ಸೋಮವಾರಪೇಟೆ, ಸೆ. 12: ಪ್ರವಾಹ, ಮಹಾಮಳೆಯ ರುದ್ರನರ್ತನಕ್ಕೆ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದಲ್ಲಿ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದ್ದರೆ, ಈರ್ವರು ಕೃಷಿಕರ ಬದುಕು ಸಂಪೂರ್ಣ ಬೀದಿಗೆ ಬಂದಿದೆ. ಇದ್ದ ಅಲ್ಪಸ್ವಲ್ಪ ತೋಟವೂ ಬೆಟ್ಟಕುಸಿತಕ್ಕೆ ಸಿಲುಕಿ ಕಣ್ಮರೆಯಾಗಿದ್ದು, ಮುಂದಿನ ಜೀವನ ಹೇಗೆ? ಎಂಬ ಆತಂಕ ಮೂಡಿದೆ.

ಕೂತಿ ಗ್ರಾಮದ ಗಣಪತಿ ಮತ್ತು ಕೆ.ಪಿ. ಅಪ್ಪಯ್ಯ ಅವರಿಗೆ ಇದ್ದಂತಹ ತಲಾ 10 ಏಕರೆ ಕಾಫಿ ತೋಟ ಬೆಟ್ಟಕುಸಿತದ ಆರ್ಭಟಕ್ಕೆ ಸಿಲುಕಿ ಸಂಪೂರ್ಣ ಕಣ್ಮರೆಯಾಗಿದೆ. ತೋಟದಲ್ಲಿ ಫಸಲು ನೀಡುತ್ತಿದ್ದ ಕಾಫಿ ಗಿಡಗಳು, ಮರಗಳಿಗೆ ಹಬ್ಬಿದ್ದ ಕಾಳುಮೆಣಸು ಬಳ್ಳಿಗಳು, ಕಾಡುಮರಗಳು ಸೇರಿದಂತೆ ಸಂಪೂರ್ಣ ತೋಟವೇ ಕುಸಿತಗೊಂಡು ಚಿಂದಿಯಾಗಿದ್ದು, ಕೃಷಿಕರ ಬದುಕೂ ಸಹ ಅಕ್ಷರಶಃ ಚಿಂದಿಯಾಗಿದೆ.

ಇದೇ ಗ್ರಾಮದ ಕೆ.ಪಿ. ಅಪ್ಪಯ್ಯ ಅವರ ತೋಟವೂ ಸಹ ಬೆಟ್ಟಕುಸಿತದ ಆರ್ಭಟಕ್ಕೆ ಸಿಲುಕಿದ್ದು, ತೋಟ ಇದ್ದ ಪ್ರದೇಶದಲ್ಲೀಗ ಕೆಂಪು ಮಣ್ಣು ಮಾತ್ರ ನಿಂತಿದೆ. ಕಾಫಿ, ಕರಿಮೆಣಸು ಸೇರಿದಂತೆ ಇತರ ಕೃಷಿಗಳನ್ನು ಕಳೆದುಕೊಂಡ ಕುಟುಂಬ ಶೂನ್ಯದತ್ತ ಮುಖಮಾಡಿದೆ.

ಇವರಿಗೆ ಗಡಿಕಲ್ಲು ಬಳಿ 2 ಏಕರೆ ಗದ್ದೆ ಇದ್ದರೂ ಫಸಲು ಮಾತ್ರ ಕಾಟಿಗಳ ಪಾಲಾಗುತ್ತಿದೆ. ಆದರೂ ಕೈಗೆ ಸಿಕ್ಕಿದ್ದಷ್ಟು ಫಸಲನ್ನಾದರೂ ಮನೆ ತುಂಬಿಸಿಕೊಳ್ಳುವ ಹಂಬಲದಿಂದ ಕೃಷಿ ಕಾರ್ಯ ಮಾಡುತ್ತಲೇ ಬಂದಿದ್ದಾರೆ.

ಮಹಾ ಮಳೆ ಕೂತಿ ಗ್ರಾಮದಲ್ಲಿ ಹತ್ತಾರು ಏಕರೆ ಕೃಷಿಯನ್ನು ನಾಶಗೊಳಿಸಿದೆ. ಗ್ರಾಮದ ಗೋಪಾಲ, ಕುಶಾಲಪ್ಪ, ಹೂವಯ್ಯ, ಮುತ್ತಣ್ಣ ಸೇರಿದಂತೆ ಇತರರ ಗದ್ದೆಗೆ ಬರೆ ಮಣ್ಣು ತುಂಬಿದ್ದು, ನಾಟಿ ಮಾಡಿದ್ದ ಗದ್ದೆಗಳು ನಾಶವಾಗಿವೆ. ಇದರೊಂದಿಗೆ ಬಿ.ಪಿ. ಪ್ರದೀಪ್‍ಕುಮಾರ್ ಎಂಬವರ ವಾಸದ ಮನೆ ಮಹಾಮಳೆಗೆ ಸಿಲುಕಿ ಹಾನಿಗೊಂಡಿದ್ದು, ಗ್ರಾಮದಲ್ಲಿರುವ ಶಾಲಾ ಕೊಠಡಿಯಲ್ಲಿ ಪತ್ನಿ ಸಹಿತ 2 ಮಕ್ಕಳೊಂದಿಗೆ ಆಶ್ರಯ ಕಂಡುಕೊಂಡಿದ್ದಾರೆ.

ಇನ್ನು ಕೂತಿ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ಕಾಫಿ ಫಸಲು ನೆಲಕಚ್ಚಿದ್ದರೆ, ಗಿಡಗಳು ಕೊಳೆರೋಗಕ್ಕೆ ತುತ್ತಾಗಿವೆ. ಹತ್ತಾರು ಏಕರೆ ಗದ್ದೆಗಳಲ್ಲಿ ಫಸಲು ನಷ್ಟವಾಗಿರುವ ಬಗ್ಗೆ ಕೃಷಿಕರು ಮಾಹಿತಿ ನೀಡಿದ್ದಾರೆ.

ಕೂತಿ-ನಗರಳ್ಳಿ-ಶಾಂತಳ್ಳಿ ರಸ್ತೆಯಲ್ಲಿ ಕುಸಿತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಆ ಬದಿ ಇರುವ ಮಂದಿ ಬಸವನಕಟ್ಟೆ ಮಾರ್ಗವಾಗಿ ಸೋಮವಾರಪೇಟೆ, ಈ ಬದಿ ಇರುವ ಮಂದಿ ಕೂತಿ-ತೋಳೂರುಶೆಟ್ಟಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ಆಗಮಿಸಬೇಕಿದೆ. ಈ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸುವ ಕಾರ್ಯ ಆಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. - ವಿಜಯ್