ಶ್ರೀಮಂಗಲ, ಸೆ. 12: ಕೊಡಗು ಜಿಲ್ಲಾಧಿಕಾರಿ ಸೇರಿದಂತೆ ಉಪವಿಭಾಗಧಿಕಾರಿ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರುಗಳು ಪ್ರಾಮಾಣಿಕ ದಕ್ಷ ಅಧಿಕಾರಿಗಳಾಗಿದ್ದು, ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಯಾವದೇ ಕಾರಣಕ್ಕೆ ಜಿಲ್ಲೆಯಿಂದ ವರ್ಗಾವಣೆ ಮಾಡದಂತೆ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ಒತ್ತಾಯಿಸಿದ್ದು, ಒಂದು ವೇಳೆ ಇವರುಗಳ ವರ್ಗಾವಣೆಗೆ ಮುಂದಾದರೆ ವೇದಿಕೆಯಿಂದ ತೀವ್ರ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದೆ.
ಪೊನ್ನಂಪೇಟೆಯಲ್ಲಿ ವೇದಿಕೆಯ ಅಧ್ಯಕ್ಷರಾದ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆಗೆ ಬೆಂಬಲ ನೀಡಿರುವ ಪ್ರಮುಖ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ಎಚ್ಚರಿಕೆ ನೀಡಲಾಯಿತು.
ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಕೆಲವು ಮುಖಂಡರಿಗೆ ಜಿಲ್ಲೆಯ ಪ್ರಾಮಾಣಿಕ ಜಿಲ್ಲಾಧಿಕಾರಿ ಮತ್ತು ಇತರ ಉನ್ನತಾಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಇದರಿಂದ ಇಂತಹ ಅಧಿಕಾರಿಗಳ ವರ್ಗಾವಣೆಗೆ ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲಾಧಿಕಾರಿಗಳು ಮತ್ತು ಇತರ ಉನ್ನತಾಧಿಕಾರಿಗಳು ಕೊಡಗಿನಲ್ಲಿ ನಡೆದ ಭೀಕರ ಪ್ರಕೃತಿ ವಿಕೋಪ ಸಂದರ್ಭ ಶಕ್ತಿ ಮೀರಿ ಹಗಲು-ಇರುಳು ಸೇವೆ ಸಲ್ಲಿಸಿದ್ದಾರೆ ಎಂದು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಗೊಂಡಿತು.
ಪ್ರಕೃತಿ ವಿಕೋಪದ ಸಮಯದ ಸಂಪೂರ್ಣ ಅರಿವು ಇರುವ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಗೊಳಿಸಿದರೆ, ಹೊಸದಾಗಿ ಬರುವ ಜಿಲ್ಲಾಧಿಕಾರಿಗಳಿಂದ ಸಂತ್ರಸ್ತರಿಗೆ ಪುನರ್‍ವಸತಿ ಸೇರಿದಂತೆ ಇತರ ಪರಿಹಾರ ಕಾರ್ಯಗಳಿಗೆ ತೊಡಕಾಗಲಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಕೊಡಗು ಜಿಲ್ಲೆಯ ಭೌಗೋಳಿಕ ಸ್ಥಿತಿ, ಪರಿಸರ ಅತೀ ಸೂಕ್ಷ್ಮವಾಗಿದ್ದು, ಕೊಡಗು ಜಿಲ್ಲೆಯ ಮೂಲಕ ಉದ್ದೇಶಿತ ರೈಲ್ವೆ ಯೋಜನೆಗಳನ್ನು ಶಾಶ್ವತವಾಗಿ ಕೈಬಿಡಬೇಕು. ಹಾಗೆಯೇ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ದ್ವಿಪಥದ ಹೆದ್ದಾರಿಗೆ ಸೀಮಿತಗೊಳಿಸಿ ಮೇಲ್ದರ್ಜೆಗೇರಿಸಲು ಅಭ್ಯಂತರವಿಲ್ಲ. ಆದರೆ, ದ್ವಿಪಥಕ್ಕಿಂತ ಹೆಚ್ಚಿನ ವಿಸ್ತರಣೆ ಜಿಲ್ಲೆಗೆ ಅಗತ್ಯವಿಲ್ಲ. ಇದರಿಂದ ಜಿಲ್ಲೆಯ ಭೌಗೋಳಿಕ ಮೂಲಸ್ವರೂಪಕ್ಕೆ ಗಂಡಾಂತರ ಎದುರಾಗಲಿದೆ. ಜಿಲ್ಲೆಯ ಪರಿಸರಕ್ಕೆ ತೀವ್ರ ಹಾನಿಗೊಳಿಸಿದ ಹಿನ್ನೆಲೆಯಲ್ಲಿ ಉತ್ತರ ಕೊಡಗಿನಲ್ಲಿ ಇದೀಗ ದೊಡ್ಡ ಮಟ್ಟದ ದುರಂತವನ್ನು ಕಂಡಿದ್ದೇವೆ. ಮತ್ತೇ ಕೊಡಗಿನಲ್ಲಿ ಇಂತಹ ದುರಂತಹ ಸಂಭವಿಸದಂತೆ ಎಚ್ಚರ ವಹಿಸಲು ಕೊಡಗಿನ ಮೂಲ ಸ್ವರೂಪ ಹಾಗೂ ಪರಿಸರಕ್ಕೆ ಧಕ್ಕೆ ಉಂಟುಮಾಡುವ ಯಾವದೇ ಯೋಜನೆಗೆ ಶಾಶ್ವತ ತಡೆ ಅಗತ್ಯ ಎಂದು ಸಭೆಯಲ್ಲಿ ಎಚ್ಚರಿಸಲಾಯಿತು.
ಜಿಲ್ಲೆಯ ಮೂಲಸ್ವರೂಪ ಉಳಿಸಿಕೊಳ್ಳಲು ಯಾವದೇ ಕಾಫಿ ತೋಟ ಮತ್ತು ಕೃಷಿ ಭೂಮಿಗಳನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವದನ್ನು ತಕ್ಷಣದಿಂದ ಶಾಶ್ವತವಾಗಿ ನಿಲ್ಲಿಸಬೇಕು. ಈಗಾಗಲೇ ಭೂ ಪರಿವರ್ತನೆಗೆ ನೀಡಿರುವ ಅನುಮತಿಗಳನ್ನು ಪುನರ್ ಪರಿಶೀಲಿಸಿ ರದ್ದುಗೊಳಿಸಬೇಕು, ನದಿ ದಡ ಅತಿಕ್ರಮಣ ತೆರವುಗೊಳಿಸಲು ಸಹ ಸೂಕ್ತ ಕ್ರಮಕೈಗೊಳ್ಳಲು ಒತ್ತಾಯಿಸಲು ನಿರ್ಧರಿಸಲಾಯಿತು.
ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ತುತ್ತಾದ ಗ್ರಾಮಗಳಲ್ಲಿ ಕೃಷಿ ಭೂಮಿ, ಕಾಫಿ ತೋಟಗಳನ್ನು ಕಳೆದುಕೊಂಡಿರುವಾಗ ಸಾಲ ಮರುಪಾವತಿ ಅವಧಿಯನ್ನು 3 ತಿಂಗಳವರೆಗೆ ವಿನಾಯಿತಿಯನ್ನು ಸಂಸದ ಪ್ರತಾಪ್ ಸಿಂಹ ನೀಡಿರುವದು ಸರಿಯಲ್ಲ. ಭೂಮಿಯೇ ಕೊಚ್ಚಿ ಹೋಗಿರುವಾಗ ಸಾಲ ಕಟ್ಟಲು ಸಂತ್ರಸ್ತರಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಸಭೆ, ಇವರೆಲ್ಲರ ಸಂಪೂರ್ಣ ಸಾಲ ಮನ್ನಾ ಮಾಡಿ ವಿಶೇಷ ಪ್ಯಾಕೇಜನ್ನು ಸರಕಾರ ತರಬೇಕು. ಇದಲ್ಲದೆ, ಜಿಲ್ಲೆಯಲ್ಲಿ ಮಹಾ ಮಳೆಗೆ ಹಾನಿಯಾಗಿರುವ ಪ್ರದೇಶದ ರೈತರು, ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಿ ಕೂಡಲೇ ಹೊಸ ಸಾಲ ನೀಡಬೇಕು. ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಗ್ರಾಮಗಳ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಗೆ ಸೇರಲು ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ವಿಶೇಷ ಮನವಿ ಸಲ್ಲಿಸಿ ಅವಕಾಶ ಕಲ್ಪಿಸಬೇಕು ಎಂದು ಸರಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಕೃಷಿ ಭೂಮಿ, ಕಾಫಿ ತೋಟ ನಾಶವಾಗಿದ್ದು, ಭೌಗೋಳಿಕ ಸ್ವರೂಪವೇ ಬದಲಾಗಿದೆ. ಆದ್ದರಿಂದ ಉಳಿದಿರುವ ಜಾಗ, ನಕ್ಷೆಗಳನ್ನು ತಯಾರಿಸಲು ಜಿಲ್ಲಾಡಳಿತ ಖಾಸಗಿ ಸರ್ವೆಗಳನ್ನು ಬಳಸಿಕೊಳ್ಳಬೇಕು. ಇದರಿಂದ ಸರಕಾರ ಪರಿಹಾರ ಕಾರ್ಯ ಕೈಗೊಳ್ಳಲು ಹಾಗೂ ನೈಜ ಫಲಾನುಭವಿಗಳಿಗೆ ಶೀಘ್ರ ತಲಪಿಸಲು ಅನುಕೂಲ ವಾಗಲಿದೆ.
ಜಿಲ್ಲೆಯಲ್ಲಿ ಲಂಗುಲಗಾಮು ಇಲ್ಲದೆ ನಡೆಯುತ್ತಿರುವ ಪ್ರವಾಸೋದ್ಯಮಕ್ಕೆ ಸೂಕ್ತ ನಿಯಮ ಜಾರಿಗೊಳಿಸಬೇಕಾಗಿದೆ. ಜಿಲ್ಲೆಯ ಪ್ರವಾಸೋದ್ಯಮದಿಂದ ಬರುವ ಆಧಾಯ ಮೂಲನಿವಾಸಿಗಳಿಗೆ ಧಕ್ಕಬೇಕು. ಇದಕ್ಕೆ ಪೂರಕವಾಗಿ ಜಿಲ್ಲಾ ಪ್ರವಾಸೋದ್ಯಮದ ಕೌನ್ಸಿಲನ್ನು ಸರಕಾರ ಅಸ್ಥಿತ್ವಕ್ಕೆ ತರಬೇಕೆಂದು ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲಾಯಿತು.
ಸಭೆಯಲ್ಲಿ ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಮುತ್ತಣ್ಣ, ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿಸುಬ್ಬಯ್ಯ, ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಮಲ್ಲಮಾಡ ಪ್ರಭು ಪೂಣಚ್ಚ, ಯುಕೊ ಸಂಘಟನೆಯ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಬ್ರೀಗೇಡಿಯರ್ ಮಾಳೇಟಿರ ಶ್ಯಾಮ್ ದೇವಯ್ಯ, ಪುತ್ತಮನೆ ಸ್ಮರಣ್, ಮತ್ತಿತರರು ಹಾಜರಿದ್ದರು.