ಮಡಿಕೇರಿ, ಸೆ. 12: ಇಡೀ ದೇಶ ಗೌರಿ ಗಣೇಶ ಹಬ್ಬದ ಸಂಬ್ರಮ ದಲ್ಲಿದ್ದರೆ, ಪ್ರಾಕೃತಿಕ ವಿಕೋಪದಿಂದ ತತ್ತರಿಸಿರೋ ಕೊಡಗಿನಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಮನೆ ಮಠ ಕಳೆದುಕೊಂಡ ಜನ ಕಾಳಜಿ ಕೇಂದ್ರದಲ್ಲಿದ್ದಾರೆ. ಹಬ್ಬದ ಸಂಭ್ರಮ ಅವರ ಮುಖದಲ್ಲಿಲ್ಲ. ಇಂತಹ ಸ್ಥಿತಿಯಲ್ಲಿರೋ ನಿರಾಶ್ರಿತರನ್ನು ಭೇಟಿಯಾಗಿ ಅವರೊಂದಿಗೆ ಊಟ ಸವಿದು ಹೊಸ ಬಟ್ಟೆಗಳನ್ನು ವಿತರಿಸುವ ಮೂಲಕ ಕೊಡಗು ಉಸ್ತುವಾರಿ ಸಚಿವ ಸಾ ರಾ ಮಹೇಶ್ ಗೌರಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು. 572 ಜನರಿಗೆ ಹೊಸ ಶರ್ಟ್, 620 ಮಹಿಳೆಯರಿಗೆ ಸೀರೆ, ಬಾಲಕರಿಗೆ 113 ಹಾಗೂ ಬಾಲಕಿಯರಿಗೆ 137 ಜೊತೆ ಹೊಸ ಬಟ್ಟೆಗಳನ್ನು ವಿತರಿಸಿದರು. ಅಷ್ಟೇ ಅಲ್ಲದೆ ನಿರಾಶ್ರಿತರೊಂದಿಗೆ ಊಟ ಸವಿದು ಸಾಂತ್ವನ ಹೇಳಿದರು. ಈ ಸಂದರ್ಭ ಮಾತನಾಡಿದ ಮಹೇಶ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಕಾಳಜಿ ಕೇಂದ್ರದ ಜನರನ್ನು ಭೇಟಿಯಾಗಿ ಹಬ್ಬದ ಪ್ರಯುಕ್ತ ಬಟ್ಟೆ ವಿತರಿಸಿದ್ದೇನೆ; ಸಂಕಷ್ಟದಲ್ಲಿರುವವರಿಗೆ
ಧೈರ್ಯ ತುಂಬಿ ಅವರ ಮನೋಸ್ಥೈರ್ಯ ಕುಗ್ಗದಂತೆ ಹಬ್ದದ ದಿನದಂದು ಅವರನ್ನೆಲ್ಲಾ ಭೇಟಿ ಮಾಡಿ ದ್ದೇನೆ ಎಂದರು.
(ಮೊದಲ ಪುಟದಿಂದ)
ಯೋಜನೆ ವಿವರಿಸಿದ ಸಚಿವರು
ಕೊಡಗಿನ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿದೆ, ಈ ನಿಟ್ಟಿನಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದು ಕೊಡಗು ಉಸ್ತುವಾರಿ ಸಚಿವ ಸಾ ರಾ ಮಹೇಶ್ ಹೇಳಿದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ತಲಾ 20 ಎಕರೆ ಭೂಮಿ ನೀಡುವಂತೆ ಕೋರಲಾಗಿದೆ; ಐದು ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 30 ಎಕರೆ ಸ್ಥಳವನ್ನ ಗುರುತಿಸಲಾಗಿದೆ. ಮಡಿಕೇರಿ ನಗರದಲ್ಲಿ ಐನೂರಕ್ಕೂ ಅಧಿಕ ಮನೆಗಳ ನಿರ್ಮಾಣವಾಗಬೇಕು. ಅವರಿಗೆ ಬೇರೆ ಕಡೆ ಮನೆ ನಿರ್ಮಿಸಲು ಸಾಧ್ಯವಿಲ್ಲ ಎಂದ ಅವರು, ನಗರದ ಹೊರವಲಯದಲ್ಲಿರುವ ಅರಣ್ಯ ಇಲಾಖೆಯಲ್ಲಿ 50 ಎಕರೆ ಭೂಮಿ ಇದ್ದು, ಡೀನೊಟಿಫೈ ಮಾಡಿಸಿ ಅಲ್ಲಿ ಮಡಿಕೇರಿ ನಗರದ ಜನರಿಗೆ ಮನೆ ಕಟ್ಟಿಕೊಡಲಾಗುವದು ಎಂದರು. ಈಗಾಗಲೇ 1 ಲಕ್ಷದ 1 ಸಾವಿರ ರೂ.ಗಳನ್ನು ಮನೆ ಕಳೆದು ಕೊಂಡಿರುವವರಿಗೆ ಕೊಡಲಾಗಿದೆ. ಅಷ್ಟೇ ಅಲ್ಲದೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ಸಹಕಾರದಿಂದ ಮುಖ್ಯಮಂತ್ರಿ ಸೂಚನೆ ಮೇರೆಗೆ ಮನೆ ಕಳೆದುಕೊಂಡವರಿಗೆ 6 ಲಕ್ಷ ನೀಡಲಾಗುವದು ಎಂದು ವಿವರಿಸಿದ ಸಚಿವರು ಅವರೇ ಮನೆ ಕಟ್ಟಿಕೊಳ್ಳುವದಾದರೆ ಹಣ ಕೊಡಿತ್ತೇವೆ, ಇಲ್ಲವೇ ನಾವೇ ಕಟ್ಟಿಕೊಡುತ್ತೇವೆ ಎಂದರು. ಮನೆ ಕಟ್ಟಿಕೊಡಲು 8 ರಿಂದ 10 ತಿಂಗಳು ಕಾಲಾವಶ ಬೇಕಿದ್ದು, ಅಷ್ಟು ದಿನಗಳ ಕಾಲ ಅವರು ಬಾಡಿಗೆ ಮನೆಯಲ್ಲಿರುವದಾದರೆ ಆ ಹಣವನ್ನು ಸರ್ಕಾರದ ವತಿಯಿಂದ ನೀಡಲಾಗುವದು ಎಂದು ಉಸ್ತುವಾರಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭ ಎಂಎಲ್‍ಸಿ ವೀಣಾ ಅಚ್ಚಯ್ಯ, ಜೆಡಿಎಸ್ ಮುಖಂಡ ಕೆ.ಎಂ. ಗಣೇಶ್ ಇನ್ನಿತರರು ಇದ್ದರು.