ಊಟ ಕೊಡಿ ಎಂದು ಅಂಗಲಾಚಿದ ಉಗ್ರರು

ಶ್ರೀನಗರ, ಸೆ. 14: ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಬೇಕು ಎಂದು ಗಡಿ ದಾಟಿ ಒಳ ಬಂದ ಶಸ್ತ್ರ ಸರ್ಜಿತ ಉಗ್ರರು ಅನ್ನ ಆಹಾರವಿಲ್ಲದೆ ಮನೆಯೊಂದಕ್ಕೆ ನುಗ್ಗಿ ಊಟ ಕೊಡಿ ಎಂದು ಅಂಗಲಾಚಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ನಿರ್ಮೂಲನೆಗೆ ಪಣತೊಟ್ಟಿದ್ದು, ಈ ಹಿನ್ನೆಲೆ ಭಾರತೀಯ ಸೇನೆಗೆ ಸಂಪೂರ್ಣ ಅಧಿಕಾರಕೊಟ್ಟಿದೆ. ಹೀಗಾಗಿ ಭಾರತೀಯ ಸೇನೆ ಉಗ್ರರನ್ನು ಹುಡುಕಿ ಹೊಡೆದು ಹಾಕುತ್ತಿದೆ. ಇದರಿಂದ ಹೆದರಿದ ಉಗ್ರರು ಹೆಚ್ಚು ದಿನ ಬಿಲಗಳಲ್ಲೇ ಅವಿತು ಕುಳಿತು ತಂದಿದ್ದ ಆಹಾರವನ್ನು ತಿಂದು ಮುಗಿಸಿದ್ದರಿಂದ ತಿನ್ನಲು ಏನೂ ಸಿಗದೆ ಮನೆಗಳಿಗೆ ನುಗ್ಗಿ ಆಹಾರವನ್ನು ನೀಡುವಂತೆ ಅಂಗಲಾಚುತ್ತಿದ್ದಾರೆ. ಮೂವರು ಭಯೋತ್ಪಾದಕರು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಸಮೀಪದ ಗ್ರಾಮವೊಂದಕ್ಕೆ ನುಗ್ಗಿ ಬಿಸ್ಕತ್ ಮತ್ತು ಸೇಬು ತಿಂದ ಘಟನೆ ನಡೆದಿದೆ. ಮನೆಯೊಂದಕ್ಕೆ ನುಗ್ಗಿದ ಮೂವರು ಉಗ್ರರು ಕಳೆದ ಐದು ದಿನಗಳಿಂದ ಆಹಾರ ಸೇವಿಸಿರಲಿಲ್ಲ. ತಿನ್ನಲು ಮನೆಯಲ್ಲಿ ಏನಿದೆ ಎಂದು ಕೇಳಿದರು. ಭಯಭೀತರಾದ ನಾಗರಿಕರು ಮನೆಯಲ್ಲಿದ್ದ ಬಿಸ್ಕತ್ತುಗಳು ಮತ್ತು ಸೇಬುಗಳನ್ನು ಅವರಿಗೆ ನೀಡಿದೆವು. ತುಂಬಾ ಹಸಿದವರಂತೆ ತಿಂದು ನೀರು ಕುಡಿದು ಭದ್ರತಾ ಪಡೆಗಳಿಗೆ ವಿಷಯ ತಿಳಿಸದಂತೆ ಬೆದರಿಕೆಯೊಡ್ಡಿ ಪರಾರಿಯಾದರು ಎಂದು ಮನೆಯಲ್ಲಿದ್ದ ಯುವಕನೊಬ್ಬ ತಿಳಿಸಿದ್ದಾನೆ.

ನದಿಗೆ ಉರುಳಿ ಬಿದ್ದ ವ್ಯಾನ್ : 13 ಸಾವು

ಕಿಸ್ತಾವರ್, ಸೆ. 14: ಜಮ್ಮು ಮತ್ತು ಕಾಶ್ಮೀರದ ಕಿಸ್ತಾವರ್ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ್ದ ವ್ಯಾನ್‍ವೊಂದು ನದಿಗೆ ಉರುಳಿ ಬಿದ್ದ ಪರಿಣಾಮ 13 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಕಿಸ್ತಾವರ್‍ನಿಂದ 18 ಕಿಮೀ ದೂರದಲ್ಲಿರುವ ಥಕ್ರೈ ತಲಪಿದಾಗ ವಾಹನದ ಮೇಲಿದ್ದ ನಿಯಂತ್ರಣವನ್ನು ಚಾಲಕ ಕಳೆದುಕೊಂಡಿದ್ದಾರೆ. ಈ ವೇಳೆ ವ್ಯಾನ್ ನದಿಗೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ವಾಹನದಲ್ಲಿ 30-35 ಮಂದಿ ಪ್ರಯಾಣಿಕರಿದ್ದರು ಎಂದು ವರದಿಗಳು ತಿಳಿಸಿವೆ. ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಾಳುಗಳನ್ನು ಅಧಿಕಾರಿಗಳು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳಿದವರಿಗಾಗಿ ಕಾರ್ಯಾಚರಣೆಗಳು ಮುಂದುವರೆದಿವೆ ಎಂದು ಮೂಲಗಳು ತಿಳಿಸಿವೆ.

ಮೊದಲ ಪ್ರಧಾನಿ ನೆಹರು ಪ್ರತಿಮೆ ತೆರವು

ಅಲಹಾಬಾದ್, ಸೆ. 14: ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ತೆರವುಗೊಳಿಸಿದ್ದು ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. 2019ರ ಜನವರಿಯಲ್ಲಿ ನಡೆಯುವ ಕುಂಭಮೇಳಕ್ಕಾಗಿ ನಗರವನ್ನು ಸುಂದರೀಕರಿಸುವ ನಿಟ್ಟಿನಲ್ಲಿ ನಗರದ ಬಲ್ಸಾನ್ ಚೌರಾಹಾದಲ್ಲಿದ್ದ ನೆಹರೂ ಪ್ರತಿಮೆಯನ್ನು ನಿನ್ನೆ ತೆರವುಗೊಳಿಸಲಾಗಿತ್ತು. ಈ ಸಂಬಂಧ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್. ನೆಹರೂ ಪ್ರತಿಮೆಯನ್ನು ತೆರವುಗೊಳಿಸುವದಾದರೆ ಇದೇ ರಸ್ತೆಯಲ್ಲಿ ಮುಂದೆ ಒಂದೆಡೆ ಇರುವ ಪಂಡಿತ್ ದೀನ ದಯಾಳ್ ಅವರ ಪ್ರತಿಮೆಯನ್ನು ಯಾಕೆ ಮುಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ. ಉದ್ದೇಶಪೂರ್ವಕವಾಗಿ ನೆರಹೂ ಪ್ರತಿಮೆಯನ್ನು ತೆರವು ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳು ಪ್ರತಿಭಟನೆ ನಡೆಸಿವೆ. ಪ್ರತಿಮೆ ತೆರವಿನ ಕ್ರೇನ್‍ಗೆ ತಡೆಯೊಡ್ಡಿರುವ ಈ ಪಕ್ಷಗಳ ಕಾರ್ಯಕರ್ತರು ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದರು.

ವರದಕ್ಷಿಣೆ ಪ್ರಕರಣಕ್ಕೆ ಸುಪ್ರೀಂ ಮಹತ್ವದ ಆದೇಶ

ನವದೆಹಲಿ, ಸೆ. 14: ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೊದಲಿನ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಈ ಕುರಿತಂತೆ ಮಹತ್ವದ ತೀರ್ಮಾನ ಘೋಷಿಸಿದೆ. ವರದಕ್ಷಿಣೆ ಕಿರುಕುಳ ಆರೋಪಕ್ಕೆ ಸಿಕ್ಕವರನ್ನು ಬಂಧಿಸುವ ಮುನ್ನ ಅದಕ್ಕಾಗಿ ರಚಿಸಲಾದ ವಿಶೇಷ ಸಮಿತಿಯೊಂದರ ಮೂಲಕ ತನಿಖೆ ಕೈಗೊಳ್ಳಬೆಕೆಂಬ ಅದೇಶ ಮಾರ್ಪಾಡಾಗಿದೆ. ವರದಕ್ಷಿಣೆ ವಿರೋಧಿ ಕಾನೂನನ್ನು ದುರ್ಬಲಗೊಳಿಸುವ ಆರೋಪ ಕೇಳಿ ಬಂದಿದ್ದು ಈ ಸಂಬಂಧ ತೀರ್ಪನ್ನು ಮರುಪರಿಶೀಲನೆಗೆ ಕೇಳಲಾಗಿತ್ತು. ಇದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ ಏ. 23 ರಂದು ಅಂತಿಮ ತೀರ್ಪನ್ನು ಕಾಯ್ದಿರಿಸಿ ಆದೇಶಿಸಿತ್ತು. ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ನಾವು ಕ್ಷಿಪ್ರ ಬಂಧನ ಅಥವಾ ಪೂರ್ವ ಬಂಧನಗಳನ್ನು ಅಲ್ಲದೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯ ಪ್ರಕರಣ ಹೆಚ್ಚುವುದನ್ನು ತಡೆದಿದ್ದೇವೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಹೇಳಿದೆ. ಮಹಿಳೆಯರಿಗೆ ಅವರ ಲಿಂಗದ ಆಧಾರದಲ್ಲಿ ನ್ಯಾಯ ದೊರಕಬೇಕು, ಆದರೆ ವರದಕ್ಷಿಣೆ ಎನ್ನುವದು ಒಂದೆಡೆ ವಿವಾಹದ ಮೇಲೆ ಪರಿಣಾಮ ಬೀರಲಿದೆ, ಇನ್ನೊಂದೆಡೆ ಮನುಷ್ಯನ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆಯೂ ಪರಿಣಾಮ ಉಂಟುಮಾಡಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸರ್ಕಾರ ಉರುಳಿಸಲು ಹವಾಲ ಹಣ : ಸಿಎಂ ಆರೋಪ

ಬೆಂಗಳೂರು, ಸೆ. 14: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಹವಾಲ ದಂಧೆ ಹಣವನ್ನು ಬಳಸುತ್ತಿದ್ದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ವ್ಯರ್ಥ ಪ್ರಯತ್ನ ನಡೆಸುತ್ತಿದೆ. ಶಾಸಕರ ಖರೀದಿಗೆ ಹವಾಲ ದಂಧೆ ಹಣ ಬಳಸುತ್ತಿದೆ. ಇದಕ್ಕಾಗಿ ಬಿಜೆಪಿ ಯಾರನ್ನ ಬಳಸಿಕೊಳ್ಳುತ್ತಿದೆ. ಹಣ ಎಲ್ಲಿ ಸಂಗ್ರಹವಾಗಿದೆ. ಅದರ ಕಿಂಗ್ ಪಿನ್ ಯಾರು ಎನ್ನುವದು ಗೊತ್ತಿದೆ. ಬಿಜೆಪಿಯ ಪ್ರಯತ್ನಗಳನ್ನು ನೋಡಿಕೊಂಡು ತಾನು ಸುಮ್ಮನೇ ಕೂರುವದಿಲ್ಲ. ತಾನು ಸರ್ಕಾರ ಉಳಿಸಲು ಕಾನೂನು ದೃಷ್ಟಿಯಲ್ಲಿ ಯಾವ ಪ್ರಯತ್ನ ಮಾಡಬೇಕೊ ಅದನ್ನು ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಬಿಬಿಎಂಪಿ ಕಚೇರಿಗೆ ಬೆಂಕಿ ಹಾಕಿ ಕಡತ ಸುಟ್ಟವರು, ಕಾಫಿ ಎಸ್ಟೇಟ್ ಮಾರಿ ಸ್ವಂತ ಹೆಂಡತಿ ಮಕ್ಕಳಿಗೆ ಗುಂಡಿಟ್ಟು ಕೊಂದವರು, ಇಸ್ಪಿಟ್ ದಂಧೆ ನಡೆಸುತ್ತಿದ್ದವರು ಶಾಸಕರ ಖರೀದಿಯ ಕಿಂಗ್ ಪಿನ್ ಗಳಾಗಿದ್ದಾರೆ ಎಂದು ಪರೋಕ್ಷವಾಗಿ ಫೈಟರ್ ರವಿ, ಜಿಮ್ ಸೋಮು, ಉದಯ್ ಗೌಡ, ಹೊಂಬಾಳೆ ವಿಜಯ್ ಕಿರಗಂದೂರು ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ವಿಮೆ ರಹಿತ ವಾಹನಗಳ ಹರಾಜಿಗೆ ಆದೇಶ

ನವದೆಹಲಿ, ಸೆ. 14: ಅಪಘಾತಕ್ಕೊಳಗಾಗಿರುವವವರಿಗೆ ಪರಿಹಾರ ನೀಡಲು ವಿಮೆ ಮಾಡಿಸಿಕೊಳ್ಳದಿರುವ ವಾಹನಗಳನ್ನು ಎಲ್ಲಾ ರಾಜ್ಯಗಳು ಹರಾಜಿಗಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ನಿಯಮ ಜಾರಿಗೆ ಬರಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು 12 ವಾರಗಳ ಕಾಲವಕಾಶವನ್ನು ನ್ಯಾಯಾಲಯ ನೀಡಿದೆ. ಆದೇಶದ ಪ್ರಕಾರ ಹರಾಜಿನಿಂದ ಬಂದ ಹಣವನ್ನು ಮೋಟಾರು ಅಪಘಾತ ಹಕ್ಕುಗಳ ನ್ಯಾಯಾಧೀಕರಣ(ಎಂಎಸಿಟಿ)ಯಲ್ಲಿ ಠೇವಣಿಯಿಡಬೇಕು. ಪ್ರಸ್ತುತ ದೆಹಲಿಯಲ್ಲಿ ಮಾತ್ರ ಈ ನಿಯಮ ಪಾಲಿಸಲಾಗುತ್ತಿದೆ. ಎಂಎಸಿಟಿ ಕಾಯ್ದೆಯಡಿ, ಅಪಘಾತದಲ್ಲಿ ಮಡಿದವರ ಹಿಂದಿನ ಆದಾಯಗಳಂತಹ ವಿಷಯಗಳನ್ನು ನಿಗದಿಪಡಿಸಿ ಪರಿಹಾರಗಳನ್ನು ನೀಡಬೇಕು. ಅಪಘಾತದಲ್ಲಿ ಮೃತಪಟ್ಟ ಕುಟುಂಬದ ಸಂಬಂಧಪಟ್ಟ ವ್ಯಕ್ತಿಯ ಖರ್ಚು ವೆಚ್ಚಗಳಿಗೆ ಹಣವನ್ನು ನೀಡಬೇಕಾಗುತ್ತದೆ. ಅದು ಅಪಘಾತದಲ್ಲಿ ಮೃತ ವ್ಯಕ್ತಿಯ ವಯಸ್ಸನ್ನು ಅವಲಂಬಿಸಿರುತ್ತದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ವಿಮೆ ಕಡ್ಡಾಯ ಮಾಡಿಸಬೇಕೆಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಕಡ್ಡಾಯ ಮಾಡಿದ ನಂತರ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಳೆದ ತಿಂಗಳು ದೀರ್ಘಾವಧಿ ಮೂರನೇ ವ್ಯಕ್ತಿ ವಿಮೆಯನ್ನು ಕಡ್ಡಾಯ ಮಾಡಿತ್ತು. ಮೋಟಾರು ವಾಹನಗಳ ಕಾಯ್ದೆ ಪ್ರಕಾರ ಮೂರನೇ ವ್ಯಕ್ತಿ ವಿಮೆ ಕಡ್ಡಾಯವಾಗಿರುತ್ತದೆ.