ಕುಶಾಲನಗರ, ಮಡಿಕೇರಿ ಸೆ. 12: ಕೇಂದ್ರ ಐ.ಎಂ.ಟಿ (ಅಂತರ ಸಚಿವಾಲಯ ಕೇಂದ್ರ ತಂಡ) ಅಧಿಕಾರಿಗಳು ಜಿಲ್ಲೆಯಲ್ಲಿ ಅತಿವೃಷ್ಟಿ ಯಿಂದ ತೀವ್ರ ಹಾನಿ ಗೊಳಗಾದ ಹಟ್ಟಿಹೊಳೆ, ಕಾಂಡನ ಕೊಲ್ಲಿ, ಹಾಲೇರಿ, ಮುಕ್ಕೋಡ್ಲು, ಜಂಬೂರು ಮತ್ತಿತರ ಕಡೆ ಬುಧವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು. ತಂಡದ ಮುಖ್ಯಸ್ಥ ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲಿಕ್, ಕೇಂದ್ರ ಜಲ ಆಯೋಗದ ಅಧೀಕ್ಷಕ ಅಭಿಯಂತರ ಜಿತೇಂದರ್ ಪನ್ವರ್ ಮತ್ತು ಕೇಂದ್ರ ಕೃಷಿ ಇಲಾಖೆಯ ತೈಲ ಬೀಜಾಭಿವೃದ್ಧಿ ವಿಭಾಗದ ಜಂಟಿ ನಿರ್ದೇಶಕ ಡಾ. ಪೊನ್ನುಸ್ವಾಮಿ ಅವರುಗಳು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ, ಮನೆಗಳ ಹಾನಿ, ರಸ್ತೆ, ವಿದ್ಯುತ್ ಸಂಪರ್ಕ, ಬೆಳೆ ಹಾನಿಗಳ ಕುರಿತು ಪರಿಶೀಲಿಸಿದರು. ಇದಕ್ಕೂ ಮುನ್ನ ಈ ತಂಡದ ಅಧಿಕಾರಿಗಳು ಕುಶಾಲನಗರಕ್ಕೆ ಭೇಟಿ ನೀಡಿದ ಸಂದರ್ಭ ಜಿಲ್ಲಾಡಳಿತ ಬರಮಾಡಿಕೊಂಡಿತು. ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪಣ್ಣೇಕರ್ ಹೂ ಗುಚ್ಛದ ಮೂಲಕ ಸ್ವಾಗತಿಸಿದರು. ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಅಧಿಕಾರಿಗಳು ಜಿಲ್ಲಾಡಳಿತದಿಂದ ಮಾಹಿತಿ ಸಂಗ್ರಹಿಸಿದರು.
(ಮೊದಲ ಪುಟದಿಂದ) ಹಾರಂಗಿ ಪ್ರವಾಸಿ ಮಂದಿರದಲ್ಲಿ ನಡೆದ ವಿಶೇಷ ಸಭೆಯಲ್ಲಿ ಕಳೆದ ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ ಅನಾಹುತಗಳ ಬಗ್ಗೆ ಅಧಿಕಾರಿಗಳ ತಂಡ ಜಿಲ್ಲಾಡಳಿತದಿಂದ ಸಂಪೂರ್ಣ ಮಾಹಿತಿ ಕಲೆ ಹಾಕಿತು.
ರಾಜ್ಯ ಸರಕಾರ ತುರ್ತಾಗಿ 2000 ಕೋಟಿ ರೂ. ಪರಿಹಾರ ಕೋರಿದ್ದು ಈ ನಿಟ್ಟಿನಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಲು ಈ ತಂಡ ಆಗಮಿಸಿದೆ. ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ವಿಶೇಷ ತಂಡವನ್ನು ಕಳುಹಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ತಕ್ಷಣ ಸ್ಪಂದಿಸಿದ್ದು ಎರಡು ಪ್ರತ್ಯೇಕ ತಂಡಗಳನ್ನು ಖುದ್ದು ಮಾಹಿತಿ ಮೂಲಕ ವರದಿ ನೀಡುವದಕ್ಕಾಗಿ ನಿಯೋಜಿಸಿದ್ದಾರೆ. ಜಿಲ್ಲೆಯ ಹಿರಿಯ ಅಧಿಕಾರಿಗಳ ಮೂಲಕ ಈ ತಂಡದ ಅಧಿಕಾರಿಗಳು ಇಂದು ಮಾಹಿತಿ ಕಲೆ ಹಾಕುವದರೊಂದಿಗೆ ಅಂತಿಮ ನಷ್ಟ ಪರಿಹಾರದ ಬಗ್ಗೆ ಕೂಡಲೆ ರಾಜ್ಯ ಸರಕಾರದ ಮೂಲಕ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯ ಮೂಲಕ ತೆರಳುವ 60 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂದಾಜು 25 ಕಿಮೀ ಉದ್ದದ ರಸ್ತೆ ಸಂಪೂರ್ಣ ಕುಸಿದಿದ್ದು ಶಾಶ್ವತ ಕಾಮಗಾರಿಗೆ 531 ಕೋಟಿ ರೂ. ಕಾಫಿ ಸೇರಿದಂತೆ ಬೆಳೆಗಳ ಅಂದಾಜು ನಷ್ಟ 655 ಕೋಟಿ ಅವಶ್ಯಕತೆ ಇರುವದಾಗಿ ತಾತ್ಕಾಲಿಕ ವಿವರವನ್ನು ಜಿಲ್ಲಾಧಿಕಾರಿಗಳು ತಂಡದ ಅಧಿಕಾರಿಗಳಿಗೆ ಸಲ್ಲಿಸಿದರು. ಜಿಲ್ಲೆಯಲ್ಲಿ ನಡೆದಿರುವ ಒಟ್ಟಾರೆ ನಷ್ಟದ ಬಗ್ಗೆ ಅಂತಿಮ ಪಟ್ಟಿ ನೀಡಲು 15 ದಿನಗಳ ಕಾಲಾವಕಾಶ ಅಗತ್ಯ ಇರುವದಾಗಿ ಜಿಲ್ಲಾಧಿಕಾರಿಗಳು ತಂಡದ ಸದಸ್ಯರಿಗೆ ತಿಳಿಸಿದರು. ಅನಾಹುತದ ಅನೇಕ ಪ್ರದೇಶಗಳಿಗೆ ತೆರಳುವದೇ ಕಷ್ಟ ಸಾಧ್ಯವಾಗಿರುವದರಿಂದ ಕಾಲಾವಕಾಶ ಕೋರಿದರು.
ಈ ಸಂದರ್ಭ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಮಡಿಕೇರಿ ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತಗೊಂಡ ಕೆಲವು ಪ್ರದೇಶಗಳಲ್ಲಿ ಸುರಂಗ ಮಾರ್ಗ ಕಲ್ಪಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆಯೂ ಮನವಿ ಮಾಡಿದರು. ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಮಿಶ್ರ, ಜಿಪಂ ಸದಸ್ಯೆ ಕೆ.ಪಿ. ಚಂದ್ರಕಲಾ ಇದ್ದರು.
ಬಳಿಕ ತಂಡದÀ ಅಧಿಕಾರಿಗಳು ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಸÀಂಸÀದರಾದ ಪ್ರತಾಪ್ ಸಿಂಹ ಅವರು ಮಾದಾಪುರ ಬಳಿ ಕುಸಿದಿರುವ ರಸ್ತೆ, ಹಟ್ಟಿಹೊಳೆ ಬಳಿ ಚಿತ್ರ ಸುಬ್ಬಯ್ಯ ಅವರ ಮನೆ ಕೊಚ್ಚಿಕೊಂಡು ಹೋಗಿರುವದು, ಭೂಕುಸಿತವಾಗಿರುವದು, ಬೆಳೆ ಹಾನಿಯಾಗಿರುವದು ಹಾಗೂ ಮುಕ್ಕೋಡ್ಲು ಗ್ರಾಮದ ಬಳಿ ಭೂಕುಸಿತ ಉಂಟಾಗಿರುವ ಬಗ್ಗೆ ಸ್ಥಳದಲ್ಲಿ ಮಾಹಿತಿ ನೀಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚು ರಂಜನ್ ಅವರು ಭೂಕುಸಿತ ಹಾಗೂ ಪ್ರವಾಹದಿಂದ ಸಾಕಷ್ಟು ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದ್ದು, ಬೆಳೆ ಹಾನಿಯಾಗಿದೆ, ರಸ್ತೆ ಕೊಚ್ಚಿಕೊಂಡು ಹೋಗಿವೆ. ಇದರಿಂದ ಸಾರಿಗೆ ಸಂಪರ್ಕವೇ ಕಡಿತಗೊಂಡಿದೆ ಎಂದು ತಿಳಿಸಿದರು. ಅಲ್ಲದೆ, ಸಂಸದರು ಮತ್ತು ಶಾಸಕರುಗಳು ತಂಡದ ಅಧಿಕಾರಿಗಳಿಗೆ ಪ್ರಮುಖ ವಿಚಾರವೊಂದರ ಬಗ್ಗೆ ಮರು ಪರಿಶೀಲಿಸುವಂತೆ ಕೋರಿದರು. ಪ್ರಸಕ್ತ ಎನ್‍ಡಿಆರ್‍ಎಫ್ ಮಾರ್ಗ ಸೂಚಿಯಂತೆ ಕೃಷಿಕರು ಅಥವ ಬೆಳೆಗಾರರ ಭೂಮಿ ಅಧಿಕ ವಿಸ್ತೀರ್ಣದಲ್ಲಿ ಹಾನಿಗೊಂಡಿದ್ದರೂ ಭೂ ಮಾಲೀಕರಿಗೆ ಗರಿಷ್ಠವೆಂದರೆ ಎರಡು ಹೆಕ್ಟೇರ್ ಪರಿಮಿತಿಗೆ ಸೀಮಿತವಾಗಿ ಗರಿಷ್ಠ ರೂ.37,500 ಮಾತ್ರ ಪರಿಹಾರ ಧನ ಲಭ್ಯವಾಗುತ್ತದೆ. ಎರಡು ಹೆಕ್ಟೇರ್‍ಗಿಂತ ಅಧಿಕ ಪ್ರದೇಶ ಹಾನಿಗೀಡಾಗಿದ್ದರೂ ಇಷ್ಟೇ ಪರಿಹಾರ ಸಿಗುವ ಮೊತ್ತದ ನಿರ್ಬಂಧವನ್ನು ಸಡಿಲಗೊಳಿಸುವಂತೆ ಶಾಸಕರುಗಳು, ಸಂಸದರು ಮನವಿ ಮಾಡಿದರು.
ಅಧಿಕಾರಿಗಳ ಭೇಟಿ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಲಿಲ್ಲ. ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿ “ ಕೇಂದ್ರದ ಈ ತಂಡದೊಂದಿಗೆ ಕೃಷಿ ಮತ್ತು ಲೋಕೋಪಯೋಗಿ ಇಲಾಖಾಧಿ ಕಾರಿಗಳು ತೆರಳುತ್ತಾರೆ. ಈ ಇಲಾಖೆಗಳ ಪ್ರಾರಂಭಿಕ ಹಂತದ ವರದಿ ಆಧರಿಸಿ ತಂಡವು ಸಮೀಕ್ಷೆ ನಡೆಸುತ್ತಿದೆ. ಗುರುವಾರ ದಿನ ಅಧಿಕಾರಿಗಳು ಎರಡನೇ ಮೊಣ್ಣಂಗೇರಿ, ಜೋಡುಪಾಲ, ಕಾಲೂರು, ಹೆಬ್ಬೆಟ್ಟಗೇರಿ, ದೇವಸ್ತೂರುಗಳಿಗೆÀ ಭೇಟಿ ನೀಡುತ್ತಾರೆ” ಎಂದರು. ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಮತ್ತಿತರರು ಹಾಜರಿದ್ದರು.