ಸೋಮವಾರಪೇಟೆ, ಸೆ. 12: ಜಿಲ್ಲೆಯಲ್ಲಿ ಎದುರಾದ ಪ್ರಕೃತಿ ವಿಕೋಪದಿಂದಾಗಿ ಸಂತ್ರಸ್ತರಾದ ಮಂದಿಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ವಿಶೇಷ ಅನ್ನಭಾಗ್ಯ ಯೋಜನೆಯ ಪಡಿತರಗಳನ್ನು ಪಡೆಯಲು ಇಲ್ಲಿನ ಪ.ಪಂ. ಕಚೇರಿಯಲ್ಲಿ ನೂಕುನುಗ್ಗಲು ಉಂಟಾಯಿತು.

ಪ.ಪಂ. ವ್ಯಾಪ್ತಿಯಲ್ಲಿ 11 ವಾರ್ಡ್‍ಗಳಿದ್ದು, 1230 ಪಡಿತರ ಚೀಟಿದಾರರಿದ್ದಾರೆ. ಎಲ್ಲರಿಗೂ ಆಹಾಯ ಇಲಾಖೆಯಿಂದ ವಿಶೇಷ ಪಡಿತರ ಮಂಜೂರಾಗಿದ್ದು, ಇಂದು ಪಂಚಾಯಿತಿಯಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ನೂರಾರು ಮಂದಿ ಪಡಿತರ ಚೀಟಿದಾರರು ಪಂಚಾಯಿತಿಗೆ ಆಗಮಿಸಿದ ಸಂದರ್ಭ ನೂಕುನುಗ್ಗಲು ಉಂಟಾಯಿತು.

ಬೆಳಿಗ್ಗೆ 10 ಕ್ಕೆ ತೆರೆಯುವ ಕಚೇರಿ ಎದುರು 8 ಗಂಟೆಗೇ ಸರತಿ ಸಾಲಿನಲ್ಲಿ ಸಾರ್ವಜನಿಕರು ನಿಂತಿದ್ದರು. 10 ಗಂಟೆಯ ನಂತರ 4 ಕೌಂಟರ್‍ಗಳನ್ನು ತೆರೆದು ಸಾರ್ವಜನಿಕರಿಂದ ರೇಷನ್ ಕಾರ್ಡ್ ಪರಿಶೀಲಿಸಿ ಅಕ್ಕಿ, ತೊಗರಿಬೇಳೆ, ಸಕ್ಕರೆ, ಉಪ್ಪು, 1 ಲೀಟರ್ ತಾಳೆ ಎಣ್ಣೆ ವಿತರಿಸಲಾಯಿತು.

ಪ್ರತಿಯೋರ್ವ ಕಾರ್ಡ್‍ದಾರರಿಗೂ 5 ಲೀಟರ್ ಸೀಮೆ ಎಣ್ಣೆ ಮಂಜೂರಾಗಿದ್ದು, ಸದ್ಯಕ್ಕೆ ಪಂಚಾಯಿತಿಗೆ ಕ್ಯಾನ್ ಮಾತ್ರ ಬಂದಿದೆ. ಸೀಮೆಎಣ್ಣೆ ಬಂದ ನಂತರ ವಿತರಿಸಲಾಗುವದು ಎಂದು ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.

ಪರಿಹಾರಕ್ಕೂ ರಾಜಕೀಯ ನಂಟು: ಪಟ್ಟಣ ಪಂಚಾಯಿತಿ ಮೂಲಕ ಪರಿಹಾರ ಸಾಮಗ್ರಿಗಳನ್ನು ವಿತರಿಸುವ ಸಂದರ್ಭದಲ್ಲೂ ರಾಜಕೀಯದ ನಂಟು ಬಿಡಲಿಲ್ಲ. ಅಧಿಕಾರಿಗಳು ಮಾತ್ರ ತಮ್ಮಷ್ಟಕ್ಕೆ ತಾವು ಪರಿಹಾರ ವಿತರಣೆ ಮಾಡುತ್ತಿದ್ದರೆ, ಪ.ಪಂ. ಚುನಾವಣಾ ಆಕಾಂಕ್ಷಿಗಳು ಮಾತ್ರ ಬಿರುಸಿನಿಂದ ಓಡಾಟ ನಡೆಸುತ್ತಿದ್ದರು. ಪ.ಪಂ.ಗೆ ಚುನಾವಣೆ ನಿಗದಿಯಾಗಿ ಪ್ರವಾಹದ ಹಿನ್ನೆಲೆ ಮುಂದೂಡಿಕೆಯಾಗಿರುವದರಿಂದ ಮತದಾರರನ್ನು ಸೆಳೆಯಲು ಕಸರತ್ತು ನಡೆಯುತ್ತಿದ್ದು, ಇದು ಪ.ಪಂ. ಆವರಣದಲ್ಲೂ ಕಂಡುಬಂತು. ತಮ್ಮ ವಾರ್ಡ್‍ಗಳ ಮತದಾರರನ್ನು ಕರೆತರುವದು, ಇನ್ನು ಕೆಲವರು ಸರತಿ ಸಾಲಿನಲ್ಲಿ ನಿಂತಿದ್ದ ತಮ್ಮ ವಾರ್ಡ್‍ನ ಮತದಾರರಿಗೆ ಕುಡಿಯುವ ನೀರು, ಬಿಸ್ಕೆಟ್‍ಗಳನ್ನು ಕೊಡುವ ಮೂಲಕ ಪರೋಕ್ಷವಾಗಿ ಮತಗಳಿಗೆ ‘ಗಾಳ’ ಹಾಕುವ ಯತ್ನ ಮಾಡಿದರು.