ಶ್ರೀಮಂಗಲ, ಸೆ. 15: ಪೊನ್ನಂಪೇಟೆಯ ಇಗ್ಗುತ್ತಪ್ಪ ಸೌಹಾರ್ಧ ಕ್ರೆಡಿಟ್ ಕೋ-ಅಪರೇಟಿವ್ ಸಂಘವು ಪ್ರಸಕ್ತ ವರ್ಷ ರೂ. 4947 ಲಕ್ಷ ವ್ಯವಹಾರವನ್ನು ಕೈಗೊಂಡಿದ್ದು, ಸಂಘವು ಪ್ರಗತಿಯ ಪಥದಲ್ಲಿದೆ. ರೂ. 14.53 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಕಳೆದ 3 ವರ್ಷಗಳಂತೆ ಈ ವರ್ಷವು ಸದಸ್ಯರಿಗೆ ಶೇ. 15 ಡಿವಿಡೆಂಟ್ ನೀಡಲಾಗುತ್ತಿದೆ. ನಮ್ಮ ಸಂಘದ ಉತ್ತಮ ಕಾರ್ಯನಿರ್ವಾಹಣೆಗಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಪ್ರಶಸ್ತಿಗೆ ಆಯ್ಕೆಯಾಗಿರುವದು ಹೆಮ್ಮೆಯ ವಿಚಾರ ಎಂದು ಸಂಘದ ಅಧ್ಯಕ್ಷ ಮದ್ರೀರ ಕೆ.ಸೋಮಯ್ಯ ತಿಳಿಸಿದರು.

ಪೊನ್ನಂಪೇಟೆಯಲ್ಲಿ ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ವಿವರಿಸಿದ ಅವರು, ನಮ್ಮ ಸಂಘವು 1683 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ ರೂ. 51.30 ಲಕ್ಷ ಹೊಂದಿರುತ್ತದೆ. ಸಂಘದ ಸಾಲಗಾರರ, ಸಾಲ ಮರುಪಾವತಿಯನ್ನು ಅವಧಿ ಮುಗಿಯುವ ದಿನಾಂಕದೊಳಗೆ ಪಾವತಿಸಲಾಗದೆ ಮೃತಪಟ್ಟರೆ ಅವರ ಕುಟುಂಬದವರಿಗೆ ಹಾಗೂ ಜಾಮೀನುದಾರರಿಗೆ ಸಹಕಾರಿ ಯಾಗಲೆಂಬ ಸದಾಭಿಪ್ರಾಯದಿಂದ ಕ್ಷೇಮಾಭಿವೃದ್ಧಿ ನಿಧಿಯನ್ನು ಜಾರಿಗೆ ತರಲು ಉದ್ದೇಶಿಸಿದೆ. ಮೇರೆಗೆ ಪ್ರಸಕ್ತ ಸಾಲಿನಲ್ಲಿ ಮೃತಪಟ್ಟ ಸಾಲಗಾರರೊಬ್ಬರ ರೂ. 20 ಸಾವಿರ ಸಾಲವನ್ನು ಈ ನಿಧಿಯಿಂದ ಮನ್ನಾ ಮಾಡಲಾಗಿದೆ. ಈ ಸೌಲಭ್ಯವನ್ನು ಪ್ರತಿ ವರ್ಷ ರೂ. 20 ಸಾವಿರಗಳಂತೆ ಏರಿಕೆ ಮಾಡಿ ಮೃತಪಟ್ಟ ಸದಸ್ಯರ ಕುಟುಂಬ ವರ್ಗಕ್ಕೆ ಸಾಲ ಮನ್ನಾ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಸೌಲಭ್ಯ ಪಡೆಯುವ ಪ್ರತೀ ವರ್ಷ ಈ ಕ್ಷೇಮಾಭಿವೃದ್ಧಿ ನಿಧಿಯನ್ನು ತನ್ನ ಸದಸ್ಯತನ ಮುಂದುವರೆಸಿ ಸಾಲಗಾರರು ತೊಡಗಿಸಿ ಕೊಳ್ಳಬೇಕಾಗಿದೆ. ಆರ್ಥಿಕ ವರ್ಷದಲ್ಲಿ ಸಾಲ ಮರುಪಾವತಿಸಲಾಗದೆ ಸಾಲಗಾರರೊಬ್ಬರು ಮೃತಪಟ್ಟಲ್ಲಿ ರೂ. 20 ಸಾವಿರಗಳ ಸಾಲ ಮನ್ನಾ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಈ ರೀತಿಯ ಸೌಲಭ್ಯವನ್ನು ನಮ್ಮ ಸಂಘ ಮೊದಲ ಬಾರಿಗೆ ಜಾರಿಗೆ ತಂದಿದೆ ಎಂದು ಅವರು ವಿವರಿಸಿದರು.

ಇತ್ತೀಚೆಗೆ ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ತಾ. 18ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯುವ ಸಂಘದ ಮಹಾಸಭೆಯಲ್ಲಿ ಸಲಹೆ ಪಡೆದು ಕ್ರಮಕೈಗೊಳ್ಳಲಾಗುವದು. ಸಂಘವು ಪೊನ್ನಂಪೇಟೆ ಪಟ್ಟಣದಲ್ಲಿ ತನ್ನ ಮುಖ್ಯ ಕಚೇರಿಗಾಗಿ ನಿವೇಶನ ಖರೀದಿ ಮಾಡಿದೆ. ರೂ. 45 ಲಕ್ಷ ವೆಚ್ಚದಲ್ಲಿ ಒಂದು ಅಂತಸ್ತಿನ ಹೊಸ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉದಾರಿ ದಾನಿಗಳಿಂದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ದನ ಸಹಾಯ ಅಪೇಕ್ಷಿಸಲಾಗುತ್ತಿದೆ. ರೂ. 10 ಸಾವಿರಗಳಿಗಿಂತ ಮೇಲ್ಪಟ್ಟು ದನ ಸಹಾಯ ನೀಡುವ ದಾನಿಗಳ ಹೆಸರುಗಳನ್ನು ಗ್ರ್ಯಾನೈಟ್ ಕಲ್ಲಿನಲ್ಲಿ ಬರೆಸಲಾಗುವದೆಂದು ಸೋಮಯ್ಯ ತಿಳಿಸಿದರು.

ಸಂಘದ ಮರಣ ನಿಧಿಯಲ್ಲಿ ತೊಡಗಿಸಿಕೊಂಡವರು ಮೃತಪಟ್ಟರೆ ವಾರಸುದಾರರಿಗೆ ರೂ. 10 ಸಾವಿರ ಪಾವತಿಸಲಾಗುತ್ತಿದೆ. ಇದಲ್ಲದೆ, ಹಾಲಿ ಜಾರಿಯಲ್ಲಿರುವ ಸಹಕಾರಿ ಜೀವ ನಿಧಿಗೆ ತೊಡಗಿಸಿಕೊಂಡವರು ಮೃತಪಟ್ಟಲ್ಲಿ ರೂ. 1 ಲಕ್ಷ ಅವರ ವಾರಸುದಾರರಿಗೆ ಪಾವತಿಸುವ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಸಂಘವು ವಿವಿಧ ಬಾಪ್ತಿನಲ್ಲಿ ರೂ. 1220 ಲಕ್ಷ ಠೇವಣಿ ಹೊಂದಿದ್ದು, ಠೇವಣಿಗೆ ಆಕರ್ಷಕ ಬಡ್ಡಿದರ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಕೌಟುಂಬಿಕ ನಿಧಿಗಳಿಗೆ ಮತ್ತು ವಿಧವೆಯರಿಗೆ, ವಿಕಲಚೇತನರಿಗೆ ಕೂಟಗಳು ಸಮಾಜ ಹಾಗೂ ಒಕ್ಕೂಟಗಳಿಗೆ ಹೆಚ್ಚಿನ ದರದ ಬಡ್ಡಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸಂಘದ ಸದಸ್ಯರಿಗೆ ವ್ಯವಸಾಯ ಅಭಿವೃದ್ಧಿ ಸಾಲ, ದೈನಂದಿನ ಠೇವಣಿ ಆಧಾರಿತ ಸಾಲ, ಆಭರಣ ಸಾಲ, ವಾಹನ ಸಾಲ, ನಿರಖು ಠೇವಣಿ ಸಾಲ, ಗೃಹ ನಿರ್ಮಾಣ ಸಾಲ, ವ್ಯಾಪಾರಾಭಿವೃದ್ಧಿ ಸಾಲ, ವೇತನ ಸಾಲ, ನಿವೇಶನ ಖರೀದಿ ಸಾಲದ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೂ.1110 ಲಕ್ಷ ಸಾಲವನ್ನು ನೀಡಲಾಗಿದ್ದು, ಸಾಲ ವಸೂಲಾತಿಯೂ ಶೇ. 98ರಷ್ಟು ಆಗಿದ್ದು, ಸಂಘದ ವ್ಯವಹಾರವನ್ನು ಗಣಕೀಕರಣಗೊಳಿಸಲಾಗಿದೆ. ಹಾಗೂ ಗ್ರಾಹಕರಿಗೆ ವ್ಯವಹಾರದ ಸಂದೇಶವನ್ನು ಮೊಬೈಲ್ ಸಂಖ್ಯೆಗೆ ಕಳುಹಿಸುವ ಸೌಲಭ್ಯ ಮಾಡಲಾಗಿದೆ. ಸಂಘದ ಉತ್ತಮ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸದಸ್ಯರಿಗೆ ಉತ್ತಮ ಸೇವೆ ನೀಡುವಲ್ಲಿ ಸಂಘದ ಎಲ್ಲಾ ಸದಸ್ಯರ ಸೇವೆಯನ್ನು ಶ್ಲಾಘಿಸಿದ ಅವರು 2015ರಲ್ಲಿ ಗೋಣಿಕೊಪ್ಪ ಪಟ್ಟಣದಲ್ಲಿ ಸಂಘದ ನೂತನ ಶಾಖೆಯನ್ನು ತೆರೆದಿದ್ದು, ಹೊಸ 2 ಶಾಖೆಗಳನ್ನು ತೆರೆಯಲು ಮುಂದಿನ ಅವಧಿಯಲ್ಲಿ ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕಡೇಮಾಡ ಜಿ. ಭೀಮಯ್ಯ, ನಿರ್ದೇಶಕರುಗಳಾದ ಅರಮಾಣಮಾಡ ಎಸ್.ಬೋಪಯ್ಯ, ಚಿರಿಯಪಂಡ ಕೆ.ಕಾಶಿಯಪ್ಪ, ಕಬ್ಬಚ್ಚಿರ ಎಂ.ಚಿದಂಬರ, ಐನಂಡ ಕೆ.ಮಂದಣ್ಣ, ಕಳ್ಳಿಚಂಡ ಜಿ.ಕುಶಾಲಪ್ಪ, ಕಳ್ಳಿಚಂಡ ಡಿ.ಪೂಣಚ್ಚ, ಅಲೇಮಾಡ ಎ.ಶಿನೀವಾಸ್, ಕೋದೇಂಗಡ ಎಸ್.ಸುರೇಶ್, ಕೂಕಂಡ ಎಸ್.ಕಾವೇರಪ್ಪ, ಮುದ್ದಿಯಡ ಪಿ.ಪ್ರಕಾಶ್, ಕುಲ್ಲಚಂಡ ಎಂ.ನಂಜಪ್ಪ, ಡಾ.ನೆಲ್ಲೀರ ನಿಖಿತ ಸಚಿನ್, ಮಾಣಿಪಂಡ ಜೆ.ಪಾರ್ವತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮದ್ರೀರ ಎಸ್. ಗಣಪತಿ ಉಪಸ್ಥಿತರಿದ್ದರು.