ಸೋಮವಾರಪೇಟೆ, ಸೆ.12: ಪ್ರಸಕ್ತ ಸಾಲಿನಲ್ಲಿ ಸಂಭವಿಸಿದ ಜಲಪ್ರಳಯದ ನೋವಿನ ನಡುವೆಯೂ ಸಮೀಪದ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮ ದೇವಿ ಸನ್ನಿಧಿಯಲ್ಲಿ ಸಾಂಪ್ರದಾಯಿಕ ಹಬ್ಬಾಚರಣೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಭಕ್ತಾದಿಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿತ್ತು. ಮಡಿಕೇರಿ, ವೀರಾಜಪೇಟೆ, ಭಾಗಮಂಡಲ, ಸುಂಟಿಕೊಪ್ಪ, ಮಾದಾಪುರ ಕಡೆಗಳಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿಲ್ಲ.
ಬೆಳಗ್ಗಿನಿಂದ ಉತ್ಸವ ಆಯೋಜನೆಗೊಂಡಿದ್ದರೂ ನೂರಾರು ಮಂದಿ ಮಾತ್ರ ಭಾಗಿಯಾಗಿದ್ದರು. ಮಧ್ಯಾಹ್ನದ ವೇಳೆಗೆ ಹೆಚ್ಚಿನ ಭಕ್ತಾದಿಗಳು ಆಗಮಿಸಿದರು. ಪ್ರತಿ ವರ್ಷ ಭಕ್ತಾದಿಗಳ ನೂಕುನುಗ್ಗಲನ್ನು ಹತೋಟಿಗೆ ತರುವದರಲ್ಲೇ ಹೈರಾಣಾಗುತ್ತಿದ್ದ ಪೊಲೀಸರು ಈ ಬಾರಿ ನೂಕುನುಗ್ಗಲು ಇಲ್ಲದ್ದರಿಂದ ವಿಶ್ರಾಂತಿ ಪಡೆದರು. ಜಾತ್ರೋತ್ಸವದಂತೆ ಕಂಗೊಳಿಸುತ್ತಿದ್ದ ಉತ್ಸವದಲ್ಲಿ ಹತ್ತಾರು ಅಂಗಡಿಗಳು ತಲೆ ಎತ್ತಿದ್ದರೂ ಹೇಳಿಕೊಳ್ಳುವ ವ್ಯಾಪಾರ ವಹಿವಾಟು ನಡೆಯಲಿಲ್ಲ. ಪೊಲೀಸ್ ಠಾಣಾಧಿಕಾರಿ ಶಿವಣ್ಣ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಒಟ್ಟಾರೆ ಪ್ರಕೃತಿ ವಿಕೋಪದ ನೋವಿನ ನಡುವೆಯೂ ಸಾಂಪ್ರದಾಯಿಕ ಆಚರಣೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ದೊಡ್ಡಮಳ್ತೆ ಗ್ರಾಮಸ್ಥರು ಹಾಗೂ ಶ್ರೀ ಬಸವೇಶ್ವರ-ಸ್ವರ್ಣಗೌರಿ ಹೊನ್ನಮ್ಮ ಟ್ರಸ್ಟ್‍ನವರು ಅಚ್ಚುಕಟ್ಟಾಗಿ ಆಯೋಜಿಸಿದ್ದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಟ್ರಸ್ಟ್‍ನ ಅಧ್ಯಕ್ಷ ಡಿ.ಎಂ. ಹರೀಶ್, ಉಪಾಧ್ಯಕ್ಷ ಡಿ.ಎ. ಉದಯ, ಕಾರ್ಯದರ್ಶಿ ಹೆಚ್.ಎ. ಸುಬ್ರಮಣಿ, ಪದಾಧಿಕಾರಿಗಳಾದ ವೀರೇಶ್, ಪ್ರಸನ್ನ, ಗಣೇಶ್, ತಿಮ್ಮಯ್ಯ, ಚಂದ್ರಶೇಖರ್, ರವಿ, ಶಶಿಧರ್, ವೆಂಕಟೇಶ್, ದಿಲೀಪ್‍ಕುಮಾರ್, ಷಡಕ್ಷರಿ ಸೇರಿದಂತೆ ಗ್ರಾಮಸ್ಥರು ಉತ್ಸವದಲ್ಲಿ ತೊಡಗಿಸಿಕೊಂಡಿದ್ದರು.