನ ವಿಫಲವಾಯಿತು. ತೀವ್ರ ಮುಜುಗರಕ್ಕೀಡಾದ ಸಂಸದ ಪ್ರತಾಪ್ ಸಿಂಹ ಆ ಸಂದರ್ಭ ಮೌನವೇ ಮೇಲು ಎಂದು ಸುಮ್ಮನಾದರು.

ಸಂಸದರ ಪ್ರತಿಕ್ರಿಯೆ : ಆದರೆ, ಇಂದು ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನಲ್ಲಿ ಫೇಸ್ ಬುಕ್ ಲೈವ್‍ನ ಮೂಲಕ ತಮ್ಮ ತೀಕ್ಷ್ಣ ಪ್ರತಿಕ್ರಿಯೆಯನ್ನು ಹೀಗೆ ವ್ಯಕ್ತÀಪಡಿಸಿದರು.

ಮೈಸೂರಿನಲ್ಲಿ ನನ್ನ ಭಾಷಣಕ್ಕೆ ಅಡ್ಡಿಪಡಿಸಿದ ವ್ಯಕ್ತಿಗೆ ಹೊಡೆಯಲು ಹೇಳಿದ್ದೆ...!!! ಆತನಿಗೆ ನಾಲ್ಕು ತದಕಿದ ಮೇಲೆ ಮತ್ತೆ ಆತ ನನ್ನ ಭಾಷಣಕ್ಕೆ ಅಡ್ಡಿಪಡಿಸಲು ಮುಂದಾಗಲಿಲ್ಲ. ದಡ್ಡರಿಗೆ ದೊಣ್ಣೆ ಪೆಟ್ಟು ಅಂಥ ಹೇಳುತ್ತಾರೆ. ಎಷ್ಟು ಕೇಳಿದರೂ ಆತ ಉಪದ್ರ ನೀಡುತ್ತಿದ್ದ. ಆ ಸಂದರ್ಭದಲ್ಲಿ ಹೊಡೆಯಲು ಹೇಳಿದ್ದೆ. ಸಾರ್ವಜನಿಕ ಜೀವನದಲ್ಲಿ ಈ ರೀತಿ ನಮಗೆ ತೊಂದರೆ ಕೊಡುತ್ತಿರುತ್ತಾರೆ. ನಿನ್ನೆ ಕೊಡಗಿನ ಭೇಟಿ ವೇಳೆ ವ್ಯಕ್ತಿಯೊಬ್ಬ ಸುಮ್ಮನೆ ಕೂಗಾಡುತ್ತಿದ್ದ. ಅದನ್ನು ಮಾಧ್ಯಮಗಳಲ್ಲಿ ತೋರಿಸಿದ್ರು. ರೆಸಾರ್ಟ್ ಮಾಡಲು ನೂರಾರು ಎಕರೆ ‘ಕನ್ವರ್ಟ್’ ಮಾಡಿಸುತ್ತಾರೆ. ಈ ರೀತಿ ಕಳ್ಳ ರಾಜಕಾರಣಿಗಳು ಕನ್ವರ್ಷನ್ ಮಾಡುವ ಬಗ್ಗೆ ಹೇಳುತ್ತಿದ್ದೆ. ಈ ರೀತಿ ಕನ್ವರ್ಷನ್ ಮಾಡಲು ಅನುಮತಿ ಕೊಡಬೇಡಿ ಎಂದು ಮಾಹಿತಿ ಕೊಡುತ್ತಿದ್ದೆ.

ಆ ವೇಳೆ ಆತ ಹುಚ್ಚುಚ್ಚಾಗಿ ಕೂಗಾಡಿದ. ಈ ಹಿಂದೆಯೂ ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಇದೆ ವ್ಯಕ್ತಿ ಏನೇನೂ ಮಾತನಾಡಿದ್ದ. ಗೆದ್ದ ಮೇಲೆ ರಂಜನ್ ಅಣ್ಣ ಅಂಥ ಕೈ ಮುಗಿದಿದ್ದ. ಆತನ ವಯಸ್ಸಿಗೆ ಗೌರವ ಕೊಟ್ಟು ಮಾತನಾಡಲಿಲ್ಲ. ಈ ಸಣ್ಣ ವಿಚಾರವನ್ನು ಮಾಧ್ಯಮಗಳು ದೊಡ್ಡದಾಗಿ ತೋರಿಸಿದ್ರು.

ಈ ಹಿಂದೆ ಕೊಡಗಿನ ಗಂಜಿ ಕೇಂದ್ರಕ್ಕೆ ಬಿಎಸ್‍ವೈ ಭೇಟಿ ನೀಡಿದ ಸಂದರ್ಭ ಜನರು ಮಾಧ್ಯಮಗಳ ವಿರುದ್ಧ ಮಾತನಾಡಿದ್ರು. ಅದನ್ನು ಮಾಧ್ಯಮಗಳು ಏಕೆ ತೋರಿಸಲಿಲ್ಲ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.