ನಾಪೋಕ್ಲು, ಸೆ. 12: ಇತ್ತೀಚೆಗೆ ಮಡಿಕೇರಿ ಮತ್ತು ಅದರ ಸುತ್ತಮುತ್ತಲಿನಲ್ಲಿ ಭೂಕುಸಿತ ದಂತಹ ಪ್ರಾಕೃತಿಕ ವಿಕೋಪ ಸಂಭವಿಸಿದ್ದು ಆ ಬಳಿಕ ಜಿಲ್ಲೆಯ ಜನರಲ್ಲಿ ವಿಶೇಷವಾಗಿ ಭೂ ಹಿಡುವಳಿದಾರರಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹಾಗೂ ಪರಿಸರ ವಾದಿಗಳ ಹೇಳಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಇಲ್ಲಿನ ಸೇವ್ ಕೊಡಗು ವೇದಿಕೆ ಹಮ್ಮಿಕೊಂಡಿದೆ. ಸೇವ್ ಕೊಡಗು ವೇದಿಕೆಯ ಸದಸ್ಯರು ಜಿಲ್ಲೆಯ ವಿವಿಧ ಭಾಗಗಳಿಗೆ ಸಂಚರಿಸಿ ಪಕ್ಷಾತೀತವಾಗಿ ಜನಜಾಗೃತಿಯನ್ನು ಉಂಟುಮಾಡುತ್ತಿದ್ದು ಜನರ, ರೈತರ ಸಮಸ್ಯೆ ಪರಿಹಾರಕ್ಕೆ ನೈತಿಕ ಬೆಂಬಲ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಮಡಿಕೇರಿ ಸುತ್ತಮುತ್ತಲಿನ ಕೃಷಿಕರು ಆಸ್ತಿಪಾಸ್ತಿ ಕಳೆದುಕೊಂಡು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ನಕಲಿ ಪರಿಸರವಾದಿಗಳು ಭೂಕುಸಿತಕ್ಕೆ ಒಳಗಾದ ಪ್ರದೇಶ ವಾಸಕ್ಕೆ ಯೋಗ್ಯವಲ್ಲ ಎಂದು ಹೆದರಿಸಿ ನಿರ್ಗತಿಕರನ್ನು ಒಕ್ಕಲೆಬ್ಬಿ ಸುವ ಕುತಂತ್ರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದೆ. ಕೊಡಗನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಿ ಮನೆ, ಆಸ್ತಿ ಕಳೆದುಕೊಂಡವರಿಗೆ ಅವರು ವಾಸಿಸುತ್ತಿದ್ದ ಸಮೀಪದ ಸುರಕ್ಷಿತ ಪ್ರದೇಶದಲ್ಲಿ ಮನೆ ನಿರ್ಮಿಸಿ ಕೊಡುವದು ಮತ್ತು ನಾಶವಾಗಿರುವ ತೋಟಗದ್ದೆಗಳನ್ನು ಪುನರುತ್ಥಾನ ಗೊಳಿಸುವದು ಸದ್ಯ ಸರ್ಕಾರ ಕೈಗೊಳ್ಳಬೇಕಾದ ಪರಿಹಾರ ಕ್ರಮವಾಗಿದೆ ಎಂದಿದೆ.

ಕಸ್ತೂರಿರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮವಲಯ ದಿಂದ ಕೊಡಗಿನ ಜನವಸತಿ ಪ್ರದೇಶ ಮತ್ತು ಬಾಣೆ ಇನ್ನಿತರ ಹಿಡುವಳಿಗಳನ್ನು ಹೊರಗಿಡುವ ಕ್ರಮಕ್ಕೆ ಆದ್ಯತೆ ನೀಡಬೇಕಾಗಿದೆ, ಅಕ್ರಮವಾಗಿ ಜಾಗ ಖರೀದಿಸಿ ನಿರ್ಮಿಸಿರುವ ರೆಸಾರ್ಟ್‍ಗಳನ್ನು ಶಾಶ್ವತವಾಗಿ ಬಂದ್ ಮಾಡಿ ಜಿಲ್ಲೆಯ ಆರ್ಥಿಕ ಪುನಶ್ಚೇತನಕ್ಕೆ ಪ್ರವಾಸೋದ್ಯಮದಲ್ಲಿ ಸ್ಥಳೀಯರ ಭಾಗವಹಿಸುವಿಕೆಗೆ ಒತ್ತು ನೀಡುವ ಕೆಲಸವನ್ನು ಮಾಡಿ ಜಿಲ್ಲೆಯ ಜನರಲ್ಲಿ ಜ್ವಲಂತ ಸಮಸ್ಯೆಗಳ ಅರಿವು ಮೂಡಿಸಲು ಹಾಗೂ ಒಂದು ಹೋರಾಟವನ್ನು ರೂಪಿಸಲು ಯತ್ನಿಸಲಾಗುತ್ತಿದೆ ಎಂದು ಸೇವ್ ಕೊಡಗು ಪದಾಧಿಕಾರಿಗಳು ವಿವರಿಸಿದ್ದಾರೆ.

ವರದಿ: ದುಗ್ಗಳ, ಪ್ರಭಾಕರ್‍ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ ಯುವಜನರನ್ನು ಜಾಗೃತಿಗೊಳಿಸುವದು, ಜಿಲ್ಲೆಯಲ್ಲಿ ಅರ್ಧಭಾಗದಷ್ಟು ರಕ್ಷಿತಾರಣ್ಯ. ಕಾಫಿ ತೋಟಗಳಲ್ಲಿ ಕಾಫಿಯ ಗಿಡಗಳು, ಏಕರೆಯೊಂದಕ್ಕೆ 300ಕ್ಕೂ ಅಧಿಕ ಕಾಡುಮರಗಳು, ಮರಗಳಲ್ಲಿ ಕಾಳುಮೆಣಸು ಬಳ್ಳಿಗಳುಹಬ್ಬಿದ್ದು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಹೀಗಾಗಿ ಭೂಕುಸಿತಕ್ಕೆ ಅರಣ್ಯ ನಾಶವಾಗಿದೆ ಎನ್ನುವದು ಸುಳ್ಳು ಎಂದು ವೇದಿಕೆ ಸಂಚಾಲಕ ಬಿದ್ದಾಟಂಡ ಟಿ. ದಿನೇಶ್ ಅಭಿಪ್ರಾಯಪಟ್ಟಿದ್ದಾರೆ.

ಪರಿಸರವಾದಿಗಳು ಪರಿಸರ ಸಂರಕ್ಷಣೆ ಹೆಸರಿನಲ್ಲಿ ಉತ್ಪ್ರೇಕ್ಷಿತ ಮಾಹಿತಿ ನೀಡಿ ವಿದೇಶಗಳಿಂದ ದೇಣಿಗೆ ಪಡೆಯುತ್ತಿದ್ದಾರೆ. ಕೇವಲ ಹಣಗಳಿಸುವ ಉದ್ದೇಶಗಳಿಂದ ಎನ್‍ಜಿಒ ಗಳನ್ನು ರಚಿಸಿಕೊಂಡು ತಮ್ಮ ವಿರುದ್ಧ ಚಕಾರ ಎತ್ತಿದವರ ಮೇಲೆ ಮೊಕದ್ದಮೆ ಹೂಡುವವರು ನಿಜವಾದ ಪರಿಸರವಾದಿಗಳಲ್ಲ; ಡೋಂಗಿ ಪರಿಸರವಾದಿಗಳೆಂದು ವೇದಿಕೆಯ ಕೀಪಾಡಂಡ ಮಧು ಬೋಪಣ್ಣ ಅಭಿಪ್ರಾಯಪಟ್ಟಿದ್ದಾರೆ.

ಭೂ ತಾಪಮಾನದ ಏರಿಕೆಯಿಂದ ಜಿಲ್ಲೆಯ ಹವಾಮಾನ ಏರುಪೇರಾಗುತ್ತಿದೆ. ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ವಾಹನಗಳಿಂದ ಶೇ. 60 ರಷ್ಟು ಹವಾಮಾನ ಏರುಪೇರಾಗುತ್ತಿದೆ ಎಂದು ಬಿದ್ದಾಟಂಡ ಜಿನ್ನು ನಾಣಯ್ಯ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಏಲಕ್ಕಿ ಕೃಷಿ ಇತ್ತು. ರೋಗಬಾಧೆಯಿಂದ ಏಲಕ್ಕಿ ತೋಟಗಳು ಕಾಫಿ ತೋಟಗಳಾಗಿ ಮಾರ್ಪಾಡಾದವು. ತೋಟಕ್ಕೆ ಅಗತ್ಯವಾದ ನೆರಳಿನ ಮರಗಳಲ್ಲಿ ಕಾಳುಮೆಣಸು ಕೃಷಿ ಕೈಗೊಳ್ಳಲಾಗಿದೆ. ಯಾವದೇ ಬೃಹತ್ ಕೈಗಾರಿಕೆಗಳು ಜಿಲ್ಲೆಯಲ್ಲಿಲ್ಲ. ಜಿಲ್ಲೆಯಲ್ಲಿ ಆರಂಭವಾದ ರೆಸಾರ್ಟ್ ಹಾಗೂ ಹೊಟೇಲ್‍ಗಳ ನಿರ್ಮಾಣದಿಂದಾಗಿ ಅಕ್ರಮ ಗಣಿಗಾರಿಕೆ ಮತ್ತು ಮರಳುಗಾರಿಕೆ ಪ್ರಾರಂಭವಾಯಿತು ಎಂಬದಾಗಿ ವೇದಿಕೆಯ ನೂರಂಬಡ ಉದಯಶಂಕರ್ ವಿವರಣೆ ನೀಡುತ್ತಾರೆ.

ಕೊಡಗಿನ ನೆಲ, ಜಲ, ಪರಿಸರ ಉಳಿಸಲು ಡೋಂಗಿ ಪರಿಸರವಾದಿಗಳಿಂದ ಜಿಲ್ಲೆಯ ಜನ ಕಲಿಯಬೇಕಾಗಿಲ್ಲ ಎಂದು ಪಾಡಿಯಮ್ಮಂಡ ಮನು ಮಹೇಶ್ ಹೇಳಿಕೆ ನೀಡಿದ್ದಾರೆ.