ಮಡಿಕೇರಿ, ಸೆ. 12: ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಬೆಂಗಳೂರಿನ ಕೇರಳ ಸಮಾಜ ಚಾರಿಟೇಬಲ್ ಸೊಸೈಟಿ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಸಲಾಯಿತು.
ಬೆಂಗಳೂರಿನ ಕೇರಳ ಸಮಾಜ ಚಾರಿಟೇಬಲ್ ಸೊಸೈಟಿ ಹಾಗೂ ಮಡಿಕೇರಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ನಗರದ ಪರಿಹಾರ ಕೇಂದ್ರಗಳಾದ ಮೈತ್ರಿ ಸಭಾಂಗಣ, ಜಿಲ್ಲಾ ಪಂಚಾಯತ್ ಕಟ್ಟಡ ಹಾಗೂ ಕರ್ಣಂಗೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗಳಲ್ಲಿ 283 ಸಂತ್ರಸ್ತರಿಗೆ ನುರಿತ ವೈದ್ಯರಿಂದ ಆರೋಗ್ಯ ತಪಾಸಣೆ ಹಾಗೂ ರಕ್ತ ಪರೀಕ್ಷೆ ಮಾಡಿ ಔಷಧಿಯನ್ನು ಉಚಿತವಾಗಿ ನೀಡಲಾಯಿತು. ತುರ್ತುವಾಹನದಲ್ಲಿ ವಿಶೇಷವಾಗಿ ಅತ್ಯುನ್ನತ ಲ್ಯಾಬಿನ ವ್ಯವಸ್ಥೆಯೊಂದಿಗೆ ರೋಗ ತಪಾಸಣಾ ವ್ಯವಸ್ಥೆ ಮಾಡಲಾಗಿತ್ತು.
ಶಿಬಿರದಲ್ಲಿ ಡಾ. ಅಂಬೇಡ್ಕರ್ ವೈದ್ಯಕೀಯ ಕಾಲೇಜ್‍ನ ವೈದ್ಯರಾದ ಡಾ. ನಾಗರಾಜ್, ಡಾ. ಮನೋಜ್ ಮತ್ತು ಡಾ. ಅಜಿತ್ ಸೇರಿದಂತೆ ಸಿಬ್ಬಂದಿ ವರ್ಗ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಕೇರಳ ಸಮಾಜ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಪಿ.ಡಿ. ಪೌಲ್, ಕಾರ್ಯದರ್ಶಿ ಇ.ವಿ. ಪೌತಿ, ಖಜಾಂಚಿ ಪಿ.ಕೆ. ರಮೇಶ್ ಹಾಗೂ ಸದಸ್ಯರು, ಲಯನ್ಸ್ ಕ್ಲಬ್ ಪ್ರಮುಖ ಕೆ.ಟಿ. ಬೇಬಿ ಮ್ಯಾಥ್ಯೂ ಮತ್ತಿತರರು ಹಾಜರಿದ್ದರು.