ಒಡೆಯನಪುರ, ಸೆ. 12: ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ವತಿಯಿಂದ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಯ ಬಳಕೆಯ ಬಗ್ಗೆ ಅರಿವು ಮೂಡಿಸುವದು ಹಾಗೂ ನೈಸರ್ಗಿಕ ಮಣ್ಣು ಮತ್ತು ರಾಸಾಯಿನಿಕ ರಹಿತ ಬಣ್ಣ ಬಳಸಿ ಗಣೇಶ ಮೂರ್ತಿ ತಯಾರಿಸುವ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಾರ್ಯಾಗಾರವನ್ನು ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಉದ್ಘಾಟಿಸಿದರು. ಇಕೋ ಕ್ಲಬ್ ಸಂಚಾಲಕ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸಿ.ಎಸ್. ಸತೀಶ್ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಶಿಕ್ಷಕ ಸತೀಶ್ ಮಾರ್ಗದರ್ಶನ ದಂತೆ ಶಾಲಾ ಮಕ್ಕಳು ಸಂಪ್ರದಾಯದಂತೆ ಜಾನಪದ ಶೈಲಿಯಲ್ಲಿ ಜೇಡಿ ಮಣ್ಣಿನಿಂದ ಬಗೆಬಗೆಯ ಪುಟ್ಟ ಗಣೇಶ ಮೂರ್ತಿಯನ್ನು ಶ್ರದ್ಧೆ ಮತ್ತು ಶ್ರಮದಿಂದ ತಯಾರಿಸಿದರು. ಈ ಸಂದರ್ಭ ಪೋಷಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಕ್ಕಳ ನೈಸರ್ಗಿಕ ಗಣಪ ತಯಾರಿಕೆಯನ್ನು ವೀಕ್ಷಿಸಿದರು.

- ವಿ.ಸಿ. ಸುರೇಶ್ ಒಡೆಯನಪುರ