ಸುಂಟಿಕೊಪ್ಪ, ಸೆ. 14 : ಬಾಲಕನೋರ್ವ ಮನೆಯ ಹಿಂಬದಿಯ ಸೀಬೆಹಣ್ಣಿನ ಮರದಲ್ಲಿ ಉಯ್ಯಾಲೆ ಆಡುತ್ತಿದ್ದ ಸಂದರ್ಭ ಹಗ್ಗದಿಂದ ಅನಿರೀಕ್ಷಿತವಾಗಿ ಜಾರಿದ ಪರಿಣಾಮ ಕುತ್ತಿಗೆ ಭಾಗಕ್ಕೆ ತೀವ್ರವಾದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.ಇಲ್ಲಿನ ಗದ್ದೆಹಳ್ಳದ ಯಂಕನ ತಮ್ಮಯ್ಯ ಎಂಬವರ ಲೈನ್ ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ಶೇಖರ ಅವರ ಪುತ್ರ ಗದ್ದೆಹಳ್ಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಪ್ರವೀಣ (11) ಎಂಬಾತನೇ ಸಾವಿಗೀಡಾದ ಬಾಲಕ.ಈತ ಶಾಲೆಗೆ ತೆರಳದೆ ಮನೆಯಲ್ಲಿ ತಾಯಿಯೊಂದಿಗೆ ಉಳಿದುಕೊಂಡಿದ್ದು, ತಾಯಿ ಸಂಜೆ ಕಾರ್ಯನಿಮಿತ್ತ ಹೊರಗಡೆ ತೆರಳಿದ್ದ ವೇಳೆ ಮನೆಯ ಹಿಂಭಾಗದ ಸೀಬೆಹಣ್ಣಿನ ಮರದಲ್ಲಿ ಪ್ಲಾಸ್ಟಿಕ್ ಚೀಲವನ್ನು ಕತ್ತರಿಸಿ ಅದರಿಂದ ಮಾಡಿದ ಉಯ್ಯಾಲೆಯಲ್ಲಿ ಈತ ಆಟವಾಡುತ್ತಿದ್ದ. ಒಮ್ಮೆಲೇ ಹಗ್ಗದಿಂದ ಜಾರಿದ ಪರಿಣಾಮ ಹಗ್ಗವು ಕುತ್ತಿಗೆಗೆ ಸಿಕ್ಕಿ ಅಸುನೀಗಿದ್ದಾನೆ.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷ್ಷೆಗೆ ಒಳಪಡಿಸಲಾಗಿದೆ.