ಮಡಿಕೇರಿ, ಸೆ. 15: ಜಿಲ್ಲೆಯ ಪರಿಸರವನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಂಡು ಸ್ವಚ್ಛತೆ ಕಾಪಾಡಲು ಮುಂದಾಗಿರುವ ಕೊಡಗು ಫಾರ್ ಟುಮಾರೊ ಸ್ವಯಂ ಸೇವಾ ತಂಡದ ಸದಸ್ಯರು ಇಂದು ಎರಡನೇ ಹಂತದ ಸ್ವಚ್ಛತಾ ಕಾರ್ಯ ನಡೆಸಿದರು.
ರೀ ಸೈಕಲ್ ಕೂರ್ಗ್ ಯೋಜನೆಯಂತೆ ಜಿಲ್ಲೆ ಹಾಗೂ ಬೆಂಗಳೂರು, ಮೈಸೂರು ಭಾಗದಲ್ಲಿ ನೆಲೆಸಿರುವ ಜಿಲ್ಲೆಯ ಮೂಲದ ಯುವಕ - ಯುವತಿಯರು ಇಂದು ಮಡಿಕೇರಿಯ ಅರಣ್ಯ ಭವನದಿಂದ ಸುಂಟಿಕೊಪ್ಪ ಮಾರ್ಗದಲ್ಲಿ ವಿವಿಧ ತಂಡಗಳಾಗಿ ಶ್ರಮದಾನದ ಮೂಲಕ ಕಸವನ್ನು ಸಂಗ್ರಹಿಸಿದರು. ಕಳೆದ ವಾರಾಂತ್ಯದಲ್ಲಿ ಈ ತಂಡದ ಸದಸ್ಯರು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಗಾಳಿಬೀಡು ವಿಭಾಗದಲ್ಲಿ ಶ್ರಮದಾನ ನಡೆಸಿ ಒಂದು ಟ್ರಕ್ ಲೋಡ್ನಷ್ಟು ತ್ಯಾಜ್ಯವನ್ನು ಸಂಗ್ರಹಿಸಿ ಮೈಸೂರಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿತ್ತು. ಇದೀಗ ಈ ಶನಿವಾರ ಹಾಗೂ ಭಾನುವಾರ (ಇಂದು) ಈ ಕೆಲಸವನ್ನು ತಂಡದ ಸ್ವಯಂ ಸೇವಕರು ಮುಂದುವರಿಸಲಿದ್ದಾರೆ. ಜಿಲ್ಲೆಯ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ತಂಡದ ಸದಸ್ಯರೊಂದಿಗೆ ಆಸಕ್ತಿ ಹೊಂದಿರುವ ಇತರ ಸಾರ್ವಜನಿಕರೂ ಕೈ ಜೋಡಿಸಬಹುದಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ 9663662191 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಸದಸ್ಯರ ವಿಷಾದ
ಜಿಲ್ಲೆಯ ಹಿತದೃಷ್ಟಿಯಿಂದ ಕೆಲವಾರು ಮಂದಿ ಇತರೆಡೆಗಳಲ್ಲಿ ಉದ್ಯೋಗದಲ್ಲಿದ್ದರೂ ವಾರಾಂತ್ಯದಲ್ಲಿ ಜಿಲ್ಲೆಗೆ ಆಗಮಿಸಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಆದರೆ ಕೆಲವರು ಸ್ವಚ್ಛಗೊಳಿಸಿದ ಸ್ಥಳದಲ್ಲಿ ಮತ್ತೆ ಕಸವನ್ನು ಹಾಕುತ್ತಿರುವದು ಕಂಡುಬರುತ್ತಿರುವದು ವಿಷಾದಕರವಾಗಿದೆ. ಈ ಬಗ್ಗೆ ಸಾರ್ವಜನಿಕರು ಸ್ವಯಂ ಅರಿವು ಮೈಗೂಡಿಸಿಕೊಳ್ಳಬೇಕೆಂದು ತಂಡದ ಪ್ರಮುಖರು ಮನವಿ ಮಾಡಿದ್ದಾರೆ. ತಾ. 16ರಂದು (ಇಂದು) ಬೆಳಿಗ್ಗೆಯಿಂದ ವಿವಿಧ ಭಾಗದಲ್ಲಿ ಸ್ವಚ್ಛತಾ ಕಾರ್ಯ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿಯೂ ಕೊಡಗು ಫಾರ್ ಟುಮಾರೊ ತಂಡ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.