ಮಡಿಕೇರಿ, ಸೆ. 12: ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ ಜಲಸ್ಫೋಟ ಹಾಗೂ ಭೂಕುಸಿತದಿಂದ ಎದುರಾಗಿರುವ ಪ್ರಾಕೃತಿಕ ಹಾನಿ ಸಂದರ್ಭ ಇಲ್ಲಿನ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನೇತೃತ್ವದಲ್ಲಿ ಜಿಲ್ಲಾಡಳಿತದೊಂದಿಗೆ, ಸಚಿವರು, ಶಾಸಕರು, ಸರಕಾರ ಸ್ಪಂದಿಸಿರುವ ರೀತಿ ಅತ್ಯಂತ ಶ್ಲಾಘನೀಯವಾಗಿದೆ ಎಂದು ಬೆಂಗಳೂರು ವಕೀಲರ ಸಂಘ ಪ್ರತಿಕ್ರಿಯಿಸಿದೆ.

ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್, ಕಾರ್ಯದರ್ಶಿ ಗಂಗಾಧರಯ್ಯ ಹಾಗೂ ಖಜಾಂಚಿ ಶಿವಮೂರ್ತಿ ನೇತೃತ್ವದ ನಿಯೋಗವು ಇಲ್ಲಿನ ವಕೀಲರ ಸಂಘದ ಅಧ್ಯಕ್ಷ ಕವನ್ ಸಹಿತ ಸಹಾಯಕ ಅಡ್ವೋಕೇಟ್ ಜನರಲ್ ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ತೆರಳಿತು.

ಈ ವೇಳೆ ಜಿಲ್ಲಾಧಿಕಾರಿಗಳು ಕೇಂದ್ರ ತಂಡದೊಂದಿಗೆ ಅತಿವೃಷ್ಟಿ ಸಂಭವಿಸಿರುವ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದರಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರೊಂದಿಗೆ ಚರ್ಚಿಸಿದ ನಿಯೋಗವು, ತಮ್ಮ ಶ್ಲಾಘನೆಯನ್ನು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ತಲಪಿಸಬೇಕೆಂದು ಕಳಕಳಿ ವ್ಯಕ್ತಪಡಿಸಿತು. ಈ ವೇಳೆ ವಿಷಯ ಪ್ರಸ್ತಾಪಿಸಿದ ಎ.ಎಸ್. ಪೊನ್ನಣ್ಣ ಅವರು, ಜಿಲ್ಲಾಡಳಿತದೊಂದಿಗೆ ಸಂತ್ರಸ್ತರಿಗೆ ನ್ಯಾಯ ದೊರಕಿಸುವಲ್ಲಿ ಎಲ್ಲರೂ ಕೈಜೋಡಿಸಲು ಇಲ್ಲಿಗೆ ಬಂದಿರುವದಾಗಿ ನೆನಪಿಸಿದರು.

ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್, ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಪರಿಹಾರ ಕಾರ್ಯ ಚುರುಕುಗೊಳಿಸಲು ಕೇಂದ್ರ ಸರಕಾರದಿಂದ ತುರ್ತು ಕೊಡಗಿಗೆ ನೆರವು ಕಲ್ಪಿಸಲು ಆಗ್ರಹಪಡಿಸುವದಾಗಿ ನುಡಿದರು. ಅಲ್ಲದೆ ಬೆಂಗಳೂರು ವಕೀಲರ ಸಂಘದಿಂದಲೂ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಪತ್ರ ಬರೆದು ವಾಸ್ತವದ ಕುರಿತು ಗಮನ ಸೆಳೆಯುವದಾಗಿ ಮಾರ್ನುಡಿದರು.