ವೀರಾಜಪೇಟೆ, ಸೆ. 14: ಕಳೆದ ಒಂದು ತಿಂಗಳ ಹಿಂದೆ ಉತ್ತರ ಕೊಡಗಿನ ಅನೇಕ ಭಾಗಗಳಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ದುರಂತದಿಂದ ಅನೇಕ ಮಂದಿ ಆಸ್ತಿ ಪಾಸ್ತಿ ಮನೆ ಮಠ ಕಳೆದುಕೊಳ್ಳಲು ಕುಶಾಲನಗರದ ಬಳಿಯಿರುವ ಹಾರಂಗಿ ಅಣೆಕಟ್ಟೆಯಲ್ಲಿ ಶೇಖರವಾಗಿರುವ ಹಿನ್ನೀರು ಕಾರಣ ಎಂದು ಸೋಮವಾರಪೇಟೆಯ ಮಾಹಿತಿ ಹಕ್ಕು ಐ.ಎ.ಎಸ್. ಮಾಜಿ ಅಧಿಕಾರಿ ಜೆ.ಎಸ್.ವಿರೂಪಾಕ್ಷ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಕುರಿತು ರಾಜ್ಯ ಸರಕಾರ ತುರ್ತು ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಇಂದು ಆದೇಶ ನೀಡಿದೆ.
ಮುಂಗಾರು ಮಳೆಯ ಸಮಯದಲ್ಲಿ ಹಾರಂಗಿ ಅಣೆಕಟ್ಟೆಯಲ್ಲಿ ಹೇರಳವಾಗಿ ಶೇಖರಣೆಯಾಗಿದ್ದ ಹಿನ್ನೀರನ್ನು ಅಣೆಕಟ್ಟೆಯಿಂದ ಹೊರಗಡೆಗೆ ಬಿಡಲು ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಇದರಿಂದ ಉತ್ತರ ಕೊಡಗಿನ ಮಕ್ಕಂದೂರು ಸೇರಿದಂತೆ ಅನೇಕ ಭಾಗಗಳು, ಬೆಟ್ಟದ ಪ್ರದೇಶ ವಿವಿಧ ಹಂತಗಳಲ್ಲಿ ಕುಸಿಯಲು ಪ್ರಾರಂಭಗೊಂಡಿತು. ಅಣೆಕಟ್ಟೆಯಲ್ಲಿದ್ದ ಯಥೇಚ್ಚವಾದ ನೀರನ್ನು ಹೊರಗಡೆಗೆ ಬಿಟ್ಟಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ. ಮಳೆಗಾಲದಲ್ಲಿ ಕೊಡಗಿನಲ್ಲಿ ಭಾರೀ ಮಳೆ ಬರುತ್ತದೆ. ಭಾರೀ ಮಳೆಯೇ ಪ್ರಕೃತಿ ವಿಕೋಪಕ್ಕೆ ಕಾರಣವಾಗುವ ಸಾಧ್ಯತೆ ಇಲ್ಲ. ಇದರ ಕುರಿತು ಕೂಲಂಕುಷ ತನಿಖೆಯಾಗಬೇಕು ಎಂದು ಕೋರಿ ವಿರೂಪಾಕ್ಷ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪರಿಶೀಲಿಸಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಹಾಗೂ ದಿನೇಶ್ ಮಹೇಶ್ವರಿ ಅವರುಗಳ ದ್ವಿ ಸದಸ್ಯ ಪೀಠ ಈ ಆದೇಶ ನೀಡಿದೆ,
ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿದಾರರ ಪರ ವಕೀಲ ಎನ್.ರವೀಂದ್ರನಾಥ್ ಕಾಮತ್ ವಾದಿಸಿದರು.