ಕುಶಾಲನಗರ, ಸೆ.12 : ಸ್ವಾಭಾವಿಕ ಪರಿಸರಕ್ಕೆ ಯಾವದೇ ಧಕ್ಕೆ ಉಂಟುಮಾಡದಂತೆ ಶಬ್ದ ವಾಯು, ಜಲ ಮಾಲಿನ್ಯರಹಿತವಾಗಿ ಹಬ್ಬಗಳನ್ನು ಆಚರಿಸಬೇಕಾಗಿದೆ. ಗಣೇಶ ಮೂರ್ತಿಗಳನ್ನು ನದಿ,ಕೆರೆ ಮತ್ತಿತರ ಜಲಮೂಲಗಳಿಗೆ ಧಕ್ಕೆಯಾಗದಂತೆ ನಿಗದಿಪಡಿಸಿರುವ ಸ್ಥಳದಲ್ಲಿ ಮಾತ್ರ ವಿಸರ್ಜಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಸಲಹೆ ನೀಡಿದರು.

ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಕೋ-ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ ಕುರಿತಂತೆ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಷಕಾರಿ ಮತ್ತು ರಾಸಾಯನಿಕ ಬಣ್ಣಲೇಪಿತ ಗಣೇಶಮೂರ್ತಿಗಳನ್ನು ನದಿ,ಕೆರೆ ಮತ್ತಿತರ ಕಡೆಗಳಲ್ಲಿ ವಿಸರ್ಜಿಸುವದರಿಂದ ಜಲಮಾಲಿನ್ಯ ಉಂಟಾಗಿ ಪರಿಸರಕ್ಕೆ ಧಕ್ಕೆಯುಂಟಾಗುತ್ತದೆ. ಈ ದಿಸೆಯಲ್ಲಿ ನಾಗರಿಕರು ರಾಸಾಯನಿಕ ಬಣ್ಣ, ಸೀಸ,ಪಾದರಸ ಮುಕ್ತ ಹಾಗೂ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಖರೀದಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಓ.ಪಿ.) ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ತಯಾರು ಮಾಡಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವದು ಎಂದು ಗಣೇಶನ್ ಹೇಳಿದರು.

ಪರಿಸರಸ್ನೇಹಿ ಗಣೇಶಮೂರ್ತಿ ಸ್ಥಾಪನೆಯ ಅಗತ್ಯತೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರೂ ಆದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್‍ನ ಉಸ್ತುವಾರಿ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ನೈಸರ್ಗಿಕವಾಗಿ ಜೇಡಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಬಳಕೆ ಮಾಡುವ ಮೂಲಕ ಜಲಮೂಲಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಪರಿಸರ ಸ್ನೇಹಿ ಜನಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ, ಪರಿಸರಸ್ನೇಹಿ ಗಣೇಶ ಚತುರ್ಥಿ ಆಚರಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ ವಿದ್ಯಾರ್ಥಿಗಳು ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು ಎಂದರು.

ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತ ಪ್ರಬಂಧ, ಘೋಷಣೆಗಳ ಬರವಣಿಗೆ ಹಾಗೂ ಗಣೇಶಮೂರ್ತಿ ರಚನೆಯ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ವಿಜೇತಗೊಂಡವರಿಗೆ ಶಿಕ್ಷಕರಾದ ಕೆ.ಆರ್.ರಮೇಶ್, ಕರಿಯಪ್ಪ ಬಹುಮಾನ ವಿತರಿಸಿದರು. ಶಿಕ್ಷಕರಾದ ಎಚ್.ಎಸ್.ಮಹೇಶ್, ಬಿ.ಪ್ರಕಾಶ್, ಉಪನ್ಯಾಸಕರಾದ ಗ್ರೀನಾ, ಚೇತನ್, ಸುನಿಲ್ ಇತರರು ಇದ್ದರು. ಶಿಕ್ಷಕ ರಮೇಶ್ ನಿರ್ವಹಿಸಿದರು.

ಸ್ಪರ್ಧಾ ವಿಜೇತರು : ಕಾರ್ಯಕ್ರಮದ ಅಂಗವಾಗಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಅಗತ್ಯ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಎಚ್.ಆರ್.ಕಿರಣ್ (ಪ್ರಥಮ), ಎನ್.ಕೆ.ದೀಪಿಕಾ (ದ್ವಿತೀಯ), ಬಿ.ಎನ್.ಸುಪ್ರೀತಾ (ತೃತೀಯ) ಬಹುಮಾನ ಪಡೆದರು.

ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿಕೆ ಕುರಿತು ಏರ್ಪಡಿಸಿದ್ದ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಕೆ.ಎ.ಯಶವಂತ (ಪ್ರಥಮ), ಸಿ.ಎ.ಬಸವರಾಜು (ದ್ವಿತೀಯ) ಬಹುಮಾನ ಪಡೆದರು. ಗಣೇಶ ವಿಗ್ರಹ ರಚನೆಯ ಚಿತ್ರಕಲಾ ಸ್ಪರ್ಧೆಯಲ್ಲಿ ಸಂಜನಾ (ಪ್ರಥಮ), ಜಿ.ಎಸ್.ಖುಷಿ (ದ್ವಿತೀಯ), ಎನ್.ಎಂ.ಮೇನಕಾ (ತೃತೀಯ) ಬಹುಮಾನ ಪಡೆದರು. ಪರಿಸರ ಸ್ನೇಹಿ ಘೋಷವಾಕ್ಯ ಸ್ಪರ್ಧೆಯಲ್ಲಿ ಕೆ.ವಿ.ಭಾವನಾ (ಪ್ರಥಮ), ಸರಸು (ದ್ವಿತೀಯ) ಬಹುಮಾನ ಪಡೆದರು.