ಮಡಿಕೇರಿ, ಸೆ. 15: ದೇಶದಲ್ಲಿ ಒಂದೇ ಕಾಲದಲ್ಲಿ ಚುನಾವಣೆ ನಡೆಯುವಂತಾಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಸಹಮತ ವ್ಯಕ್ತಪಡಿಸಿದ್ದಾರೆ.

ಪ್ರೆಸ್‍ಕ್ಲಬ್ ಸಂವಾದದಲ್ಲಿ ಮಾತನಾಡಿದ ಅವರು, ಒಂದೇ ಕಾಲದಲ್ಲಿ ಚುನಾವಣೆ ನಡೆಯುವದರಿಂದ ಚುನಾವಣಾ ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಚುನಾವಣೆಗೆ ವ್ಯಯವಾಗುವ ಸಮಯ, ಶ್ರಮ ಎಲ್ಲವೂ ಉಳಿಯುತ್ತವೆ. ಆದರೆ ಪ್ರಧಾನಿಯವರು ತಮ್ಮ ಚಿಂತನೆಯನ್ನು ಜಾರಿಗೊಳಿಸಲು ಪ್ರಜಾಸತ್ತಾತ್ಮಕವಾಗಿ ತೀರ್ಮಾನ ಕೈಗೊಳ್ಳಲಿ. ಎಲ್ಲಾ ರಾಜಕೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿಯಿಡಲಿ ಎಂದು ಸಲಹೆಯಿತ್ತರು.

ಬಿಜೆಪಿಗೆ ಪತನ ವ್ಯಸನಿ

ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಹುನ್ನಾರ ನಡೆಸುತ್ತಿರುವದು ಎಲ್ಲರಿಗೂ ತಿಳಿದ ವಿಚಾರ. ಸಿಗರೇಟು- ಮದ್ಯವ್ಯಸನದಂತೆ ಬಿಜೆಪಿಗೆ ಪತನ ವ್ಯಸನ ಶುರುವಾಗಿದೆ ಎಂದು ಟೀಕಿಸಿದ ವಿಶ್ವನಾಥ್ ಅವರು, ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಐದು ವರ್ಷ ಆಡಳಿತ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜನಪರ ಕಾಳಜಿ ಇಲ್ಲದ ಬಿಜೆಪಿ ನಾಯಕರು ಆಪರೇಷನ್ ಕಮಲದಂತಹ ಹೀನಕೃತ್ಯಕ್ಕೆ ಕೈಹಾಕುವ ಮೂಲಕ ಪಾವಿತ್ರ್ಯತೆಯ ಪ್ರತೀಕವಾದ ಕಮಲಕ್ಕೆ ಕಳಂಕ ತರುತ್ತಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್ ಪುನರ್ ರಚನೆ

ತಾನು ರಾಜ್ಯಾಧ್ಯಕ್ಷನಾದ ಬಳಿಕ ಜೆಡಿಎಸ್‍ನ ರಾಜ್ಯ ಸಮಿತಿಯನ್ನು ವಿಸರ್ಜನೆ ಮಾಡಿದ್ದು, ಸದ್ಯದಲ್ಲಿಯೇ ಜಿಲ್ಲಾ ಸಮಿತಿಗಳನ್ನು ಕೂಡ ವಿಸರ್ಜಿಸಲಾಗುತ್ತದೆ. ಬಳಿಕ ರಾಜ್ಯ ಹಾಗೂ ಜಿಲ್ಲಾ ಸಮಿತಿಗಳನ್ನು ಪುನರ್ರಚನೆ ಮಾಡುವದಾಗಿ ತಿಳಿಸಿದರು. ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ - ಜೆಡಿಎಸ್ ಒಟ್ಟಾಗಿ ಎದುರಿಸಲು ಚರ್ಚೆಗಳು ನಡೆಯುತ್ತಿವೆ ಎಂದು ಅವರು ಮಾಹಿತಿಯಿತ್ತರು.