ಸೋಮವಾರಪೇಟೆ, ಸೆ.15: ಕಳೆದ ಆ.16 ರಂದು ಅಲ್ಪಪ್ರಮಾಣದ ಕುಸಿತಕ್ಕೆ ಒಳಗಾಗಿ ಸಂಚಾರ ಸ್ಥಗಿತಗೊಂಡಿದ್ದ ಸೋಮವಾರಪೇಟೆ-ಮಾದಾಪುರ-ಹಟ್ಟಿಹೊಳೆ-ಮಕ್ಕಂದೂರು-ಮಡಿಕೇರಿ ರಸ್ತೆ ನಂತರದ ದಿನಗಳಲ್ಲಿ ಇನ್ನಿಲ್ಲದಂತೆ ಕೊಚ್ಚಿಹೋಗಿದ್ದು, ಇದೀಗ ತಿಂಗಳ ನಂತರ ಸಂಪರ್ಕ ಸಾಧಿಸಲು ಹರಸಾಹಸ ನಡೆಸಲಾಗುತ್ತಿದೆ.
ಹತ್ತಾರು ಜೆಸಿಬಿ, ಹಿಟಾಚಿ ಯಂತ್ರಗಳು, ವಾಹನಗಳೊಂದಿಗೆ ನೂರಾರು ಮಂದಿ ಕಾರ್ಮಿಕರು ಸಮರೋಪಾದಿ ಕಾಮಗಾರಿಯಲ್ಲಿ ತೊಡಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವ ವಿಶ್ವಾಸ ವ್ಯಕ್ತಗೊಂಡಿದೆ.
ಮಾದಾಪುರದಿಂದ ಹಾಲೇರಿ ವರೆಗೆ 6 ಕಡೆಗಳಲ್ಲಿ ರಾಜ್ಯ ಹೆದ್ದಾರಿ ಕುಸಿತಗೊಂಡಿದ್ದು, ಭಯಾನಕ ಸನ್ನಿವೇಶದೊಂದಿಗೆ ರಸ್ತೆ ಕೊಚ್ಚಿ ಕೊಂಡು ಹೋಗಿದೆ. ಹಟ್ಟಿಹೊಳೆ ಯಿಂದ ಮುಂದಕ್ಕೆ ಚಿತ್ರಾ ಸುಬ್ಬಯ್ಯ ಅವರ ಮನೆಯಿದ್ದ ಪ್ರದೇಶದಲ್ಲಿ ಭಾರೀ ಕುಸಿತಗೊಂಡ ಹಿನ್ನೆಲೆ ಚಿತ್ರ ಸುಬ್ಬಯ್ಯ ಅವರ ಮನೆ ಸೇರಿದಂತೆ ಸುಮಾರು 100 ಮೀಟರ್ ರಸ್ತೆ ಕಣ್ಮರೆಯಾಗಿದ್ದು, ಭೀಭತ್ಸ ದೃಶ್ಯ ಕಾಣಲ್ಪಡುತ್ತಿದೆ.
ರಸ್ತೆಯ ಎಡಭಾಗದಲ್ಲಿ ಕುಸಿತ, ಬಲಭಾಗದಲ್ಲಿ ಬರೆ ಕುಸಿತದಿಂದ ಸಾವಿರಾರು ಲೋಡ್ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದರಿಂದ ಕಳೆದ ಒಂದು ತಿಂಗಳಿನಿಂದ ಈ ರಸ್ತೆ ಬಂದ್ ಆಗಿದೆ. ಹಾಲೇರಿ ಬಳಿಯಲ್ಲಿ ಸಿಂಕೋನ ಮತ್ತು ಬಾಲಾಜಿ ಎಸ್ಟೇಟ್ ಇರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿv Àಗೊಂಡಿದ್ದು, 20 ಮೀಟರ್ ರಸ್ತೆ ಕಂದಕದೊಳಗೆ ಜಾರಿಹೋಗಿದೆ.
ಇದರೊಂದಿಗೆ ಬೆಟ್ಟ, ಎಸ್ಟೇಟ್ನಲ್ಲಿದ್ದ ನೂರಾರು ಮರಗಳು ರಸ್ತೆಗೆ ಬಿದ್ದಿದ್ದರಿಂದ ಕಳೆದ 15 ದಿನಗಳ ಹಿಂದೆ ಎಸ್ಟೇಟ್ನವರು, ಅರಣ್ಯ ಇಲಾಖಾ ಸಿಬ್ಬಂದಿಗಳು ಮರಗಳನ್ನು ತೆರವುಗೊಳಿಸಿದ್ದು, ಕಳೆದ 10 ದಿನಗಳಿಂದ ಯಂತ್ರಗಳ ಸಹಾಯ ದಿಂದ ಮಣ್ಣು ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಭಾರೀ ಪ್ರಮಾಣದ ಭೂಕುಸಿತಕ್ಕೆ ಸಿಂಕೋನ ಎಸ್ಟೇಟ್ನ 60 ಏಕರೆಗೂ ಅಧಿಕ ತೋಟ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಇದೀಗ ಹಾಲೇರಿ ಬಳಿ ರಸ್ತೆ ತುಂಡಾಗಿರುವ ಪ್ರದೇಶಕ್ಕೆ ಬದಲಾಗಿ, ಇದೇ ಸಿಂಕೋನ ಎಸ್ಟೇಟ್ಗೆ ಸೇರಿದ ಒಂದೂವರೆ ಏಕರೆ ತೋಟವನ್ನು ಬಳಸಿಕೊಂಡು ಬದಲಿ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಸ್ಥಳದಲ್ಲಿ 3 ಜೆಸಿಬಿ ಮತ್ತು 4 ಹಿಟಾಚಿ ಯಂತ್ರ ಹಗಲೂ ರಾತ್ರಿ ಕೆಲಸ ನಿರ್ವಹಿಸುತ್ತಿದೆ. ಇನ್ನೂ ಮೂರು ದಿನಗಳಲ್ಲಿ ಕೆಲಸ ಮುಗಿಯಬಹುದು ಎಂದು ಜೆಸಿಬಿ ಚಾಲಕ ಮನು ತಿಳಿಸಿದ್ದಾರೆ.
ಹಟ್ಟಿಹೊಳೆಯಿಂದ ಕಾಂಡನಕೊಲ್ಲಿ ನಡುವೆ ಸುಮಾರು 50 ಏಕರೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ರಸ್ತೆಯ ಮೇಲೆ ಬಿದ್ದಿದ್ದ ನೂರಾರು ಲೋಡ್ ಮಣ್ಣನ್ನು 3 ಹಿಟಾಚಿ ಯಂತ್ರಗಳ ಮೂಲಕ ತೆರವುಗೊಳಿಸಲಾಗುತ್ತಿದೆ. ರಾತ್ರಿ 3 ಗಂಟೆಯವರೆಗೂ ಕೆಲಸ ಮಾಡುತ್ತಿದ್ದೇವೆ. ಕಳೆದ 12 ದಿನಗಳಿಂದ ಸಮರೋಪಾದಿ ಕೆಲಸ ನಡೆಯುತ್ತಿದೆ ಎಂದು ಹಿಟಾಚಿ ಚಾಲಕ ಬಜೆಗುಂಡಿಯ ಡೇವಿಡ್ ಗುಂಡ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿಗಳು ನಡೆಯುತ್ತಿದ್ದು, ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಕಾರ್ಯಕ್ಷಮತೆಯಿಂದ ಸಮರೋಪಾದಿ ಕೆಲಸ ನಡೆಯುತ್ತಿದೆ ಎಂದು ಲಾರೆನ್ಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಹಟ್ಟಿಹೊಳೆ-ಮಾದಾಪುರ ಮಾರ್ಗ ಮಧ್ಯೆ ಮೂರು ಕಡೆಗಳಲ್ಲಿ ರಸ್ತೆಯ ಬದಿ ಕುಸಿದಿದ್ದು, ಭಾರೀ ಪ್ರಮಾಣದಲ್ಲಿ ಕುಸಿತಗೊಂಡಿರುವ ಸ್ಥಳಗಳಲ್ಲಿ ಎಂಸ್ಯಾಂಡ್ ಮೂಲಕ ತಡೆಗೋಡೆ ನಿರ್ಮಿಸುವ ಕಾರ್ಯ ಸಮರೋಪಾದಿ ನಡೆಯುತ್ತಿದೆ. ಮೈಸೂರಿನ ಚಂದ್ರಮೋಹನ್ ಎಂಬವರು ಗುತ್ತಿಗೆ ಪಡೆದಿದ್ದು, 60ಕ್ಕೂ ಅಧಿಕ ಕಾರ್ಮಿಕರು ಒಂದೇ ಸ್ಥಳದಲ್ಲಿ ಎಂಸ್ಯಾಂಡ್ನಿಂದ ತಡೆಗೋಡೆ ನಿರ್ಮಿಸುವ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಕಾಮಗಾರಿ ಸಂಪೂರ್ಣ ವಾಗಿ ಮುಕ್ತಾಯಗೊಳ್ಳಲು ಇನ್ನೂ 10 ದಿನಗಳು ಬೇಕಾಗಬಹುದು ಎಂದು ಕಾರ್ಮಿಕರು ತಿಳಿಸಿದ್ದಾರೆ. ಒಂದೆಡೆ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳು ಮಣ್ಣನ್ನು ತೆರವುಗೊಳಿಸುತ್ತಿರುವಂತೆ ಬೆಟ್ಟದ ಮೇಲಿನಿಂದ ಜಲರೂಪದಲ್ಲಿ ನೀರು ರಸ್ತೆಗೆ ಹರಿಯುತ್ತಿದೆ. ಪರಿಣಾಮ ಹಟ್ಟಿಹೊಳೆಯಿಂದ ಮುಂದಕ್ಕೆ ಕೆಸರಿನಕೊಂಪೆ ನಿರ್ಮಾಣವಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಮೋರಿ ಅಳವಡಿಸುವ ಕಾರ್ಯವೂ ನಡೆಯುತ್ತಿದೆ.
ಗುತ್ತಿಗೆದಾರರು ತಮ್ಮ ವಾಹನ ಮತ್ತು ಕಾರ್ಮಿಕರೊಂದಿಗೆ ರಸ್ತೆಯನ್ನು ಸಂಪರ್ಕಕ್ಕೆ ಮುಕ್ತಗೊಳಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿರುವದು ಕಂಡುಬಂದಿದೆ. ಒಟ್ಟಾರೆ ಕಳೆದ ಒಂದು ತಿಂಗಳಿನಿಂದ ಬಂದ್ ಆಗಿದ್ದ ಸೋಮವಾರಪೇಟೆ-ಹಟ್ಟಿಹೊಳೆ-ಮಡಿಕೇರಿ ರಾಜ್ಯ ಹೆದ್ದಾರಿ-27 ಮುಂದಿನ ಒಂದೆರಡು ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.
ಕೆಲವೆಡೆಗಳಲ್ಲಿ ಮಣ್ಣು ಹಾಕಿ ರಸ್ತೆಯನ್ನು ನಿರ್ಮಿಸಲಾಗಿದ್ದು, ಅದರ ಮೇಲೆ ಜಲ್ಲಿಕಲ್ಲುಗಳನ್ನು ಹಾಕಿ ರೋಲ್ ಮಾಡಬೇಕಿದೆ. ಒಂದೆರಡು ದಿನಗಳಲ್ಲಿ ತಾತ್ಕಾಲಿಕ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಅಭಿಯಂತರ ನಾಯಕ್ ತಿಳಿಸಿದ್ದಾರೆ.
-ವಿಜಯ್ ಹಾನಗಲ್