ಮಡಿಕೇರಿ, ಸೆ. 14: ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಹೆಬ್ಬೆಟ್ಟಗೇರಿ ಹಾಗೂ ಇತರೆಡೆಗೆ ಸಂತ್ರಸ್ತರೊಂದಿಗೆ, ಗಾಳಿಬೀಡು ಗ್ರಾ.ಪಂ. ಸರಹದ್ದಿನ ಕಾಲೂರು, ನಿಡುವಟ್ಟು, ಬಾರಿಬೆಳ್ಳಚ್ಚು ಮತ್ತು ಮೊಣ್ಣಂಗೇರಿ ವ್ಯಾಪ್ತಿಯ ಸಂತ್ರಸ್ತರ ಅಹವಾಲುಗಳನ್ನು ಪ್ರತ್ಯೇಕ ಸಭೆಗಳಲ್ಲಿ ಆಲಿಸಿದ ಜನಪ್ರತಿನಿಧಿಗಳು, ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆದುಕೊಂಡವರಿಗೆ ಬದಲಿ ಮನೆ ಮತ್ತು ಜಾಗ ಕಳೆದುಕೊಂಡಿರುವವರಿಗೆ ಬದಲಿ ನೆಲೆಯ ಆಶ್ವಾಸನೆ ನೀಡಿದರು.

ಇಂದು ಬೆಳಿಗ್ಗೆ ಕೆ. ನಿಡುಗಣೆಯ ಗ್ರಾ.ಪಂ. ವ್ಯಾಪ್ತಿಯ ಜನತೆಯ ಸಭೆಯು, ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮಡಿಕೇರಿ ಕ್ಷೇತ್ರದ ಶಾಸಕರಾದಿಯಾಗಿ ಇತರ ಜನಪ್ರತಿನಿಧಿಗಳ ಸಮ್ಮುಖ ಸಂತ್ರಸ್ತರು ತಮ್ಮ ಬೇಕು ಬೇಡಿಕೆಗಳನ್ನು ಸಭೆಯಲ್ಲಿ ವಿವರಿಸಿದರು.ಜನತೆಯ ಸಂಕಷ್ಟಕ್ಕೆ ಸ್ಪಂದಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಒಳಗಾಗಿರುವ ಕೆ. ನಿಡುಗಣೆ, ಗಾಳಿಬೀಡು, ಮಕ್ಕಂದೂರು, ಮದೆ, ಮಾದಾಪುರ ಹಾಗೂ ಗರ್ವಾಲೆ, ಶಾಂತಳ್ಳಿ, ಸಂಪಾಜೆ ವ್ಯಾಪ್ತಿಯ ಸಂತ್ರಸ್ತರ ಕುಟುಂಬಗಳಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ವಾಸಕ್ಕೆ ಯೋಗ್ಯ ಮನೆ, ಜಾಗ ಕಳೆದುಕೊಂಡಿದ್ದರೆ ಸರಕಾರದಿಂದ ಬದಲಿ ಜಾಗ, ಸಂತ್ರಸ್ತರ ಮಕ್ಕಳಿಗೆ ಶಿಕ್ಷಣಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ನೆಲೆಯಲ್ಲಿ ಪ್ರಯತ್ನಿಸಲಾಗುವದು ಎಂದರು.

ಗ್ರಾಮದ ಹಿರಿಯರಾದ ಎಂ.ಬಿ. ಪೊನ್ನಪ್ಪ, ಎಂ.ಬಿ. ದೇವಯ್ಯ ಸೇರಿದಂತೆ ಸಂತ್ರಸ್ತರು ಜನಪ್ರತಿನಿಧಿಗಳ ಮುಂದೆ ತಮ್ಮ ಬೇಕು ಬೇಡಿಕೆಗಳೊಂದಿಗೆ, ಸಾಲ ಮನ್ನಾಗೊಳಿಸಲು ಹಾಗೂ ಮುಂದಿನ 5 ವರ್ಷ ತನಕ ಮರು ಸಾಲಕ್ಕೆ ಬಡ್ಡಿ ವಿಧಿಸಬಾರದೆಂದು ಒತ್ತಾಯಿಸಿದರು. ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ, ತಾ.ಪಂ. ಸದಸ್ಯ ರಾಯ್ ತಮ್ಮಯ್ಯ, ಗ್ರಾ.ಪಂ. ಉಪಾಧ್ಯಕ್ಷೆ ಜಾಜಿ ಸತೀಶ್, ಸದಸ್ಯರುಗಳಾದ ಡೀನ್ ಬೋಪಣ್ಣ, ಕೊಕ್ಕಲೇರ ಅಯ್ಯಪ್ಪ, ತಾ.ಪಂ. ಅಧಿಕಾರಿ ಲಕ್ಷ್ಮೀ, ಗ್ರಾ.ಪಂ. ಅಧಿಕಾರಿ ದೇವಯ್ಯ ಸೇರಿದಂತೆ ಜನಪ್ರತಿನಿಧಿಗಳ ಸಹಿತ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

ನೆರವು : ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಚೆಕ್‍ಗಳನ್ನು ವಿತರಿಸಲಾಯಿತು ಅಲ್ಲದೆ, ಗ್ರಾ.ಪಂ. ಮುಖಾಂತರ ಆಹಾರಕಿಟ್, ಸೀಮೆಎಣ್ಣೆ ಇತ್ಯಾದಿ ಮೂಲಭೂತ ಸೌಲಭ್ಯ ಕಲ್ಪಿಸುವದ ರೊಂದಿಗೆ, ಹಾನಿಗೊಂಡ ಮನೆಗಳು, ಭಾಗಶಃ ಹಾನಿ ಇತ್ಯಾದಿ ವರದಿ ಪಡೆಯಲಾಯಿತು. ಗ್ರಾ.ಪಂ. ವ್ಯಾಪ್ತಿಯ ಮೃತ ಉಮ್ಮವ್ವ ಹಾಗೂ ಚಂದ್ರ ಅವರುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮೊಣ್ಣಂಗೇರಿ ಸಭೆ : ಮೊಣ್ಣಂಗೇರಿಯ ಸಂತ್ರಸ್ತರ ಸಭೆಯನ್ನು ನಗರದ ಬಾಲಭವನದಲ್ಲಿ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ, ಉಪವಿಭಾಗಾಧಿಕಾರಿ ನಂಜುಂಡೇಗೌಡ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಸೇರಿದಂತೆ ಇತರ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿ ಅಹವಾಲು ಆಲಿಸಿದರು.

ಗ್ರಾ.ಪಂ. ಸದಸ್ಯ ಎ.ಪಿ. ಧನಂಜಯ್ 2ನೇ ಮೊಣ್ಣಂಗೇರಿ ಹಾಗೂ ಇತರೆಡೆಯ ಸಂತ್ರಸ್ತರ ಬೇಕು ಬೇಡಿಕೆಗಳ ಬಗ್ಗೆ ಗಮನ ಸೆಳೆದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂತ್ರಸ್ತರಿಗೆ ವಸತಿಯೊಂದಿಗೆ ಸರಕಾರದಿಂದ ಸೂಕ್ತ ಪರಿಹಾರ, ಮಕ್ಕಳಿಗೆ ಶಿಕ್ಷಣ, ರೋಗ ನಿವಾರಣೆಗೆ ಔಷದೋಪಚಾರ, ನಿತ್ಯೋಪಯೋಗಿ ಸವಲತ್ತು ಸೇರಿದಂತೆ ಹಂತ ಹಂತವಾಗಿ ನೆಮ್ಮದಿಯ ಬದುಕಿಗೆ ಎಲ್ಲ ನೆರವು ಕಲ್ಪಿಸಿಕೊಡಲಾಗುವದು ಎಂದು ಭರವಸೆ ನೀಡಿದರು.

ಸಾಲ ಪಾವತಿಸದಂತೆ ಸಲಹೆ : ಸಂಘ ಸಂಸ್ಥೆಗಳಿಂದ ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳ ಮಹಿಳೆಯರು ಪಡೆದಿರುವ ಸಾಲ ಕಟ್ಟದಂತೆ ತಿಳಿ ಹೇಳಿದ ಜನಪ್ರತಿನಿಧಿಗಳು, ಈಗಿನ ಪರಿಸ್ಥಿತಿಯಲ್ಲಿ ಸಾಲಕ್ಕೆ ಪೀಡಿಸಿದರೆ ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿ ಮೂಲಕ ದೂರು ಸಲ್ಲಿಸುವಂತೆ ಮಾರ್ನುಡಿದರು.

ಕಾಲೂರು ಸಭೆ : ಕಾಲೂರು ಸುತ್ತಮುತ್ತಲಿನ ಸಂತ್ರಸ್ತರ ಸಭೆಯನ್ನು ಪ್ರತ್ಯೇಕ ನಡೆಸಲಾಯಿತು. ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಹಾನಿ ಬಗ್ಗೆ ಅನೇಕರು ತೀವ್ರ ಅಸಮಾಧಾನದೊಂದಿಗೆ ಸರಕಾರದಿಂದ ಇನ್ನು ಪರಿಹಾರ ಲಭಿಸಿಲ್ಲವೆಂದು ಅಳಲು ತೋಡಿಕೊಂಡರು. ಈ ವೇಳೆ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ

(ಮೊದಲ ಪುಟದಿಂದ) ಸುಭಾಷ್ ಸೋಮಯ್ಯ ಮತ್ತು ಕೆಲವರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಮಧ್ಯೆ ಪ್ರವೇಶಿಸಿದ ಶಾಸಕ ಕೆ.ಜಿ. ಬೋಪಯ್ಯ, ಗ್ರಾಮಸ್ಥರೆಡೆಗೆ ಮಾತಿನ ಚಾಟಿ ಬೀಸುತ್ತಾ, ಪ್ರಾಕೃತಿಕ ವಿಕೋಪದಿಂದ ತೊಂದರೆ ಸಿಲುಕಿರುವ ಬಗ್ಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಅಭಿಪ್ರಾಯ ನೀಡುವಂತೆ ತಿಳಿಹೇಳಿದರು. ಹೇಗಿದ್ದ ಕಾಲೂರು ಇಂದು ಯಾವ ರೀತಿ ಅಭಿವೃದ್ಧಿಯತ್ತ ಸಾಗುತ್ತಿತ್ತು ಎಂದು ನೆನಪಿಸುತ್ತಾ, ಪ್ರಾಕೃತಿಕ ಅನಾಹುತದಿಂದ ಬದುಕು ಹತ್ತಿಪ್ಪತ್ತು ವರ್ಷ ಹಿಂದೆ ಸರಿಯುವಂತಾಗಿದೆ ಎಂದು ವಿಷಾದಿಸಿದರು.

ದನ ಮಾರಾಟ ಆಕ್ರೋಶ: ಗ್ರಾಮಸ್ಥರು ತಾವು ಸಾಕಿದ ದನಗಳನ್ನು ಕಟುಕರಿಗೆ ಮಾರಾಟಗೊಳಿಸುವದು ಸೇರಿದಂತೆ, ಕೆಲವರ ಚಿತಾವಣೆಯಿಂದ ಗ್ರಾಮ ತೊರೆಯುವ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ಹೊರಗೆಡವಿದರಲ್ಲದೆ, ಕೊಡಗಿನಲ್ಲಿ ಹುಟ್ಟಿ ಬೆಳೆದು ಇಲ್ಲಿನ ಜೀವನ ಪದ್ಧತಿ, ಪರಂಪರೆ, ಆಚಾರ - ವಿಚಾರಗಳೊಂದಿಗೆ ಸಂಸ್ಕøತಿಯನ್ನು ಬಿಟ್ಟು ಅಥವಾ ನಮ್ಮ ದನಗಳನ್ನು ಸಾಕಲಾರದೆ ಮಾರಿ ಬದುಕುವ ಯಾವ ಅವಶ್ಯಕತೆಯೂ ಇಲ್ಲವೆಂದು ತೀಕ್ಷ್ಣ ನುಡಿಯಾಡಿದರು.

ಜನ ಪ್ರಾಣರಕ್ಷಣೆ ಆಗಿದೆ : ಇಂದಿನ ಸಭೆಯಲ್ಲಿ ಕಾಲೂರು ಸುತ್ತಮುತ್ತಲಿನ ಗ್ರಾಮಸ್ಥರ ಅಸಮಾಧಾನದಿಂದ, ಮಧ್ಯೆಪ್ರವೇಶಿಸಿದ ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿಲ್ಲೆಯ ಜನಪ್ರತಿನಿಧಿಗಳಾದ ಶಾಸಕರು, ಮೇಲ್ಮನೆ ಸದಸ್ಯರು, ಎಲ್ಲ ಸ್ತರದ ಪ್ರಮುಖರೊಂದಿಗೆ ಅಧಿಕಾರಿ ವರ್ಗ ಜನರ ಪ್ರಾಣ ರಕ್ಷಣೆಗೆ ಶ್ರಮಿಸಿದ ಬಗ್ಗೆ ನೆನಪಿಸಿದರು. ದೇವರ ಶಾಪವೆಂಬಂತೆ ಎದುರಾದ ಭೂಕುಸಿತದಿಂದ ರಸ್ತೆ, ವಿದ್ಯುತ್, ಮೂಲಸೌಲಭ್ಯ ಕಳೆದುಕೊಂಡು ತಾನು ಕೂಡ ಕಷ್ಟಕ್ಕೆ ಸಿಲುಕಿದ್ದನ್ನು ಮೆಲುಕು ಹಾಕಿದ ಅವರು, ಈ ಸಭೆಯಲ್ಲಿ ಆರೋಗ್ಯಕರ ಚರ್ಚೆ ನಡೆಯಲಿ ಎಂದು ತಿಳಿ ಹೇಳಿದರು.

ನೀರಿಗೂ ಬರ : ಗ್ರಾಮಸ್ಥ ರಾಜ ಎಂಬವರು ಮನೆ ಹಾನಿಗೆ ಪರಿಹಾರ ಲಭಿಸಿಲ್ಲವೆಂದರೆ, ವಾಸು ಕುಡಿಯುವ ನೀರಿಗೂ ಬರ ಬಂದಿದೆ ಎಂದು ಮೇಜಿನ ಮೇಲಿದ್ದ ನೀರಿನ ಬಾಟಲಿ ಹಿಡಿದು ಅಸಮಾಧಾನ ತೋಡಿಕೊಂಡರು. ಜ್ಯೋತಿ ಎಂಬ ಮಹಿಳೆ ನೀರಿನ ಪೈಪ್‍ಗಾಗಿ ಬೇಡಿಕೆ ಮಂಡಿಸಿದರು. ಇನ್ನು ಕೆಲವರು ಸೀಮೆಎಣ್ಣೆ ದೊರಕಿಲ್ಲವೆಂದರೆ, ಎಪಿಎಲ್, ಬಿಪಿಎಲ್ ತಾರತಮ್ಯವಿಲ್ಲದೆ ಎಲ್ಲ ಗ್ರಾಮಸ್ಥರಿಗೆ ಈಗಿನ ಪರಿಸ್ಥಿತಿಯಲ್ಲಿ ಅಕ್ಕಿ, ಸೀಮೆಎಣ್ಣೆ ಸೇರಿದಂತೆ ಮನೆಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಪೂರ್ವಕ ಬೇಡಿಕೆ ಮಂಡಿಸಿದರು.

ಒಗ್ಗಟ್ಟಿಗೆ ಕರೆ : ಕಾಲೂರು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಕಷ್ಟ ಕಾಲದಲ್ಲಿ ಎಲ್ಲರೂ ಒಗ್ಗಟ್ಟು ಕಾಯ್ದುಕೊಂಡು, ಪರಿಸ್ಥಿತಿಯನ್ನು ಸವಾಲಾಗಿ ಎದುರಿಸುವಂತೆ ತಿಳಿ ಹೇಳಿದರು. ಆಗಸ್ಟ್ 16 ಹಾಗೂ 17 ರಂದು ಎದುರಾದ ಮಳೆಯ ತೀವ್ರತೆಯ ಪರಿಣಾಮವನ್ನು ನೆನಪಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಬದುಕು ಕಂಡುಕೊಳ್ಳುವಂತೆ ಸಲಹೆಯಿತ್ತರು.

1400 ಕೋಟಿ ರೂ. ಸಾಲ: ಕೊಡಗು ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಒಟ್ಟು 1400 ಕೋಟಿ ಸಾಲವಿದ್ದು, ಜಿಲ್ಲೆಯ ಸಂಕಷ್ಟದ ಹಿನ್ನೆಲೆ ಸಾಲವನ್ನು ಈಗಿನ ಪರಿಸ್ಥಿತಿಯಲ್ಲಿ ವಸೂಲು ಮಾಡಬಾರದೆಂದು ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಸರಕಾರದ ಗಮನ ಸೆಳೆಯಲಾಗವದು ಎಂದರು. ಈ ವೇಳೆ ಕೊಡಗಿನ ಜನತೆ ತಾಳ್ಮೆಯಿಂದ ಸರಕಾರದ ಪರಿಹಾರ ಕಂಡುಕೊಳ್ಳಲು ಮುಂದಾಗುವಂತೆ ಮಾರ್ನುಡಿದರು.

ಸಭೆಯಲ್ಲಿ ಕ್ಷೇತ್ರದ ಜಿ.ಪಂ., ತಾ.ಪಂ., ಗ್ರಾ.ಪಂ. ಪ್ರತಿನಿಧಿಗಳೊಂದಿಗೆ ವಿವಿಧ ಇಲಾಖಾ ಅಧಿಕಾರಿಗಳು, ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು. ನಾಗೇಶ್ ಕಾಲೂರು ಪ್ರಾಕೃತಿಕ ವಿಕೋಪ ಎದುರಾಗಲು ತಜ್ಞರು ನೀಡಿರುವ ಅಭಿಪ್ರಾಯಗಳನ್ನು ಉಲ್ಲೇಖಿಸುತ್ತಾ, ಭೂಗರ್ಭ ತಜ್ಞರಿಂದ ಶೋಧ ನಡೆಸುವಂತೆ ಬೇಡಿಕೆಯಿತ್ತರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಸಹಿತ ಕಂದಾಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂತ್ರಸ್ತರ ಅಂಕಿ ಅಂಶ ನೀಡಿದರು.