ಪ್ರೊ. ಪಟ್ಟಡ ಪೂವಣ್ಣ
ಮೂರ್ನಾಡು, ಸೆ. 14: ಕೊಡಗಿನಲ್ಲಿನ ಪ್ರತಿಯೊಬ್ಬ ಮಗುವಿನಲ್ಲಿ ಪ್ರತಿಭೆ ಇದೆ. ಅದನ್ನು ಗುರುತಿಸಿ ಹೊರಹೊಮ್ಮಿಸುವ ಪ್ರಯತ್ನವಾಗಬೇಕು ಎಂದು ಮೂರ್ನಾಡು ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ಸಂಘ ಮತ್ತು ಪೋಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಏಷ್ಯಾಡ್ ಗೇಮ್ಸ್‍ನಲ್ಲಿ ಸಣ್ಣ ಜಿಲ್ಲೆಯಾದ ಕೊಡಗಿನ 7 ಕ್ರೀಡಾಪಟುಗಳು ಭಾಗವಹಿಸಿದ್ದು ದೊಡ್ಡ ಸಾಧನೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಿದರೆ ಆ ಮಕ್ಕಳು ತನ್ನಿಂದತಾನೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳುತ್ತಾರೆ. ಈಗಿನ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನದ ಕಡೆ ಒಲವು ಕಡಿಮೆಯಿದ್ದು, ಪೋಷಕರು ಇದರ ಬಗ್ಗೆ ಮುತುವರ್ಜಿ ವಹಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ ಮಾತನಾಡಿ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿದ್ಯಾಸಂಸ್ಥೆಯಲ್ಲಿ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಇಲ್ಲಿ ವ್ಯಾಪಾರೀಕರಣವಿಲ್ಲದೆ, ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸರ್ವಪ್ರಯತ್ನಗಳು ಆಡಳಿತ ಮಂಡಳಿಯ ವತಿಯಿಂದ ಆಗುತ್ತಿದೆ. ಇದಕ್ಕೆ ಪೋಷಕರು ಕೈ ಜೋಡಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ಸಂಘದ ನಾಯಕನಾಗಿ ಕವನ್ ಕಾಳಯ್ಯ, ಹೆಚ್.ಎಸ್. ಸಹನ (ಉಪನಾಯಕಿ), ಚಿಂತನ್ ನಾಣಯ್ಯ (ಕ್ರೀಡಾ ನಾಯಕ), ಎ.ಎನ್. ಪ್ರಜ್ಞಾ (ಸಾಂಸ್ಕøತಿಕ ನಾಯಕಿ)ಯಾಗಿ ಆಯ್ಕೆಯಾಗಿದ್ದಾರೆ. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಶೃತಿ ಕಾರ್ಯಕ್ರಮ ನಿರೂಪಿಸಿ, ಎಸ್.ಡಿ. ಪ್ರಶಾಂತ್ ಪ್ರಾಸ್ತಾವಿಕ ನುಡಿದರು. ರೇಷ್ಮ ಸ್ವಾಗತಿಸಿ, ನಿಶಿತ ವಂದಿಸಿದರು.