ಮಡಿಕೇರಿ, ಸೆ. 14: ತಪ್ಪು ಗ್ರಹಿಕೆಯಿಂದಾಗಿ ಆರಂಭಗೊಂಡ ಹಲ್ಲೆ ಪ್ರಕರಣ ದೊಡ್ಡ ಸಂಘರ್ಷಕ್ಕೆ ಎಡೆ ಮಾಡಿಕೊಡುವದರೊಳಗೆ ಪೊಲೀಸರ ಮಧ್ಯಪ್ರವೇಶದಿಂದ ಅಶಾಂತಿ ವಾತಾವರಣ ತಪ್ಪಿತ್ತು. ಘಟಣೆಯಲ್ಲಿ ಇಬ್ಬರು ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರು.
ಈ ಹಿನ್ನೆಲೆಯಲ್ಲಿ ಐವರನ್ನು ಬಂಧಿಸಲಾಗಿದೆ. ಉಡೋತ್‍ಮೊಟ್ಟೆಯ ಸೋಮಯ್ಯ ಚೇರಂಗಾಲದ ಪುರಷೋತ್ತಮ ರವೀಂದ್ರ, ಕೊಟ್ಟಮುಡಿಯ ರಜಾಕ್ ಹಾಗೂ ರಿಯಾಜ್ ಇವರುಗಳು ಬಂಧಿತ ಆರೋಪಿಗಳಾಗಿದ್ದಾರೆ. ನಿನ್ನೆ ರಾತ್ರಿ 7.30ರ ಸಮಯದಲ್ಲಿ ಆರಂಭಗೊಂಡ ಘಟನೆ ಬಗ್ಗೆ ಕಾಲೂರು ಗ್ರಾಮದ ಕೆ.ಕೆ. ತಮ್ಮಯ್ಯ ಅವರು ಪೊಲೀಸರಿಗೆ (ಮೊದಲ ಪುಟದಿಂದ) ನೀಡಿರುವ ಪುಕಾರಿನಲ್ಲಿ ಈ ಕೆಳಗಿನಂತೆ ವಿವರಿಸಿದ್ದಾರೆ.ಇತ್ತೀಚೆಗೆ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಕಾಲೂರಿನಲ್ಲಿ ಸಾಕಿಕೊಂಡಿದ್ದ ಒಂದು ಹಸು ಹಾಗೂ 3 ಎತ್ತುಗಳನ್ನು ನೋಡಿ ಕೊಳ್ಳಲು ಕಷ್ಟವಾದ್ದರಿಂದ ತನ್ನ ಪತ್ನಿಯ ಊರಾದ ಪೇರೂರಿಗೆ ನಾಪೋಕ್ಲುವಿನ ರಜಾಕ್ ಎಂಬವರ ಪಿಕ್‍ಅಪ್ ಜೀಪ್‍ನಲ್ಲಿ ತೆಗೆದು ಕೊಂಡು ಹೋಗುತ್ತಿದ್ದೆ. ರಾತ್ರಿ 7.30ರ ಸಮಯದಲ್ಲಿ ಅಪ್ಪಂಗಳ ತಲಪುವಾಗ ಎಂಟು-ಹತ್ತು ಜನರು ಜೀಪನ್ನು ತಡೆದು ನಿಲ್ಲಿಸಿ ರಜಾಕ್‍ನ ಮೇಲೆ ಹಲ್ಲೆ ನಡೆಸಿದ್ದು, ಅವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ವಿನಂತಿ!
ಈ ಹಲ್ಲೆ ಘಟನೆ ಸುದ್ದಿಯಾ ಗುತ್ತಿದ್ದಂತೆ ಸುತ್ತಮುತ್ತಲಿನ ಹಾಗೂ ಸ್ಥಳೀಯರ ಮೇಲೆ ಹಲ್ಲೆ ಮಾಡಲಾರಂಭಿಸಿದರು. ಹಲವಷ್ಟು ಯುವಕರು ಅಪ್ಪಂಗಳದತ್ತ ಧಾವಿಸಿ ಬಂದರು ಹಾಗೂ ಸ್ಥಳೀಯರ ಮೇಲೆ ಹಲ್ಲೆ ಮಾಡಲಾರಂಭಿಸಿದರು. ಇದೇ ಸಂದರ್ಭದಲ್ಲಿ ಅಪ್ಪಂಗಳದಲ್ಲಿ ಕೂಲಿ ಕೆಲಸ ಮಾಡುತ್ತಿರುವ ಮಧು ಎಂಬ ಯುವಕನ ಮೇಲೆ ಅಪರಿಚಿತನೊಬ್ಬ ದೊಣ್ಣೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ಘಾಸಿಗೊಳಿಸಿದ ಘಟನೆಯ ವಿವರ ತಿಳಿದ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಗುಂಪನ್ನು ಚದುರಿಸಿ ಅನಾಹುತವನ್ನು ತಪ್ಪಿಸಿದರು. ಗಾಯಗೊಂಡಿರುವ ರಜಾಕ್ ಹಾಗೂ ಮಧು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ : ಅಪ್ಪಂಗಳದಲ್ಲಿ ತಾ. 13ರ ರಾತ್ರಿ ಗೌರಿ ಗಣೇಶ ವಿಸರ್ಜನೆ ಸಂದರ್ಭ ವ್ಯಕ್ತಿಯೊಬ್ಬರು ಅಕ್ರಮವಾಗಿ ಗೋವನ್ನು ಸಾಗಿಸುತ್ತಿದ್ದು, ಉತ್ಸವ ಸಮಿತಿಯವರು ಪ್ರಶ್ನಿಸಿದ ಸಂದರ್ಭ ಗೋ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಪ್ರಶ್ನೆ ಮಾಡುತ್ತಿದ್ದವರ ಮೇಲೆ ವಾಹನ ಚಲಾಯಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಗಳಿಗೆ ದೂರು ನೀಡಿದೆ ಘಟಣೆ ನಡೆಯುತ್ತಿದ್ದಂತೆ ವಾಹನ ಚಾಲಕ ಬೆಟ್ಟಗೇರಿ ಮತ್ತು ಕೊಟ್ಟಮುಡಿಯ ವಿಭಾಗದ ಒಂದು ಕೋಮಿನ ಜನರನ್ನು ಕರೆಯಿಸಿ, ಮಧು, ಹೇಮಂತ್, ಮಂಜು, ತಿರುಪತಿ ಮತ್ತಿತರರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿರುವದಾಗಿ ದೂರಿನಲ್ಲಿ ವಿವರಿಸಲಾಗಿದೆ. ಇದೇ ಸಂದರ್ಭ ನಾಪೋಕ್ಲು ಭಾಗದಿಂದ ರೋಗಿ ಯೊಬ್ಬರನ್ನು ಮಡಿಕೇರಿಗೆ ಕರೆದುಕೊಂಡು ಬರುತ್ತಿದ್ದಾಗ ಆಟೋ ಚಾಲಕ ಪಿ.ಬಿ. ಸಂದೇಶ್ ಎಂಬವರಿಗೆ ಕೊಟ್ಟಮುಡಿಯ ಕೇಮಾಟ್ ಎಂಬಲ್ಲಿ ಹಲವು ವ್ಯಕ್ತಿಗಳು ಹಲ್ಲೆ ನಡೆಸಿದ್ದು, ನಿರ್ದಿಷ್ಟ ಸಮುದಾಯವನ್ನು ಗುರಿ ಯಾಗಿರಿಸಿ ಕೋಮುದ್ವೇಷ ಸಾಧಿಸುವ ಹಲ್ಲೆ ಇದಾಗಿದ್ದು, ಅಪರಾಧಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಸಮಿತಿಯ ಪರವಾಗಿ ಅಜಿತ್ ಹಾಗೂ ಚೇತನ್ ಇವರುಗಳು ಒತ್ತಾಯಿಸಿದ್ದಾರೆ.