ಸೋಮವಾರಪೇಟೆ, ಸೆ. 14: ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಹತ್ತಾರು ಬೀದಿ ನಾಯಿಗಳು ವಾಸ್ತವ್ಯ ಹೂಡಿದ್ದು, ಸಾರ್ವಜನಿಕರಿಗೆ ಭಯದ ವಾತಾವರಣ ನಿರ್ಮಿಸಿದೆ. ಬಸ್ ನಿಲ್ದಾಣದಲ್ಲೇ ಓಡಾಡುತ್ತಿರುವ ಬೀದಿ ನಾಯಿಗಳು ಹಲವು ಬಾರಿ ಸಾರ್ವಜನಿಕರ ಮೇಲೆ ಧಾಳಿ ಮಾಡಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳೂ ಸಹ ಭಯಾತಂಕದಲ್ಲೇ ಸಂಚರಿಸಬೇಕಿದೆ. ಬೀಡಾಡಿ ನಾಯಿಗಳನ್ನು ಹಿಡಿಯಲು ಕ್ರಮ ಕೈಗೊಳ್ಳುವಂತೆ ಹಲವಷ್ಟು ಬಾರಿ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನ ಶೂನ್ಯವಾಗಿದೆ. ನಾಯಿಗಳನ್ನು ಹಿಡಿದರೆ ಪ್ರಾಣಿದಯಾ ಸಂಘದವರು ನೋಟೀಸ್ ನೀಡುತ್ತಾರೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಅದೇ ನಾಯಿಗಳಿಂದ ಜನಸಾಮಾನ್ಯರು ಕಚ್ಚಿಸಿಕೊಂಡರೆ ಯಾರಿಗೆ ನೋಟೀಸ್ ನೀಡಬೇಕು? ಎಂದು ಸಾರ್ವಜನಿಕರು ಪತ್ರಿಕೆ ಮೂಲಕ ಪ್ರಶ್ನಿಸಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಪಟ್ಟಣದಲ್ಲೇ ಬೀಡು ಬಿಟ್ಟಿರುವ ನಾಯಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಪ.ಪಂ. ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.