ಮಡಿಕೇರಿ, ಸೆ. 20: ಒಂದೊಮ್ಮೆ ನಿರಂತರ ಪತ್ರಗಳು ಸೇರಿದಂತೆ ಮನಿಯಾರ್ಡರ್ ಮುಖಾಂತರ ಹಣದ ಬಟವಾಡೆಯ ಬಿರುಸಿನ ಚಟುವಟಿಕೆಯಲ್ಲಿದ್ದ ಅಂಚೆ ಕಚೇರಿಗಳಲ್ಲಿ ಇಂದು ವ್ಯಾವಹಾರಿಕ ಸ್ಪಂದನ ಜನತೆಯಿಂದ ಕ್ಷೀಣಿಸುತ್ತಿರುವ ಆತಂಕ ವ್ಯಕ್ತಗೊಳ್ಳುತ್ತಿದೆ. ಈ ದಿಸೆಯಲ್ಲಿ ಸಾರ್ವಜನಿಕರು ಅಂಚೆ ಕಚೇರಿಗಳ ಮುಖಾಂತರ ಕನಿಷ್ಟ ಸಣ್ಣ ಪ್ರಮಾಣದ ಹೂಡಿಕೆಯೊಂದಿಗೆ, ತಮ್ಮ ದೂರವಾಣಿ ಬಿಲ್, ವಿದ್ಯುತ್ ಹಾಗೂ ಪೆಟ್ರೋಲ್ ಇತ್ಯಾದಿಗೆ ಹಣದ ವ್ಯವಹಾರ ನಡೆಸಲು ಸುಲಭ ಮಾರ್ಗೋಪಾಯ ಕಂಡುಕೊಳ್ಳುವಂತೆ ಸಲಹೆ ನೀಡಲಾಗಿದೆ.ಮೊನ್ನೆ ಕೊಡಗು ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಜರುಗಿದ ಅಂಚೆ ಅದಾಲತ್‍ನಲ್ಲಿ ವಿವಿಧ ವಿಷಯಗಳ ಕುರಿತಾಗಿ ಚರ್ಚಿಸಲಾಗಿದೆ. ನಾಪೋಕ್ಲು ಅಂಚೆ ಕಚೇರಿಯಲ್ಲಿ ವ್ಯಕ್ತಿಯೊಬ್ಬರು ಹಣ ಹೂಡಿಕೆ ಪ್ರಕರಣ, ಬೆಕ್ಕೆಸೊಡ್ಲೂರುವಿನ ಮಹಿಳೆಯೊಬ್ಬರು ವಿಮೆಯ ಹಣ ತಮ್ಮ ಪಾಲಿಗೆ ನೀಡಬೇಕೆಂದು ಇರಿಸಿರುವ ಬೇಡಿಕೆ ಪ್ರಕರಣ ಕುರಿತು ಚರ್ಚಿಸಿದರೂ ಸೂಕ್ತ ದಾಖಲೆಗಳಿಲ್ಲದೆ ಪರಿಶೀಲನೆಗೆ ಸೀಮಿತಗೊಂಡಿದೆ.

ಈ ವೇಳೆ ಪ್ರಸಕ್ತ ಮಳೆಯಿಂದಾಗಿ ಭೂಕುಸಿತ ಉಂಟಾಗಿ ದೈನಂದಿನ ಅಂಚೆ ಪತ್ರಗಳ ಬಟವಾಡೆಗೆ ತೊಂದರೆಯಾಗಿರುವ ಬಗ್ಗೆ ಸೂರ್ಲಬ್ಬಿಯ ಅಂಚೆ ಸಿಬ್ಬಂದಿ ಅಸಹಾಯಕತೆ ತೋಡಿಕೊಂಡ ಮೇರೆಗೆ, ಪರಿಸ್ಥಿತಿ ಸುಧಾರಿಸುವ ತನಕ ಅವರ ವಾಸ್ತವವನ್ನು ಮಾದಾಪುರಕ್ಕೆ ಬದಲಾಯಿಸಿಕೊಳ್ಳಲು ಸೂಚಿಸಲಾಗಿದೆ.

ಮುಚ್ಚಿರುವ ಕಚೇರಿ : ಇನ್ನು ಪೊನ್ನಂಪೇಟೆ ಬಳಿಯ ಕೋಟೂರು ಅಂಚೆ ಕಚೇರಿಯು ಯಾವದೇ ಕಾರ್ಯನಿರ್ವಹಣೆ ಇಲ್ಲದ ಕಾರಣ ಮುಚ್ಚುವಂತಾಗಿದ್ದು, ಮಾಕುಟ್ಟ ಅಂಚೆ ಕಚೇರಿಯನ್ನು ಕೂಡ ಹೆದ್ದಾರಿ ಸಂಪರ್ಕ ಸಮಸ್ಯೆಯಿಂದ ಪೆರುಂಬಾಡಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.

213 ಶಾಖೆಗಳು : ಕೊಡಗು ಜಿಲ್ಲಾ ಅಂಚೆ ಅಧೀಕ್ಷಕರ ಪ್ರಧಾನ ಕಚೇರಿ ಹಾಗೂ ಮಡಿಕೇರಿಯ ಕೇಂದ್ರ ಕಚೇರಿಯನ್ನು ಒಳಗೊಂಡಂತೆ ಪಟ್ಟಣ ಪ್ರದೇಶಗಳಲ್ಲಿ 25 ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಗ್ರಾಮೀಣ

(ಮೊದಲ ಪುಟದಿಂದ) ಪ್ರದೇಶಗಳಲ್ಲಿ 188 ಸಹಿತ ಒಟ್ಟು 213 ಅಂಚೆ ಕಚೇರಿಗಳಿವೆ.

ಐ.ಪಿ.ಪಿ. ಬ್ಯಾಂಕ್ : ಪ್ರಸಕ್ತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಅಂಚೆ ಕಚೇರಿಗಳ ಮೂಲಕ ನೇರವಾಗಿ ಹಣಕಾಸು ವ್ಯವಹಾರ ನಡೆಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಮಡಿಕೇರಿ ಪ್ರಧಾನ ಅಂಚೆ ಕಚೇರಿ, ಜಿಲ್ಲಾಡಳಿತ ಭವನದ ಅಂಚೆ ಕಚೇರಿ ಸೇರಿದಂತೆ ವೀರಾಜಪೇಟೆ ಹಾಗೂ ಅರಮೇರಿ ಮತ್ತು ಹಾಕತ್ತೂರುವಿನಲ್ಲಿ ಐ.ಪಿ.ಪಿ. ಬ್ಯಾಂಕ್ ತೆರೆಯಲಾಗಿದೆ.

ಈ ಬ್ಯಾಂಕ್‍ಗಳಲ್ಲಿ ಶೂನ್ಯದಿಂದ ಖಾತೆಗಳನ್ನು ತೆರೆಯುವ ಮುಖಾಂತರ ಗ್ರಾಹಕರು ಹಣ ಹೂಡಿಕೆಯೊಂದಿಗೆ ದೈನಂದಿನ ಹಾಗೂ ಇತರ ಸಣ್ಣಪುಟ್ಟ ವ್ಯವಹಾರಗಳನ್ನು ಕೂಡ ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆಸಲು ಅನುಕೂಲ ಕಲ್ಪಿಸಲಾಗಿದೆ. ಇಂತಹ ಅವಕಾಶಗಳನ್ನು ವಿಶೇಷವಾಗಿ ಗ್ರಾಮೀಣ ಜನತೆ ಸದುಪಯೋಗ ಮಾಡಿಕೊಂಡು, ಅಂಚೆ ಕಚೇರಿಗಳು ನಿರಂತರವಾಗಿ ತಮ್ಮ ತಮ್ಮ ಊರುಗಳಲ್ಲಿ ಕಾರ್ಯನಿರ್ವಹಿಸಲು ಸಹಕಾರ ನಿಡುವಂತೆ ಜಿಲ್ಲಾ ಅಂಚೆ ಅಧೀಕ್ಷಕರು ಸಲಹೆ ನೀಡಿದ್ದಾರೆ.

ಅಂಚೆ ಕಚೇರಿಗಳು ಯಾವದೇ ಕಾರ್ಯ ಚಟುವಟಿಕೆ ಇಲ್ಲದೆ ಕೆಲವೆಡೆ ಆರ್ಥಿಕ ಸಂಕಷ್ಟದಿಂದ ಮುಚ್ಚುವ ಪರಿಸ್ಥಿತಿ ಉಂಟಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅಧಿಕಾರಿ ನಾಗೇಂದ್ರ, ಸಾರ್ವಜನಿಕರು ಸ್ವಯಂ ಹೂಡಿಕೆಯಿಂದ ಅವುಗಳ ಸುಧಾರಣೆಗೆ ಕೈ ಜೋಡಿಸುವಂತೆ ಸಲಹೆ ನೀಡಿದ್ದಾರೆ.