ಸೋಮವಾರಪೇಟೆ, ಸೆ. 14: ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಪ್ರಕರಣದಡಿ ದಾಖಲಾಗಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸ ಬೇಕೆಂದು ದಲಿತ ಸಂಘಟನೆಗಳ ತಾಲೂಕು ಒಕ್ಕೂಟ ಆಗ್ರಹಿಸಿದೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಟಿ.ಈ. ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ಮಸಗೋಡು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಶೈಲಾ ಮತ್ತು ಸುಧೀರ್ ದಂಪತಿಗೆ ತಲಾ 10 ಸಾವಿರ ಹಣ ನೀಡಿದ್ದರು. ಇದನ್ನು ಕರವೇ ತಾಲೂಕು ಅಧ್ಯಕ್ಷ ದೀಪಕ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಮತ್ತು ಅವರ ಪತಿ ಸುರೇಶ್ ಅವರುಗಳು ಪಡೆದುಕೊಂಡು ಜಾತಿ ನಿಂದನೆ ಮಾಡಿದ್ದಾರೆ. ಇದರೊಂದಿಗೆ ಕೊಠಡಿಯಲ್ಲಿ ಕೂಡಿ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಪ್ರಕರಣವನ್ನು ವಿವರಿಸಿದರು. ತಾ. 5 ರಂದು ಸೋಮವಾರಪೇಟೆ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿ ಕೇವಲ ಎನ್‍ಸಿಆರ್ ಮಾಡಲಾಗಿತ್ತು. ನಂತರ ದಲಿತ ಸಂಘಟನೆಗಳ ಮುಖಂಡರು ಸಂತ್ರಸ್ತರ ನೆರವಿಗೆ ನಿಂತು, ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳ ಗಮನ ಸೆಳೆದ ಮೇರೆ ತಾ. 8 ರಂದು ಮೂವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದರು. ತಕ್ಷಣ ಆರೋಪಿ ಗಳನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿವಿಧ ದಲಿತಪರ ಸಂಘಟನೆಗಳ ಸಹಕಾರದೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಸುರೇಶ್ ಎಚ್ಚರಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜನಾರ್ಧನ್, ಖಜಾಂಚಿ ಎಸ್.ಎ. ಪ್ರತಾಪ್, ಸಂಘಟನಾ ಕಾರ್ಯದರ್ಶಿ ಹೂವಯ್ಯ, ಪದಾಧಿಕಾರಿ ತೋಳೂರು ಶೆಟ್ಟಳ್ಳಿಯ ವಿಜಯಕುಮಾರ್ ಅವರುಗಳು ಉಪಸ್ಥಿತರಿದ್ದರು.