ಮಡಿಕೇರಿ, ಸೆ. 14: ಮಡಿಕೇರಿಯ ಸೆಂಟ್ ಜೋಸೆಫ್ ಶಾಲೆಯಲ್ಲಿ ಓದುತ್ತಿರುವ ಸಂತ್ರಸ್ತ ಕುಟುಂಬದ 50 ಮಕ್ಕಳ ಶಾಲಾ ಶುಲ್ಕವನ್ನು ಶ್ರೀ ಆರ್.ಆರ್. ಆಸ್ಪತ್ರೆ ಮಡಿಕೇರಿ ಇದರ ವೈದ್ಯೆ ಡಾ. ರಾಜೇಶ್ವರಿ ಅವರು ನೀಡಿದ್ದಾರೆ. ಮಡಿಕೇರಿಯ ಸೆಂಟ್ ಜೋಸೆಫ್ ಸಭಾಂಗಣದಲ್ಲಿ ತಾ. 12ರಂದು ಸರಳ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಡಾ. ರಾಜೇಶ್ವರಿ ಅವರು, ಪ್ರಪಂಚದಲ್ಲಿ ಯಾವದೇ ವ್ಯಕ್ತಿಗೆ ಬಹುದೊಡ್ಡ ಆಸ್ತಿ ಎಂದರೆ ವಿದ್ಯೆ. ಯಾರೂ ವಿದ್ಯೆ ಪಡೆಯುವಲ್ಲಿ ವಂಚಿತರಾಗಬಾರದು ಎಂಬ ಉದ್ದೇಶವನ್ನು ಇಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಜೀವನದಲ್ಲಿ ಸಮಸ್ಯೆಗಳು ಬರುವದು ಸಹಜ. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಪರಿಹಾರ ಕಂಡುಕೊಂಡರೆ ಜೀವನ ಸುಂದರವಾಗಿರುತ್ತದೆ ಎಂದು ಕಿವಿಮಾತು ಹೇಳಿದರು. ಒಟ್ಟು 50 ಮಕ್ಕಳಿಗೆ 3 ಲಕ್ಷದ 50 ಸಾವಿರ ರೂಪಾಯಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕ ಬೇಬಿ ಮ್ಯಾಥ್ಯು, ಶಾಲೆಯ ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ಲೀಮಾ, ಅಂಥೋಣಿಯಮ್ಮ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಾ. ರಾಜೇಶ್ವರಿ ಅವರ ಪತಿ ಡಾ. ನವೀನ್ ಅವರು, ಸಂತ್ರಸ್ತರಿಗೆ ನೆರವು ನೀಡಿರುವದು ತೃಪ್ತಿ ತಂದಿದೆ ಎಂದಿದ್ದಾರೆ.