q ಮನೆಯಿಲ್ಲ.., ಜಾಗವಿಲ್ಲ.., ಮುಂದಿನ ದಾರಿಯೂ ತಿಳಿದಿಲ್ಲ q ಕೊಡವ ಸಮಾಜದ ನಿಜ ಸಂತ್ರಸ್ತರ ಅಳಲು
ಸೋಮವಾರಪೇಟೆ, ಸೆ. 14: ಇವರುಗಳಿಗೆ ವಾಸಕ್ಕಿದ್ದ ಮನೆ ಈಗಿಲ್ಲ.., ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಾಗವೂ ಇಲ್ಲ.., ಗ್ರಾಮಕ್ಕೆ ತೆರಳಲು ರಸ್ತೆಯೂ ಇಲ್ಲ.., ಮುಂದಿನ ಭವಿಷ್ಯದ ಬಗ್ಗೆ ಏನೆಂಬದೇ ತಿಳಿದಿಲ್ಲ! ಭವಿಷ್ಯವೇ ಗಾಢಾಂಧಕಾರಕ್ಕೆ ತಳ್ಳಲ್ಪಟ್ಟಿರುವ ಕೆಲ ಕುಟುಂಬಗಳು ಇಲ್ಲಿನ ಕೊಡವ ಸಮಾಜದಲ್ಲಿದ್ದು, ಇದರಲ್ಲಿ ಒಂದೆರಡು ಕುಟುಂಬಗಳು ಲೈನ್ಮನೆ, ನೆಂಟರಿಷ್ಟರ ಮನೆ ಸೇರುವ ಮನಸ್ಸು ಮಾಡಿವೆ.
ಇಲ್ಲಿನ ಕೊಡವ ಸಮಾಜದಲ್ಲಿ ಪ್ರಸ್ತುತ 4 ನಿಜವಾದ ಸಂತ್ರಸ್ತ ಕುಟುಂಬಗಳು ತಂಗಿದ್ದು, ಸರ್ಕಾರಿ ಅಧಿಕಾರಿಗಳು ಆಗಾಗ್ಗೆ ಆಗಮಿಸಿ, ನೀವು ಇಲ್ಲಿರೋದು ಬೇಡ, ಬೇರೆ ಪರಿಹಾರಕ್ಕೆ ಕೇಂದ್ರಕ್ಕೆ ಹೊರಡಿ ಎಂದು ತಾಕೀತು ಮಾಡುತ್ತಿದ್ದಾರೆ. ನಮಗೆ ಅಲ್ಲಿ ಹೋದರೆ ಇಲ್ಲಿನಷ್ಟು ಸೌಲಭ್ಯ ಇರುವದಿಲ್ಲ, ನಾವು ಇಲ್ಲೇ ಇರುತ್ತೇವೆ. ಸರ್ಕಾರದಿಂದ ನ್ಯಾಯೋಚಿತ ಸೌಲಭ್ಯ ಒದಗಿಸಿ ಎಂದು ಕೈಮುಗಿದು ಮನವಿ ಮಾಡಲಷ್ಟೇ ಈ ಕುಟುಂಬಗಳು ಶಕ್ತವಾಗಿವೆ.
ಪ್ರಸ್ತುತ ಕೊಡವ ಸಮಾಜದಲ್ಲಿ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಕಲ್ಲಡಿ ಗ್ರಾಮದ ತಾಚಮಂಡ ಲೀಲಾವತಿ, ಯಡೂರಿನ ಅಂತೋಣಿ, ತಾಕೇರಿ ಗ್ರಾಮದ ಗೌರಮ್ಮ, ಮುಕ್ಕೋಡ್ಲಿನ ಪೂಣಚ್ಚ, ಕಲ್ಲಡಿಯ ಭಾಗ್ಯವತಿ ಅವರ ಕುಟುಂಬದ ಒಟ್ಟು 11 ಮಂದಿ ತಂಗಿದ್ದು, ಕೆಲವರು ಲೈನ್ ಮನೆಗಳಿಗೆ ತೆರಳುವ ಮನಸ್ಸು ಮಾಡಿದ್ದಾರೆ.
ತಾಕೇರಿ ಗ್ರಾಮದ ಗೌರಮ್ಮ ಅವರಿಗೆ ನಾಲ್ವರು ಹೆಣ್ಣುಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿ ಹೊರಗಡೆ ನೆಲೆಸಿದ್ದಾರೆ. ಭಾರೀ ಮಳೆಗೆ ಗೌರಮ್ಮ ಅವರ ಮನೆ ನೆಲಸಮಗೊಂಡಿದ್ದು, ಕೈಗೆ ಸಿಕ್ಕ ಕೆಲವೊಂದಿಷ್ಟು ವಸ್ತುಗಳೊಂದಿಗೆ ಜೀವ ಉಳಿಸಿಕೊಂಡು ಕಳೆದ ಆ.16ರಂದು ಕೊಡವ ಸಮಾಜ ಸೇರಿದ್ದಾರೆ. ಇದ್ದ ಮನೆಯಂತೂ ಬಿದ್ದು ಹೋಯ್ತು.,ಸರ್ಕಾರದವರು ಮನೆ ನಿರ್ಮಿಸಿಕೊಟ್ಟರೆ ಜೀವನ ಸಾಗಿಸಬಹುದು ಎಂದು ಗೌರಮ್ಮ ಹೇಳುತ್ತಾರೆ.
ಕಲ್ಲಡಿ ಗ್ರಾಮದ ತಾಚಮಂಡ ಲೀಲಾವತಿ ಅವರ ಮನೆಯ ಎರಡೂ ಬದಿಗಳಲ್ಲಿ ಭಾರೀ ಬೆಟ್ಟ ಕುಸಿತ ಉಂಟಾಗಿದ್ದು, ಮನೆ ಇದೆಯೋ ಇಲ್ಲವೋ ಎಂಬದೇ ತಿಳಿಯದಾಗಿದೆ. ಈ ಭಾಗದಲ್ಲಿ ಕುರದಮೊಟ್ಟೆ ಹಾಗೂ ನಳ್ಳಿಬರಿ ಬೆಟ್ಟ ಕುಸಿತಗೊಂಡಿದ್ದು, ಇಂದಿಗೂ 8 ಕಿ.ಮೀ.ನಷ್ಟು ಪ್ರದೇಶದ ಭೂಮಿ ಬಿರುಕುಬಿಟ್ಟಿದೆ. ಮಳೆ ಬಿದ್ದರೆ ಇದೂ ಕುಸಿದು ಸರ್ವವೂ ಭೂಸಮಾಧಿಯಾಗುವ ಸಂಭವವಿರುವದರಿಂದ ಲೀಲಾವತಿ ಕುಟುಂಬ ಅತ್ತ ಹೋಗಲೂ ಭಯಪಡುವಂತಾಗಿದೆ.
ಇದರೊಂದಿಗೆ ಕಲ್ಲಡಿಯಲ್ಲಿರುವ ಆಳಮಂಡ ಸುರೇಶ್, ಮದನ್, ತಾಚಮಂಡ ಭಾಗ್ಯವತಿ, ರಾಣಿ, ಕರುಂಬಯ್ಯ, ಆಳಮಂಡ ದಿನೇಶ್, ಆರುಡ ಉತ್ತಪ್ಪ, ರಾಜಪ್ಪ, ಸೋಮಯ್ಯ ಅವರುಗಳ ಮನೆಯೂ ಅಪಾಯಕಾರಿಯಾಗಿದ್ದು, ವಾಸಕ್ಕೆ ಅಯೋಗ್ಯವಾಗಿದೆ. ಮಳೆ ಬಂದರೆ ಬಾಯ್ಬಿಟ್ಟಿರುವ ಭೂಮಿ ಕುಸಿಯುವ ಸಂಭವವಿದೆ. ಭೂಮಿ ಕುಸಿದರೆ 10 ಮನೆಗಳೂ ಕಣ್ಮರೆಯಾಗಲಿವೆ ಎಂದು ಲೀಲಾವತಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಲೀಲಾವತಿ ಅವರ ಮಗ ಮಾದಾಪುರದ ಶಾಲೆಯಲ್ಲಿ 7ನೇ ತರಗತಿ ಕಲಿಯುತ್ತಿದ್ದ ರಕ್ಷಿತ್, ಸದ್ಯ ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಸಂತ್ರಸ್ತರಾಗಿ ಕೊಡವ ಸಮಾಜದಲ್ಲಿರುವ ತಾಚಮಂಡ ಭಾಗ್ಯವತಿ ಮಾತನಾಡಿ, ನಮ್ಮ ಮನೆಯ ಕೆಳಭಾಗ ಭಾರೀ ಭೂಕುಸಿತವಾಗಿದ್ದು, ಮೂರು ಮೀಟರ್ ದೂರಕ್ಕೆ ಬರೆ ನಿಂತಿದೆ. ಮೇಲ್ಭಾಗದಲ್ಲೂ ಭೂಮಿ ಬಾಯಿ ಬಿಟ್ಟಿದೆ. ಮನೆಯಿಂದ ಅನತಿ ದೂರದಲ್ಲಿ ಬೆಟ್ಟ ಕುಸಿದಿದ್ದು, ಮನೆಗೆ ತೆರಳುವ ಮಾರ್ಗ ಸಂಪೂರ್ಣ ಮುಚ್ಚಲ್ಪಟ್ಟಿದೆ. ದೂರದಿಂದ ಮನೆ ಕಾಣುತ್ತಿದ್ದು, ಸನಿಹಕ್ಕೆ ಹೋಗಲು ಅಸಾಧ್ಯವಾಗಿದೆ. ಇದರೊಂದಿಗೆ ಬಿಳಿಗೇರಿಯಿಂದ ತಾಕೇರಿವರೆಗೆ ಭೂಮಿ ಬಿರುಕು ಬಿಟ್ಟಿದ್ದು, ಮಳೆ ಸುರಿದರೆ ಹೆಚ್ಚಿನ ಅಪಾಯ ಕಟ್ಟಿಟ್ಟ ಬುತ್ತಿ. ನಮಗೆ ಅಲ್ಲಿಗೆ ಹೋಗೋಕೂ ಭಯವಾಗುತ್ತಿದೆ ಎಂದು ಆತಂಕ ಹೊರಹಾಕಿದ್ದಾರೆ.
ನಮ್ಮ ಮನೆಯ ಪರಿಸ್ಥಿತಿ ಹೇಗಿದೆಯೋ ಏನೋ? 1 ಏಕರೆ ಗದ್ದೆ, 2 ಏಕರೆ ಕಾಫಿ ತೋಟ ಸೇರಿದಂತೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ. ಮನೆಯಂತೂ ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ರಸ್ತೆ ಆದ ಮೇಲೆ ಬಂದು ವೀಕ್ಷಣೆ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಮಗೆ ಬೇರೆಡೆ ಪುನರ್ವಸತಿ ಕಲ್ಪಿಸಿದರೆ ಮಕ್ಕಳೊಂದಿಗೆ ಹೇಗೋ ಜೀವನ ಸಾಗಿಸುತ್ತೇವೆ. ಸರ್ಕಾರ ನಮ್ಮಂತಹ ನಿಜವಾದ ಸಂತ್ರಸ್ತರಿಗೆ ನೆರವಾಗಬೇಕು ಎಂದು ಭಾಗ್ಯವತಿ ಅವರು ಒತ್ತಾಯಿಸುತ್ತಾರೆ.
ಭಾರೀ ಮಳೆಗೆ ಮನೆ ಕುಸಿದ ತಕ್ಷಣ ಕೊಡವ ಸಮಾಜಕ್ಕೆ ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ಕೊಡವ ಸಮಾಜದವರು ಉತ್ತಮವಾಗಿ ನೋಡಿಕೊಂಡಿದ್ದಾರೆ. ಎಲ್ಲಾ ಸೌಕರ್ಯ ಕಲ್ಪಿಸಿದ್ದಾರೆ. ಚರ್ಚ್ನವರು ಬಂದು ಕರೆದರೂ ಸಹ ನಾನು ಹೋಗಿಲ್ಲ. ಇಲ್ಲಿ ಯಾವದೇ ಭೇದ ಭಾವವಿಲ್ಲದೇ ಚೆನ್ನಾಗಿ ನೋಡಿಕೊಂಡಿದ್ದಾರೆ. ಇವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ ಎಂದು ಕುಟುಂಬ ಸಹಿತರಾಗಿ ಕೊಡವ ಸಮಾಜದಲ್ಲಿದ್ದ ಯಡೂರು ಗ್ರಾಮದ ಅಂತೋಣಿ ಹೇಳುವಾಗ, ಕಣ್ಣುಗಳಲ್ಲಿ ಕೃತಜ್ಞತೆಯ ಹನಿಗಳು ಇಣುಕಾಡಿದವು.
ಮನೆಯ ಹಿಂದೆ ಬರೆ ಕುಸಿದು ವಾಸಕ್ಕೆ ಅಯೋಗ್ಯವಾಗಿದೆ. ನಾಟಿ ಮಾಡಿದ್ದ ಒಂದೂವರೆ ಏಕರೆ ಹಾಗೂ ನಾಟಿಗೆ ಸಿದ್ದವಿದ್ದ 3 ಏಕರೆ ಗದ್ದೆ ಸಂಪೂರ್ಣ ನಾಶವಾಗಿದೆ. ತೋಟವಂತೂ ಸಂಪೂರ್ಣ ಹಾನಿಗೀಡಾಗಿದೆ. ಮನೆ ಹಿಂಬದಿಯ ಬರೆ ಕುಸಿತದಿಂದ ಮನೆಗೆ ಹೋಗಲು ಹೆದರಿಕೆಯಾಗುತ್ತಿದೆ. ಹೆಂಡತಿ ಮಕ್ಕಳನ್ನು ಹೇಗೆ ನೋಡಿಕೊಳ್ಳೋದು ಎಂಬ ಬಗ್ಗೆ ಚಿಂತೆ ಮೂಡಿದೆ. ಸರ್ಕಾರದವರು ಮನೆ ಮಾಡಿಕೊಟ್ಟರೆ ಮತ್ತೆ ಜೀವನ ಕಟ್ಟಿಕೊಳ್ಳುತ್ತೇವೆ ಎಂದು ಕೊಡವ ಸಮಾಜದಲ್ಲಿರುವ ಮುಕ್ಕೋಡ್ಲು ಆವಂಡಿ ಗ್ರಾಮದ ಕನ್ನಿಕಂಡ ಪೂಣಚ್ಚ ನೆರವು ಯಾಚಿಸುತ್ತಾರೆ.
- ವಿಜಯ್