ಮಡಿಕೇರಿ, ಸೆ. 12: ಸಮಾಜ ಸೇವೆಗೆ ಅನೇಕ ಸಂಘಟನೆಗಳಿವೆ. ಆದರೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ರೋವರ್ಸ್ ಮತ್ತು ರೇಂಜರ್ಸ್ ಘಟಕ ಕೊಡಗಿನಲ್ಲಿ ಅಸ್ತಿತ್ವದಲ್ಲಿದ್ದು, ಅದರಲ್ಲೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಮಾಜಮುಖಿ ಸೇವಾ ಕಾರ್ಯ ಮಾಡುತ್ತ ಬರುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಪ್ರಕೃತಿ ವಿಕೋಪವಾದ ಸಂದರ್ಭ ರೋವರ್ಸ್ ನಾಯಕ ವನಿತ್ ಕುಮಾರ್ ನೇತೃತ್ವದಲ್ಲಿ ವೀರಾಜಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಒಂದು ವಾರ ಸೇವಾ ಕಾರ್ಯ ನಿರ್ವಹಿಸಿದ ಈ ತಂಡ ಎಲ್ಲರ ಮೆಚ್ಚುಗೆ ಪಡೆಯಿತು. ವೀರಾಜಪೇಟೆ ಸೇವಾ ಕೇಂದ್ರದಲ್ಲಿ ಸೇವೆ ಪೂರೈಸಿದ ರೋವರ್ಸ್ ತಂಡ ಮಡಿಕೇರಿ ಮೈತ್ರಿ ಹಾಲ್‍ನಲ್ಲಿ ಸೇವೆ ಮುಂದುವರಿದರು. ಸ್ಕೌಟ್ಸ್ ಗೈಡ್ ಜಿಲ್ಲಾ ಸಹಾಯಕಿ ದಮಯಂತಿ ನೇತೃತ್ವದಲ್ಲಿ ಮಡಿಕೇರಿ ಮೈತ್ರಿಯಲ್ಲಿ ತಂಡ ತಂಡವಾಗಿ ನಿರಂತರ ಸೇವೆ ಮಾಡಿದ್ದಾರೆ. ನಿರಾಶ್ರಿತರಿಗೆ ಸಮಾಧಾನ ಮಾತುಗಳನ್ನ ಹೇಳುವ ಈ ರೋವರ್ಸ್‍ಗಳು ಶಿಸ್ತುಬದ್ಧ ಸಮವಸ್ತ್ರ ಧರಿಸಿ ಸ್ವಚ್ಛ ಮಾಡಿ, ನಿರಾಶ್ರಿತರಿಗೆ ಬೇಕಾದ ಬಟ್ಟೆಗಳನ್ನು ಓದಗಿಸುವ, ಕುಡಿಯುವ ನೀರು ಪೂರೈಸುವ, ಊಟವನ್ನು ಬಡಿಸುವ, ಅಡುಗೆ ಕೆಲಸಕ್ಕೆ ಸಹಾಯ ಮಾಡುವ, ಔಷಧಗಳನ್ನು ಒದಗಿಸುವ, ಹಿರಿಯರಿಗೆ ನಡೆಯಲು ಸಹಾಯ ಮಾಡುವ, ನಿರಾಶ್ರಿತರಿಗೆ ಅಗತ್ಯಕ್ಕೆ ಬೇಕಾದ ವಸ್ತುಗಳನ್ನು ಒದಗಿಸುವ ಸೇವಾ ಕಾರ್ಯ ಮಾಡಿ ಎಲ್ಲ ನಿರಾಶ್ರಿತರ ಮೆಚ್ಚುಗೆ ಪಡೆದಿದ್ದಾರೆ. ಶ್ರವಣಬೆಳಗೊಳ, ತಲಕಾವೇರಿ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದ ರೋವರ್ಸ್‍ಗಳು ಇಲ್ಲಿಯ ಜನರ ಕಷ್ಟ ಸುಖವನ್ನು ಅರಿತು ಅವರಿಗೆ ಸಹಾಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.