ಕೂಡಿಗೆ, ಸೆ. 12: ಹೆಬ್ಬಾಲೆ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ಮಾರುಕಟ್ಟೆ ಆವರಣದಲ್ಲಿ ನಡೆಯಿತು.
ಮುಖ್ಯವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 8 ಕೆರೆಗಳಿದ್ದು, ಕೆರೆಗಳಿಗೆ ಹಾರಂಗಿ ಮುಖ್ಯ ನಾಲೆಯ ನೀರು ತುಂಬಿ ನೂರಾರು ಎಕರೆ ಪ್ರದೇಶಗಳ ಕೃಷಿ ಭೂಮಿಗಳಿಗೆ ಅನುಕೂಲವಾಗುತ್ತಿದೆ. ಹಾರಂಗಿ ನೀರಾವರಿ ಇಲಾಖೆಯವರು ಆ ಕೆರೆಗಳಲ್ಲಿ ಹೂಳನ್ನು ತೆಗೆಸಬೇಕು ಎಂದು ಗ್ರಾಮಸ್ಥರಾದ ಮಂಜುನಾಥ್, ಕುಮಾರ್, ಜವರಪ್ಪ, ಸಿದ್ದೇಶ ಒತ್ತಾಯಿಸಿದರು.
ನೀರಾವರಿ ಇಲಾಖೆಯ ಅಧಿಕಾರಿ ಇಂಜಿನಿಯರ್ ನಾಗರಾಜ್ ಮಾತನಾಡಿ, ಈ ಸಾಲಿನಲ್ಲಿ ಮಳೆ ಹಾನಿಯ ವಿಶೇಷ ಅನುದಾನದಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೆರೆಗಳ ಹೂಳೆತ್ತಲು ಮತ್ತು ಅಭಿವೃದ್ಧಿಗೆ ರೂ. 30 ಲಕ್ಷಗಳ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಉತ್ತರಿಸಿದರು.
ಮರೂರು ಗ್ರಾಮದ ರಸ್ತೆ ಕಾಮಗಾರಿ ಮಾಡದಿರುವ ಬಗ್ಗೆ ಸದಸ್ಯರನ್ನೊಳಗೊಂಡಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಕಳೆದ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ವತಿಯಿಂದ ನಡೆದ ರಸ್ತೆ ಕಾಮಗಾರಿ ತೀರಾ ಕಳಪೆಯಾಗಿದ್ದು, ಇವುಗಳನ್ನು ಸರಿಪಡಿಸುವಂತೆ ಮರೂರು ಗ್ರಾಮದ ಚಂದ್ರು, ಗಿರೀಶ್, ರಾಜಣ್ಣ, ಒತ್ತಾಯಿಸಿದರು.
ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಅನೇಕ ವಿದ್ಯುತ್ ಕಂಬಗಳ ನಿರ್ವಹಣೆ ಇಲ್ಲದೆ ಮಳೆ-ಗಾಳಿಗೆ ಬಾಗಿಕೊಂಡಿವೆ. ಅಲ್ಲದೆ, ಟ್ರಾನ್ಸ್‍ಫಾರಂನಲ್ಲಿ ಹೆಚ್ಚು ಲೋಡಿಲ್ಲದೆ ಸ್ಥಳೀಯರಿಗೆ ಆಗ್ಗಾಗ್ಗೆ ವಿದ್ಯುತ್‍ನ ಸಮಸ್ಯೆಯಾಗುತ್ತಿರುವ ಬಗ್ಗೆ ಸಭೆಯಲ್ಲಿ ಗ್ರಾಮಸ್ಥರು ಚರ್ಚೆ ನಡೆಸಿದರು.
ಸಂಬಂಧಪಟ್ಟ ಚೆಸ್ಕಾಂ ಅಧಿಕಾರಿ, ಅತಿಯಾದ ಮಳೆಯಿಂದಾಗಿ ಸಣ್ಣ ತೊಂದರೆಯಾಗಿದ್ದು, ನಮ್ಮ ಸಿಬ್ಬಂದಿ ವರ್ಗದವರು ಶ್ರಮವಹಿಸಿ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಆಗಿರುವ ಸಮಸ್ಯೆಗಳನ್ನು ಸದ್ಯದಲ್ಲೇ ಸರಿಪಡಿಸಲಾಗುವದು ಎಂದರು.
ಕೆಲವು ಗ್ರಾಮಸ್ಥರು ಬಿಪಿಎಲ್ ಕಾರ್ಡುದಾರರಿಗೆ ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ವಿದ್ಯುತ್ ಅನ್ನು ಮನೆಗಳಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು. ಈಗಾಗಲೇ 14ನೇ ಹಣಕಾಸಿನ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯಿತಿ ಮುಂದಾದರೂ ಈ ಕಾಮಗಾರಿಗಳ ಹಣಕ್ಕೂ ಜಿಎಸ್‍ಟಿ ಸೇರ್ಪಡೆಗೊಳ್ಳುವದರಿಂದ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಹಳೆಗೋಟೆ, 6ನೇ ಹೊಸಕೋಟೆ ಮರೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ಬೆಳೆ ನಷ್ಟವಾಗಿ ರೈತರು ಅರಣ್ಯ ಇಲಾಖೆಯವರಿಗೆ ದೂರು ನೀಡಿ, ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಪರಿಹಾರ ಬಂದಿಲ್ಲ. ಪರಿಹಾರಕ್ಕಾಗಿ ಅಲೆದು ಅಲೆದು ಸಾಕಾಗಿದೆ ಎಂದು ಕುಮಾರ, ಸಿದ್ದಸ್ವಾಮಿ, ಜಯಣ್ಣ ದೂರಿದರು.
ಅಂಗವಿಕಲರಾಗಿರುವ ಜಯಮ್ಮ ಅವರ ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ಕಂದಾಯ ಇಲಾಖೆಯಿಂದ ಆದಾಯ ದೃಢೀಕರಣ ಮತ್ತು ಜಾತಿ ದೃಢೀಕರಣ ಪತ್ರ ನೀಡುವಂತೆ ಕಂದಾಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.
ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿದ್ದಲ್ಲಿ ನಾಮಧಾರಿ ಜನಾಂಗದ ಜಾತಿ ದೃಢೀಕರಣ ಪತ್ರವನ್ನು ನೀಡಲಾಗುವದು ಎಂದು ಗ್ರಾಮಲೆಕ್ಕಿಗ ಗುರುದರ್ಶನ್ ತಿಳಿಸಿದರು. ಇದೀಗ ಇಲಾಖೆಯವರು ತಡೆಗೋಡೆಯನ್ನು ಮುಚ್ಚಿರುವದು ಸರಿಯಾದ ಕ್ರಮವಲ್ಲ. ಅಲ್ಲದೆ ಚಿಕ್ಕ ಜಾಗವು ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರು ಬಸ್ ನಿಲ್ದಾಣಕ್ಕೆ ತೆರಳಲು ಹತ್ತಿರದ ದಾರಿಯಾಗಿರುವದರಿಂದ ಮಾರುಕಟ್ಟೆ ಸಮೀಪವಿರುವ ಕೆಎಸ್‍ಆರ್‍ಟಿಸಿ ಹಿಂಭಾಗದ ತಡೆಗೋಡೆಯನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಉದ್ಯೋಗ ಖಾತರಿ ಯೋಜನೆ, ಜಿಲ್ಲಾ ಪಂಚಾಯಿತಿ ಅನುದಾನ ಮತ್ತು ವಿಶೇಷ ಅನುದಾನಗಳಿಂದ ಮುಂದಿನ ಗ್ರಾಮಸಭೆಯೊಳಗೆ ದೊಡ್ಡಕೆರೆ, ವಿವಿಧ ಗ್ರಾಮ ಸಂಪರ್ಕ ರಸ್ತೆಗಳ ಕಾಮಗಾರಿಗಳನ್ನು ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಾತನಾಡಿ, ಈಗಾಗಲೇ ಮಾಸಿಕ ಸಭೆಯಲ್ಲಿ ಅನೇಕ ಕ್ರಿಯಾಯೋಜನೆಗಳನ್ನು ತಯಾರಿಸಲಾಗಿದ್ದು, ಹಂತ ಹಂತವಾಗಿ ಆಯಾ ವಾರ್ಡಿನ ಆಧ್ಯತೆಯ ಮೇಲೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವದು. ಅಲ್ಲದೆ, ಮೂಲಭೂತ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಕಾದಿರಿಸಿ, ಕಾರ್ಯೋನ್ಮುಖರಾಗಿರುತ್ತೇವೆ ಎಂದರು.
ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಮಾಧವರಾವ್ ಇದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಅವರು, ಸಭೆಗೆ ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ವಿವರಿಸಿದರು. ಅಲ್ಲದೆ, ಗ್ರಾಮಸ್ಥರು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ತಮ್ಮ ತಮ್ಮ ವಾರ್ಡಿನ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರೈಸಿಕೊಳ್ಳಲು ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಕೋರಿದರು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮ, ಸರ್ವ ಸದಸ್ಯರು ಇದ್ದರು.