ಮಡಿಕೇರಿ, ಸೆ. 14: ಪ್ರಕೃತಿ ವಿಕೋಪಕ್ಕೆ ಸಿಲುಕಿ ಜೋಡಿ ಜೀವ ಹಾನಿಯೊಂದಿಗೆ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿ ತತ್ತರಿಸಿ ಹೋಗಿರುವ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದಲ್ಲಿ ಅಳಿದುಳಿದ ಮನೆಗಳನ್ನು ಸಂಪೂರ್ಣ ಹಾನಿಗೀಡಾಗಿದೆ ಎಂದು ಪರಿಗಣಿಸಿ, ಸೂಕ್ತ ಪರಿಹಾರ ಒದಗಿಸಬೇಕೆಂದು ಹೆಮ್ಮೆತ್ತಾಳು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ತೆರಳಿದ್ದ ಮಾಧ್ಯಮ ದವರೊಂದಿಗೆ ತಮ್ಮ ಅಳಲು ತೋಡಿಕೊಂಡ ಗ್ರಾಮಸ್ಥರು ಹೆಮ್ಮೆತ್ತಾಳು ಗ್ರಾಮದಲ್ಲಿರುವ ಎಲ್ಲ ಮನೆಗಳಿಗೂ ಹಾನಿಯಾಗಿವೆ. 12 ಮನೆಗಳು ಸಂಪೂರ್ಣ ಕೊಚ್ಚಿ ಹೋಗಿವೆ. ಭೂಕುಸಿತಗೊಂಡಿರುವ ಸ್ಥಳದಲ್ಲಿರುವ ಮನೆಗಳೂ ಕೂಡ ಸಂಪೂರ್ಣ ಹಾನಿಗೀಡಾಗಿದ್ದು, ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ. ಯಾವದೇ ಕಾರಣಕ್ಕೂ ದುರಸ್ತಿ ಪಡಿಸಲು ಕೂಡ ಸಾಧ್ಯವಿಲ್ಲದಂತಾಗಿದೆ. ಆದರೆ, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ 11 ಮನೆಗಳು ಮಾತ್ರ ಸಂಪೂರ್ಣ ಹಾನಿಗೀಡಾಗಿರುವದಾಗಿ ಪಟ್ಟಿ ಮಾಡಿ ಅದರಲ್ಲೂ ಕೆಲವರಿಗೆ ಮಾತ್ರ ಪರಿಹಾರ ನೀಡಿ, ಇನ್ನೂ ಕೆಲವರಿಗೆ ನೀಡಿಲ್ಲವೆಂದು ಆರೋಪಿಸಿದರು. ಅಪಾಯದ ಸ್ಥಿತಿಯಲ್ಲಿರುವ ಮನೆಗಳನ್ನು ಸಂಪೂರ್ಣ ಹಾನಿಗೀಡಾಗಿರುವ ಮನೆಗಳೆಂದು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ ಸಂತ್ರಸ್ತರಿಗೆ ತುರ್ತಾಗಿ ನೀಡಲಾಗುವ ರೂ. 3800ರ ಚೆಕ್ ಕೂಡ ಸಿಕ್ಕಿಲ್ಲ. ಇವೆಲ್ಲವನ್ನೂ ಎಲ್ಲರಿಗೂ ವಿತರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ಎಚ್ಚರಿಕೆ

ಹಾನಿಗೀಡಾದ ಮನೆಗಳು ವಾಸಕ್ಕೆ ಯೋಗ್ಯವಿಲ್ಲವಾದರೂ ಕೂಡ ಪರಿಗಣಿಸದೇ ಇರುವದು ದುರಂತ, ಹಾಗೇ ಸಾಧ್ಯವಾಗುವದಾದರೆ ಅಧಿಕಾರಿಗಳು ಬಂದು ವಾಸವಿದ್ದು, ತೋರಿಸಲಿ, ನಂತರ ನಾವಿರುತ್ತೇವೆ ಎಂಬ ಆಕ್ಷೇಪದ ನುಡಿಯಾಡಿದ ಗ್ರಾಮಸ್ಥರು ಸಂಪೂರ್ಣ ಹಾನಿ ಎಂದು ಪರಿಗಣಿಸದಿದ್ದಲ್ಲಿ ಗ್ರಾ.ಪಂ. ಎದುರು ಧರಣಿಯೊಂದಿಗೆ ವಾಸ್ತವ್ಯ ಹೂಡಲಾಗುವದು. ಫಲ ಸಿಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು.

ಪಂಚಾಯಿತಿಗೆ ಮನವಿ

ನಂತರ ಗ್ರಾ.ಪಂ. ಕಚೇರಿಗೆ ತೆರಳಿದ ಗ್ರಾಮಸ್ಥರು ಅಭಿವೃದ್ಧಿ ಅಧಿಕಾರಿ ಚಂಗಪ್ಪ ಅವರಲ್ಲಿ ಮಾಹಿತಿ ಬಯಸಿದರು. ಪ್ರತಿಕ್ರಿಯಿಸಿದ ಅಧಿಕಾರಿ ಹಾಗೂ ಗ್ರಾ.ಪಂ. ಸದಸ್ಯ ಸತೀಶ್ ಅವರುಗಳು ಮರು ಪರಿಶೀಲಿಸಿ ಪಟ್ಟಿ ಮಾಡುವದಾಗಿ ಹೇಳಿದರಲ್ಲದೆ, ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಹೇಳಿದರು. ಈ ಸಂದರ್ಭ ಹಾನಿಗೊಳಗಾದ, ಅಪಾಯದ ಸ್ಥಿತಿಯಲ್ಲಿರುವ ಮನೆಗಳ ವಾರಸುದಾರರು ವಾಸಕ್ಕೆ ಯೋಗ್ಯವಲ್ಲದ ಮನೆಯಾಗಿದ್ದು, ಈ ಬಗ್ಗೆ ಪರಿಗಣನೆಗೆ ತೆಗೆದುಕೊಳ್ಳುವಂತೆ ಕೋರಿ ಅರ್ಜಿ ಮೂಲಕ ಮತ್ತೊಮ್ಮೆ ಮನವಿ ಸಲ್ಲಿಸಿದರು.