ಒಡೆಯನಪುರ/ಆಲೂರು-ಸಿದ್ದಾಪುರ, ಸೆ. 12: ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ವಿಶ್ವಧಾರ್ಮಿಕ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಷಣದ ಮೂಲಕ ವಿಶ್ವವನ್ನು ಬೆರಗೊಳಿಸಿದ ದಿನವನ್ನು ಭಾರತದ ಹೆಮ್ಮೆಯ ಹಬ್ಬವನ್ನಾಗಿ ಆಚರಿಸಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಭಿಪ್ರಾಯಪಟ್ಟರು. ಅವರು ಕೊಡ್ಲಿಪೇಟೆ ಹಲಸಿನಮರ ಗೌರಮ್ಮಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಸಾಪ, ಕೊಡ್ಲಿಪೇಟೆ ಹೋಬಳಿ ಕಸಾಪ ಘಟಕ ಹಾಗೂ ಕೊಡ್ಲಿಪೇಟೆ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣಕ್ಕೆ ಕುರಿತಾದ ವಿಶ್ವಮುಖಿ ಭಾರತ ಸೆಪ್ಟಂಬರ್-11 ವಿಷಯದ ಬಗ್ಗೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಯುವ ಜನಾಂಗ ಮತ್ತು ವಿದ್ಯಾರ್ಥಿ ಸಮೂಹ ನಮ್ಮ ದೇಶದ ಸಂಸ್ಕøತಿ, ಇತಿಹಾಸ, ರಾಷ್ಟ್ರದ ಹಿಂದಿನ ಕಾಲದ ಆದರ್ಶ ವ್ಯಕ್ತಿಗಳ ಬಗ್ಗೆ ಮನನ ಮಾಡಿಕೊಳ್ಳಬೇಕು. ಇದರಿಂದ ರಾಷ್ಟ್ರಪ್ರೇಮ ಬೆಳೆಯುತ್ತದೆ ಎಂದರು.

ಕಸಾಪ ವತಿಯಿಂದ ಪ್ರಥಮ ಭಾರಿಗೆ ಸೆಪ್ಟಂಬರ್ 11 ರಂದು ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣದ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲು ತೀರ್ಮಾನಿಸಿದೆ, ದೇಶದಲ್ಲೆ ಈ ಕಾರ್ಯಕ್ರಮ ಪ್ರಥಮವಾಗಿರುವದರ ಜೊತೆಯಲ್ಲಿ ಕೊಡ್ಲಿಪೇಟೆ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸ ಕಾರ್ಯಕ್ರಮದ ಮೂಲಕ ಆಚರಣೆಗೆ ನಾಂದಿ ಹಾಡಲಾಗಿದೆ ಎಂದರು.

ಸಾಹಿತಿ ಎಸ್.ಎಸ್. ರಾಮಮೂರ್ತಿ ದತ್ತಿನಿಧಿ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯದಲ್ಲಿ ಕವಿ, ಕಲಾವಿದರ ಕೊಡುಗೆ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಘಟಕದ ಕೋಶಾಧಿಕಾರಿ ಎಸ್.ಎ. ಮುರುಳೀಧರ್, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕವಿ ಮತ್ತು ಕಲಾವಿದರ ಕೊಡುಗೆ ಸಂಹಪಾಲಿನಷ್ಟಿದೆ, ಕನ್ನಡದ ಕವಿ ಮತ್ತು ಸಾಹಿತಿಗಳಿಗೆ ಒಟ್ಟು 8 ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿರುವದಕ್ಕೆ ಇದು ಸಾಕ್ಷಿಯಾಗಿದೆ ಎಂದರು. ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರ ಕವಿ ಕುವೆಂಪು, ಕಲಾವಿದರ ಕ್ಷೇತ್ರದಲ್ಲಿ ಡಾ.ರಾಜಕುಮಾರ್ ಕರ್ನಾಟಕ ರತ್ನ ಬಿರುದು ಪಡೆದು ರಾಜ್ಯಕ್ಕೆ ಕೊಡುಗೆ ನೀಡಿದ ಅಗ್ರಗಣ್ಯರಾಗಿದ್ದಾರೆ ಎಂದರು. ಜ್ಞಾನಪೀಠ ಪ್ರಶಸ್ತಿ ದೇಶದ ಅತಿದೊಡ್ಡ ಪ್ರಶಸ್ತಿಯಾಗಿದ್ದು ಈಗಾಗಲೆ 8 ಮಂದಿ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿಸಿಕ್ಕಿದ್ದರೂ ಇನ್ನೂ ನಮ್ಮ ರಾಜ್ಯದಲ್ಲಿ 50 ಮಂದಿ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಪಡೆಯಲು ಅರ್ಹರಾಗಿದ್ದಾರೆ ಎಂದರು. ಕಲಾವಿದರ ಕೊಡುಗೆ ಅಪಾರವಾಗಿದ್ದು, ರಂಗಭೂಮಿ, ಸಿನಿಮಾ, ಜಾನಪದ, ಕರ್ನಾಟಕ ರಾಷ್ಟ್ರೀಯ ಸಂಗೀತ, ಸುಗಮ ಸಂಗೀತÀ ಕ್ಷೇತ್ರದ ಕಲಾವಿದರು ತಮ್ಮದೆ ಆದ ಛಾಪು ಮೂಡಿಸಿ ರಾಷ್ಟ್ರ ಮತ್ತು ವಿಶ್ವಮಟ್ಟದಲ್ಲಿ ಕೀರ್ತಿ ಗಳಿಸಿರುವದು ಹೆಮ್ಮೆಯ ವಿಷಯವಾಗಿದೆ, ಸಾಹಿತ್ಯ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯ ಕೊಡುಗೆಯೂ ಅಪಾರವಾಗಿದ್ದು, ಕೊಡಗಿನ ಸಾಹಿತಿ ಗೌರಮ್ಮ ಪ್ರಥಮ ಮಹಿಳಾ ಸಾಹಿತಿಯಾಗಿದ್ದು ಜೊತೆಯಲ್ಲಿ ಮಹಾತ್ಮಗಾಂಧಿಜೀ ಅವರನ್ನು ಕೊಡಗು ಜಿಲ್ಲೆಗೆ ಕರೆಸಿಕೊಂಡ ಧೀಮಂತ ಮಹಿಳೆಯಾಗಿದ್ದರು, ಸಾಹಿತ್ಯ ಮತ್ತು ಕಲಾವಿದರ ಕ್ಷೇತ್ರದಿಂದ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಸಾಧಕರ ಪಟ್ಟಿ ದೊಡ್ಡದಾಗಿದ್ದು, ಈ ಸಾಧಕರ ಶ್ರಮದಿಂದ ಕನ್ನಡ ಶ್ರೀಮಂತವಾಗಲು ಕಾರಣವಾಗಿದೆ ಎಂದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಪರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್‍ನಿಂದ ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವದರಿಂದ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಪೂರಕವಾಗುತ್ತದೆ, ವಿದ್ಯಾರ್ಥಿಗಳ ಪ್ರಬುದ್ಧತೆಯೂ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಕಾಲೇಜು ಪ್ರಾಂಶುಪಾಲ ಎಂ.ಆರ್.ನಿರಂಜನ್ ಮಾತನಾಡಿ ಕನ್ನಡ ಭಾಷೆ ಕೇವಲ ಶಿಕ್ಷಣದಿಂದ ಅಭಿವೃದ್ಧಿ ಹೊಂದುವದಿಲ್ಲ, ಕನ್ನಡ ಸಂಸ್ಕøತಿ, ಕನ್ನಡದ ಪರಂಪರೆ, ನೆಲ-ಜಲ ಮುಂತಾದ ವಿಚಾರಧಾರೆಗಳನ್ನು ಅಭಿವೃದ್ಧಿಪಡಿಸಬೇಕು, ಈ ನಿಟ್ಟಿನಲ್ಲಿ ಜಿಲ್ಲಾ ಕಸಾಪ ಘಟಕ ಕನ್ನಡ ಪರಂಪರೆಗೆ ಪೂರಕವಾದ ಕಾರ್ಯಕ್ರ ಮಗಳನ್ನು ಹಮ್ಮಿಕೊಳ್ಳುತ್ತಿರುವದು ಶ್ಲಾಘನೀಯ ಎಂದರು.

ಕೊಡ್ಲಿಪೇಟೆ ಕಸಾಪ ಘಟಕ ಅಧ್ಯಕ್ಷ ಅಬ್ದುಲ್ ರಬ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್, ಜಾನಪದ ಕಲಾವಿದ ಬೆಸೂರು ಶಾಂತೇಶ್, ಶನಿವಾರಸಂತೆ ಕಸಾಪ ಖಜಾಂಜಿ ಡಿ.ಬಿ. ಸೋಮಪ್ಪ, ಶಿಕ್ಷಕ ಫಯಾಜ್, ಸಮಾಜಸೇವಕ ರುಬಿನ ಮುಂತಾದವರು ಹಾಜರಿದ್ದರು.