ಮಡಿಕೇರಿ, ಸೆ. 14: ಒಡಹುಟ್ಟಿದವರ ಪ್ರೀತಿ - ವಾತ್ಸಲ್ಯ, ಮಮಕಾರ ಹತ್ತು ಹಲವು ಬಗೆಯಲ್ಲಿರುತ್ತದೆ. ಪರಸ್ಪರ ಬಾಂಧವ್ಯ ಹಚ್ಚಿಕೊಳ್ಳಲು ಕೆಲವರು ಅವರವರ ಹುಟ್ಟು ಹಬ್ಬ ಮತ್ತಿತರ ಘಟನಾವಳಿಗಳ ಸವಿನೆನಪಿಗಾಗಿ ‘ಗಿಫ್ಟ್’ಗಳನ್ನು ಕೊಡುವದು ಸಹಜ. ಇದು ಉಡುಗೆ - ತೊಡುಗೆಗಳ ಮೂಲಕವಾಗಲಿ, ಹಣಕಾಸಿನ ಮೂಲಕವಾಗಲಿ, ಚಿನ್ನಾಭರಣಗಳ ಮೂಲಕವಾಗಲಿ ವಿವಿಧ ರೂಪದಲ್ಲಿರುತ್ತವೆ. ಆದರೆ ಇಲ್ಲೊಬ್ಬಳು ಅಕ್ಕ ತನ್ನ ತಂಗಿಯ ಹುಟ್ಟು ಹಬ್ಬಕ್ಕಾಗಿ ವಿಶೇಷ ರೀತಿಯ ಉಡುಗೊರೆಯೊಂದನ್ನು ನೀಡಿ ವಿಶೇಷತೆ ತೋರಿದ್ದಾಳೆ. ಇದು ಅಂತಿಂತಹ ‘ಗಿಫ್ಟ್’ ಅಲ್ಲ ಆಕಾಶಕಾಯದಲ್ಲಿನ ಮಿನುಗುವ ನಕ್ಷತ್ರವೊಂದಕ್ಕೆ ನಾಸಾದ ಸಹಾಯದಿಂದ ತಂಗಿಯ ಹೆಸರನ್ನು ಇಡುವಂತೆ ಮಾಡುವಲ್ಲಿ ಪ್ರಯತ್ನ ತೋರಿ ಇದರಲ್ಲಿ ಸಫಲತೆ ಕಂಡಿದ್ದಾಳೆ. ಮಡಿಕೇರಿಯ ನಿವಾಸಿ ಬೊಪ್ಪಂಡ ಶ್ಯಾಮ್ ಪೂಣಚ್ಚ ಹಾಗೂ ರತ್ನ ದಂಪತಿಗೆ ಇಬ್ಬರು ಪುತ್ರಿಯರು. ಹಿರಿಯಾಕೆ ಪುಣ್ಯ ಪೂಣಚ್ಚ. ಈಕೆಯ ತಂಗಿ ಜನಿಸಿದ್ದು, ಜೂನ್ 10 ರಂದು ಈ ಹಿನ್ನೆಲೆಯಲ್ಲಿ ಪೋಷಕರು ಆಕೆಗೆ ದಶಮಿ ಎಂದು ನಾಮಕರಣ ಮಾಡಿದ್ದರು.

ಈ ದಶಮಿಗೆ ಹದಿನೆಂಟನೇ ಹುಟ್ಟುಹಬ್ಬಕ್ಕೆ ವಿಶಿಷ್ಟವಾದ ಉಡುಗೊರೆ ನೀಡುವ ಕನಸು ಕಂಡ ಅಕ್ಕ ಪುಣ್ಯಪೂಣಚ್ಚ ಇದಕ್ಕಾಗಿ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಎಡ್‍ಮಿನಿಸ್ಟ್ರೇಷನ್ (ನಾಸಾ)ವನ್ನು ಸಂಪರ್ಕಿಸಿದಳು. ಖಗೋಳದಲ್ಲಿನ ತಾರಾಮಂಡಲದಲ್ಲಿರುವ ಜೆಮಿನಿ ನಕ್ಷತ್ರ ರಾಶಿಯಲ್ಲಿ ನಕ್ಷತ್ರವೊಂದಕ್ಕೆ ತಂಗಿ ದಶಮಿಯ ಹೆಸರಿಡುವಂತೆ ಮನವಿ ಸಲ್ಲಿಸಿದ್ದಳು. ಈ ಮನವಿಯನ್ನು ಪುರಸ್ಕರಿಸಿದ ನಾಸಾ ಜೆಮಿನಿ ನಕ್ಷತ್ರ ರಾಶಿಯಲ್ಲಿ (ಅoಟಿsಣeಟಟಚಿಣioಟಿ) ಒಂದು ನಕ್ಷತ್ರಕ್ಕೆ ‘ದಶಮಿ’ ಎಂದು ನಾಮಕರಣ ಮಾಡಿ ಈ ಕುರಿತ ಅಧಿಕೃತ ದೃಢೀಕರಣ ಪತ್ರವನ್ನು ಕಳುಹಿಸಿಕೊಟ್ಟಿದೆ.

ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಪುಣ್ಯ, ಹೂವು, ಬಟ್ಟೆ, ಆಭರಣ ಇತ್ಯಾದಿ ಉಡುಗೊರೆ ನೀಡುವದು ಸಹಜ. ತನಗೆ ವಿಶೇಷವಾಗಿ ಏನನ್ನಾದರೂ ನೀಡಬೇಕೆಂಬ ಬಯಕೆ ಇತ್ತು. ಇದರಂತೆ ಪ್ರಯತ್ನಿಸುತ್ತಿದ್ದಾಗ ಇನ್‍ಸ್ಟ್ರಾಗ್ರಾಂ ಹಾಗೂ ಇಂಟರ್‍ನೆಟ್‍ನಲ್ಲಿ ಈ ಬಗ್ಗೆ ಮಾಹಿತಿ ದೊರೆಯಿತು. ಇದರಂತೆ ಮುಂದುವರಿದಿದ್ದು, ನಾಸಾ ತನ್ನ ಬೇಡಿಕೆಯನ್ನು ಪರಿಗಣಿಸಿತು. ಇದಕ್ಕೆ ಅವರ ನಿಯಮದಂತೆ 48 ಡಾಲರ್ ಹಣವನ್ನು ಪಾವತಿಸಿದ್ದು, ಬಳಿಕ ನಕ್ಷತ್ರವೊಂದಕ್ಕೆ ತಂಗಿಯ ಹೆಸರಾದ ‘ದಶಮಿ’ ಎಂದು ನಾಮಕರಣ ಮಾಡಿ ಈ ಕುರಿತ ಸರ್ಟಿಫಿಕೇಟ್ ಅನ್ನು ಕಳುಹಿಸಿಕೊಟ್ಟಿತು. ಇದನ್ನು ಹುಟ್ಟುಹಬ್ಬ ದಂದು ವಿಶೇಷ ಉಡುಗೊರೆಯಾಗಿ ನೀಡಲು ಅಪಾರ ಸಂತೋಷವಾಯಿತು ಎಂದು ನುಡಿದಳು. ದಶಮಿ ಪ್ರಸ್ತುತ ‘ಸ್ಪೀಕ್ ಅಂಡ್ ಹಿಯರಿಂಗ್’ನಲ್ಲಿ ಡಿಗ್ರಿ ಮಾಡುತ್ತಿದ್ದಾಳೆ. ಸಾಮಾನ್ಯವಾಗಿ ಮಕ್ಕಳಿಗೆ ನಕ್ಷತ್ರದ ಹೆಸರು ಇಡಲಾಗುತ್ತದೆ. ಆದರೆ ಹಿರಿಯ ಪುತ್ರಿಯ ಅಭಿಲಾಷೆಯಂತೆ ನಕ್ಷತ್ರವೊಂದಕ್ಕೆ ಮಗಳಿಗೆ ಇಟ್ಟಿದ್ದ ಹೆಸರನ್ನು ನಾಮಕರಣ ಮಾಡಿರುವ ಈ ವಿಶೇಷತೆ ಹಾಗೂ ಇಂತಹ ಅವಕಾಶವೊಂದು ಇರುವದು ಸಂತಸ ತಂದಿದೆ ಎಂದು ತಂದೆ ಶ್ಯಾಮ್ ಪೂಣಚ್ಚ ಹೇಳುತ್ತಾರೆ. ನಾಸಾದ ವೆಬ್‍ಸೈಟ್ ತಿತಿತಿ.sಣಚಿಡಿಚಿಛಿಟe.ಛಿom//1911008501 ನಲ್ಲಿ ಈ ಮಾಹಿತಿ ಸಿಗಲಿದೆ.

- ಶಶಿ