ಕುಶಾಲನಗರ, ಸೆ. 12: ಪ್ರಕೃತಿ ವಿಕೋಪದಿಂದ ಕುಶಾಲನಗರದ ವಾಲ್ಮೀಕಿ ಭವನದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಲ್ಲಿ ಅಂದಾಜು 100 ರಷ್ಟು ಮಂದಿ ಶಿಬಿರದಿಂದ ತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ. ಆಗಸ್ಟ್ 28 ರಿಂದ ಕುಶಾಲನಗರದ ಪರಿಹಾರ ಕೇಂದ್ರದಲ್ಲಿ 156 ಕುಟುಂಬಗಳ ಒಟ್ಟು 417 ಸದಸ್ಯರು ಆಶ್ರಯ ಪಡೆದಿದ್ದು, ಇದೀಗ 125 ಕುಟುಂಬಗಳ 311 ಸದಸ್ಯರು ಶಿಬಿರದಲ್ಲಿ ಉಳಿದುಕೊಂಡಿದ್ದಾರೆ. ಇವರಲ್ಲಿ 125 ಮಂದಿ ಗಂಡಸರು, 136 ಹೆಂಗಸರು ಮತ್ತು 50 ಮಕ್ಕಳು ಒಳಗೊಂಡಿದ್ದಾರೆ.
ಹಾಲೇರಿ, ಕಾಂಡನಕೊಲ್ಲಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಇಳಿಕೆಯಾಗುತ್ತಿದ್ದಂತೆ ಗ್ರಾಮಗಳ ಸಂಪರ್ಕ ರಸ್ತೆ ತಾತ್ಕಾಲಿಕವಾಗಿ ಸರಿಪಡಿಸಿದ ಕಾರಣ ಕೆಲ ಭಾಗದ ನಿವಾಸಿಗಳು ಹಿಂತಿರುಗಿದ್ದಾರೆ ಎಂದು ಸಾಂತ್ವನ ಕೇಂದ್ರದ ನೋಡಲ್ ಅಧಿಕಾರಿ ಫಿಲಿಪ್‍ವಾಸ್ ಮಾಹಿತಿ ನೀಡಿದ್ದಾರೆ.
ಇದೀಗ ಮಕ್ಕಂದೂರು, ಮಡಿಕೇರಿ ಸುತ್ತಮುತ್ತ ವ್ಯಾಪ್ತಿಯ ಸಂತ್ರಸ್ತರ ಶಿಬಿರದಲ್ಲಿ ಉಳಿದುಕೊಂಡಿದ್ದಾರೆ. ಆಶ್ರಯ ಪಡೆದಿರುವ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಯಾವದೇ ರೀತಿಯ ರೋಗರುಜಿನ ಹಬ್ಬದಂತೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಕೇಂದ್ರದಲ್ಲಿ ದಿನದ 24 ಗಂಟೆಗಳ ಕಾಲ ಇಬ್ಬರು ವೈದ್ಯರು, ಇಬ್ಬರು ನರ್ಸ್, ಫಾರ್ಮಸಿಸ್ಟ್ ಸೇರಿದಂತೆ ಸ್ಥಳದಲ್ಲೇ ಆಸ್ಪತ್ರೆಯ ತುರ್ತು ವಾಹನ ಸೌಲಭ್ಯ ಒದಗಿಸಲಾಗಿದೆ.
ಸಾಮಾನ್ಯ ರೋಗಗಳಾದ ನೆಗಡಿ, ಶೀತ, ತಲೆನೋವುಗಳಿಗೆ ಸಂತ್ರಸ್ತರ ಚಿಕಿತ್ಸೆ ಪಡೆಯುತ್ತಿದ್ದು ಸ್ಥಳದಲ್ಲೇ ಚಿಕಿತ್ಸೆ ಕಲ್ಪಿಸುವದರೊಂದಿಗೆ ಕೆಲವರನ್ನು ಮಡಿಕೇರಿ ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಕರ್ತವ್ಯ ನಿರತ ವೈದ್ಯ ಡಾ. ಭರತ್ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಕುಶಾಲನಗರ ವ್ಯಾಪ್ತಿಯಲ್ಲಿ ನದಿ ನೀರಿನಿಂದ ಸಂತ್ರಸ್ತಗೊಂಡ ಬಡಾವಣೆಯ ನಾಗರಿಕರಿಗೆ ಸಾಂಕ್ರಾಮಿಕ ರೋಗ ಹಬ್ಬದಂತೆ ಇಲಾಖೆಯಿಂದ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವದರೊಂದಿಗೆ ಪ್ರತಿ ಮನೆಮನೆಗೆ ತೆರಳಿ ಜನರಿಗೆ ಅರಿವು ಮೂಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕುಡಿಯುವ ನೀರು ನೇರವಾಗಿ ಬಳಕೆ ಮಾಡದಂತೆ ಸೂಚನೆ ನೀಡಲಾಗಿದ್ದು, ಕುದಿಸಿ ಆರಿಸಿ ಕುಡಿಯುವದು ಹಾಗೂ ನೀರು ಶುದ್ಧೀಕರಣಕ್ಕೆ ಮಾತ್ರೆಗಳನ್ನು ಪ್ರತಿ ಮನೆಗೆ ಸರಬರಾಜು ಮಾಡಲಾಗಿದೆ. ಸಾಂತ್ವನ ಕೇಂದ್ರದಲ್ಲಿ ಅಡುಗೆ ಮನೆಯ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವದರೊಂದಿಗೆ ಅಡುಗೆಯವರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ.
ಸಂತ್ರಸ್ತ ಕೇಂದ್ರಗಳಲ್ಲಿ ನಿಯೋಜಿಸಲಾಗಿದ್ದ ಕಾರವಾರ ಜಿಲ್ಲೆಯ ಅಧಿಕಾರಿಗಳು ತಮ್ಮ ಸ್ವಸ್ಥಾನಕ್ಕೆ ತೆರಳಿದ್ದು ಇದೀಗ ನೋಡಲ್ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಅಧಿಕಾರಿ, ಸಿಬ್ಬಂದಿಗಳು ಸಾಂತ್ವನ ಕೇಂದ್ರದ ನಿರ್ವಹಣೆಯಲ್ಲಿ ತೊಡಗಿದ್ದಾರೆ.