ಮಡಿಕೇರಿ, ಸೆ. 20: ಭತ್ತದ ಗದ್ದೆಗಳು ಮರಳು ಮಿಶ್ರಿತ ಕಲ್ಲು ಮಣ್ಣುಗಳಿಂದ ಮರುಭೂಮಿಯಂತೆ ಮಾರ್ಪಾಡುಗೊಂಡಿವೆ. ನದಿ - ತೋಡುಗಳು ಸ್ವಚ್ಛಂದವಾಗಿ ಹರಿಯುತ್ತಿದ್ದ ಸ್ಥಳಗಳು ಕಣ್ಮರೆಯಾಗಿ ಇಲ್ಲಿ ನದಿ ಹರಿಯುತ್ತಿತ್ತೇ ಎಂದು ಪ್ರಶ್ನಾರ್ಹ ಭಾವನೆ ಮೂಡಿಸುವಂತಹ ದೃಶ್ಯ, ಧರೆಗುರುಳಿರುವ ಎಕರೆಗಟ್ಟಲೆ ಕಾಫಿ ತೋಟಗಳು ಮಣ್ಣಿನಡಿ ಸಿಲುಕಿಕೊಂಡು ಮೇಲ್ಭಾಗ ಮಾತ್ರ ಕಾಣುವ ಮನೆಗಳು, ಒಡೆದ ಹೆಂಚಿನ ಚೂರು, ಮುರಿದು ಧರಾಶಾಹಿಯಾಗಿರುವ ಮನೆಗಳ ಮರ ಮುಟ್ಟುಗಳು. ಭಾರೀ ಎತ್ತರದಿಂದ ಪಾತಾಳಕ್ಕೆ ಕುಸಿದಂತಿರುವ ಬೆಟ್ಟ ಶ್ರೇಣಿಗಳು, ರಸ್ತೆಗಳು ಇತ್ತೋ ಇಲ್ಲವೋ ತಿಳಿಯದ ಗೊಂದಲ. ರಸ್ತೆ ಇದ್ದಂತಹ ಸ್ಥಳಗಳಲ್ಲಿ ಹಲವು ಅಡಿಗಳಷ್ಟು ಎತ್ತರದಲ್ಲಿ ನಿಂತಿರುವ ಕಲ್ಲು ಮಣ್ಣಿನ ರಾಶಿ ಹಿಂದಿನ ಜಾಗ ಬದಲಾಗಿ ಎಲ್ಲೆಲ್ಲೋ ಹರಿಯುತ್ತಿರುವ ನೀರು, ದುರ್ಗಮ ಹಾದಿಯಲ್ಲಿ ‘ಆನ್ ಗವರ್ನಮೆಂಟ್ ಡ್ಯೂಟಿ’ ಫಲಕದೊಂದಿಗೆ ಓಡಾಡುವ ಒಂದೆರಡು ಜೀಪ್‍ಗಳು ಇವೆಲ್ಲದರ ನಡುವೆ ಏನೂ ತೋಚದಂತೆ ತಲೆ ಮೇಲೆ ಕೈ ಹೊತ್ತು ತಮ್ಮ ತಮ್ಮ ಜಾಗಗಳನ್ನು ಕಣ್ಣೀರಿನೊಂದಿಗೆ ವೀಕ್ಷಿಸುತ್ತಾ ಆತಂಕದಿಂದ ಕುಳಿತಿರುವ ಜನತೆ. ಅಪಾಯಕಾರಿಯಾಗಿ ಕುಸಿದಿರುವ ಬರೆಗಳ ತುದಿಯಲ್ಲಿ ಆಗಲೋ ಈಗಲೋ ಬೀಳುವಂತಿರುವ ಬಂಡೆಕಲ್ಲುಗಳು, ಕೆಲವೊಂದು ಮನೆಗಳು ಇಂತಹ ದಾರುಣವಾದ ಸನ್ನಿವೇಶಗಳು ಜಲಪ್ರಳಯ, ಭೂಪ್ರಳಯದ ಬಳಿಕ ಈಗಿನ ಚಿತ್ರಣಗಳಾಗಿವೆ.

ಇವೆಲ್ಲದರ ನಡುವೆ ಜೆಸಿಬಿ, ಹಿಟಾಚಿ ಯಂತ್ರಗಳ ಗರ್ಜನೆ ಈ ದೃಶ್ಯಗಳನ್ನು ವೀಕ್ಷಿಸಲು ಆಗಮಿಸಿ ಫೋಟೋ ಕ್ಲಿಕ್ಕಿಸುತ್ತಾ, ‘ವಾಟ್ ಈಸ್ ದಿಸ್ ವಾಟ್‍ಹ್ಯಾಪನ್ಡ್ ಹಿಯರ್’ ಎಂದು ಎನ್ನುವ ಹೊಸ ಹೊಸ ಜನರು. ಹೌದು ಈ ತನಕ ಕಂಡು ಕೇಳರಿಯದಂತಹ ಘೋರ ದುರಂತವೊಂದಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ಹಲವೆಡೆಗಳ ಈ ದೃಶ್ಯ ಎಂತಹವರ ಮನವನ್ನೂ ಕಲಕುತ್ತಿವೆ. ಸೆಪ್ಟೆಂಬರ್ ತಿಂಗಳ ಈ ವೇಳೆಗೆ ಕೊಡಗಿನ ಭತ್ತದ ಗದ್ದೆಗಳು, ಗಿರಿಕಂದರಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದವು. ನದಿ - ತೊರೆ - ತೋಡುಗಳಲ್ಲಿ ಸ್ವಚ್ಛ ನೀರಿನ ಹರಿವಿನಿಂದ ಎಷ್ಟು ಆಳವಿದೆ ಈ ಸ್ಥಳ ಎಂಬವದು ಕೂಡ ಅರಿವಿರುತ್ತಿರಲಿಲ್ಲ. ಆದರೆ ಭೌಗೋಳಿಕವಾಗಿ ವಿಭಿನ್ನವಾಗಿ ಪ್ರಾಕೃತಿಕ ಸೌಂದರ್ಯದಿಂದಲೇ ವಿಶಿಷ್ಟವಾಗಿದ್ದ ಕೊಡಗಿನ ಈ ಪ್ರದೇಶಗಳ ನೈಜ ಭೌಗೋಳಿಕತೆಯೇ ಬದಲಾಗಿ ಹೋಗಿವೆ. ಈಗ ಮಳೆ ನಿಂತಿದೆ. ಆದರೆ, ತಿಂಗಳಿಗೆ ಮುಂಚೆ ಉಂಟಾದ ಪ್ರಾಕೃತಿಕ ವಿಕೋಪ ಈ ಪ್ರದೇಶಗಳಲ್ಲಿ ಭಾರೀ ಬಾಂಬ್ ಸ್ಫೋಟಿಸಿದಂತೆ ಗೋಚರವಾಗುತ್ತಿವೆ.

ಪ್ರಸಕ್ತ ಪ್ರತ್ಯಕ್ಷ ಅವಲೋಕನ

ಭಾರೀ ದುರಂತಗಳು ಸಂಭವಿಸಿದ ಕೆಲವು ಪ್ರದೇಶಗಳಿಗೆ ನಿನ್ನೆ ‘ಶಕ್ತಿ’ ಈಗಿನ ವಸ್ತು ಸ್ಥಿತಿಯನ್ನು ಅವಲೋಕಿಸಲು ತೆರಳಿದ್ದ

(ಮೊದಲ ಪುಟದಿಂದ) ಸಂದರ್ಭ ಕಂಡು ಬಂದ ಸನ್ನಿವೇಶಗಳಿವು. ಒಂದು ರೀತಿಯಲ್ಲಿ ಕೊಡಗು ಜಿಲ್ಲೆಯ ಜನರು ಮಿನಿ ಸರಕಾರದ ಮಾದರಿಯಲ್ಲಿ ಬಹುತೇಕ ವಿಚಾರಗಳಿಗೆ ಸರಕಾರವನ್ನು ಅವಲಂಭಿಸದೆ, ತನ್ನ ತನದಿಂದಲೇ ಬದುಕು ಕಂಡುಕೊಂಡಿದ್ದರು. ತಾವು ದುಡಿಮೆಯ ಬದುಕಿನೊಂದಿಗೆ ಇತರರಿಗೂ ಉದ್ಯೋಗವಕಾಶಗಳನ್ನು ನೀಡುತ್ತಿದ್ದರು. ಆದರೆ ಇಂದು ಈ ಕೈಗಳನ್ನು ಕಟ್ಟಿ ಹಾಕಿದಂತಾಗಿದೆ. ದೊಡ್ಡ ದೊಡ್ಡ ಕಂಪೆÀನಿಗಳು ಮುಚ್ಚಲ್ಪಟ್ಟ ರೀತಿಯಲ್ಲಿ ರೈತರು , ಬೆಳೆಗಾರರಿದ್ದರೆ, ಈ ಕಂಪೆನಿಗಳು ಲಾಕ್ ಔಟ್ ಆದ ಮಾದರಿಯಲ್ಲಿ ಅವಲಂಭಿತರು ಇದ್ದಾರೆ.

ಸ್ವತಂತ್ರ ಜೀವನ ನಡೆಸುತ್ತಿದ್ದ ಮಂದಿ ಸರಕಾರದ ಪರಿಹಾರ ಕೇಂದ್ರಗಳಿಗೆ ತೆರಳಲು ಸವಲತ್ತು ಪಡೆಯಲು ಸಾಧ್ಯವಾಗದೆ ತಮಗೆ ಎದುರಾದ ಈ ಧಾರುಣತೆಗೆ ಕಣ್ಣೀರು ಮಿಡಿಯುತ್ತಿರುವದು ಒಂದೆಡೆಯಾದರೆ, ಈ ಸವಲತ್ತುಗಳನ್ನು ಸರಿಯಾಗಿ ಪಡೆಯಲು ಸಾಧ್ಯವಾಗದ ಮಂದಿ ಮತ್ತೊಂದೆಡೆ ಆಕ್ರೋಶ ಭರಿತರಾಗುತ್ತಿದ್ದಾರೆ. ಆಗಿರುವ ನಷ್ಟದ ಅಂದಾಜು ಮಾಡಲು ಕೆಲವು ಅಧಿಕಾರಿಗಳು ಅಲ್ಲಲ್ಲಿ ಭೇಟಿಯಿತ್ತಾಗ ಅವರ ಹಿಂದೆ - ಮುಂದೆ ಅಲೆಯುತ್ತಾ ತಮಗಾಗಿರುವ ನಷ್ಟದ ಪ್ರಮಾಣ ಶೇಕಡವಾರು ಇಷ್ಟಿದೆ ಎಂದು ಅವರ ಗಮನಕ್ಕೆ ತರಲು ಒದ್ದಾಡುತ್ತಿದ್ದುದೂ ಕಂಡು ಬಂದಿತು. ಈ ನಷ್ಟದ ಅಂದಾಜಿನ ಪಟ್ಟಿ ತಯಾರಿಸುವಲ್ಲಿಯೂ ನೈಜ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ಷೇಪವೂ ವ್ಯಕ್ತಗೊಂಡಿದ್ದು, ಮುಕ್ಕೋಡ್ಲು, ತಂತಿಪಾಲದಲ್ಲಿ ‘ಶಕ್ತಿ’ಗೆ ಗೋಚರಿಸಿತು.

ಕೆಲವು ಪ್ರದೇಶಗಳನ್ನು ವೀಕ್ಷಿಸಲು ತೆರಳಿದ್ದ ನಿಯೋಜಿತ ಅಧಿಕಾರಿಗಳು ಜಿಗಣೆ ಕಂಡು ಹಿಂಜರಿದಾಗ ತಾವುಗಳು ಇಂತಹ ನೂರಾರು ಜಿಗಣೆಗಳಿಂದ ಕಚ್ಚಿಸಿಕೊಂಡು ರಕ್ತ ಚೆಲ್ಲಾಡಿ ತೋಟ - ಮನೆಗಳನ್ನು ಇಲ್ಲಿ ನಿರ್ಮಿಸಿದ್ದೆವು. ಈಗ ಈ ಪರಿಸ್ಥಿತಿ ಎದುರಾಗಿದೆ. ತಾವುಗಳು ಒಂದು ದಿನದ ಮಟ್ಟಿಗೆಯಾದರೂ ಸಂಕಷ್ಟವನ್ನು ಖುದ್ದು ವೀಕ್ಷಿಸಿ ಎಂದು ಒತ್ತಾಯಿಸಿದ್ದಾಗಿ ಮಹಿಳೆಯೊಬ್ಬರು ‘ಶಕ್ತಿ’ಗೆ ತಿಳಿಸಿದರು.

ದುರ್ಗಮ ರಸ್ತೆ

ಮಕ್ಕಂದೂರು ಜಂಕ್ಷನ್‍ನಿಂದ ತಂತಿಪಾಲದತ್ತ ಪ್ರಸ್ತುತ ದುರ್ಗಮವಾಗಿರುವ ಈ ರಸ್ತೆಯಲ್ಲಿ ಜನರ ಓಡಾಟವೇ ಇಲ್ಲವಾಗಿತ್ತು. ರಸ್ತೆಯ ಇಕ್ಕೆಲಗಳಲ್ಲೂ ಕುಸಿದಿರುವ ಬರೆಗಳು, ಅಪಾಯಕ್ಕೆ ಸಿಲುಕಿರುವ ಮನೆಗಳು ಕಂಡು ಬಂದವು. ತಂತಿಪಾಲ ಸೇತುವೆ ಇದ್ದ ಸ್ಥಳವಂತೂ ನಂಬಲಸಾಧ್ಯವಾಗಿದೆ. ಇಲ್ಲಿ ವ್ಯಕ್ತಿಯೊಬ್ಬರು ಸುಮಾರು 20 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಆರ್‍ಸಿಸಿ ಮನೆಯೊಂದು ಬಹುತೇಕ ಮಣ್ಣಿನಡಿ ಮುಚ್ಚಿ ಹೋಗಿದೆ. ಇದರ ಪಕ್ಕದಲ್ಲಿ ಮಾರುತಿ ವ್ಯಾನೊಂದು ಮಣ್ಣಿನಡಿ ಸಿಲುಕಿದ್ದು, ಅಲ್ಲೇ ಇದೆ. ಈ ಪ್ರದೇಶ ಮರಳು ಮಿಶ್ರಿತ ಮಣ್ಣು ಕಲ್ಲಿನಿಂದ ಕೂಡಿದ್ದು, ಅಕ್ಷರಶಃ ಮರಳು ಭೂಮಿಯಂತಾಗಿದೆ. ಅಲ್ಲಿದ್ದ ಜನರು ಈ ಹಿಂದೆ ಈ ಪ್ರದೇಶ ಭತ್ತದ ಗದ್ದೆಗಳಾಗಿತ್ತು ಎಂದು ನೋವಿನಿಂದ ನುಡಿದರು. ಇಲ್ಲಿನ ಕೆಲವು ಮನೆಗಳು ಉಳಿದುಕೊಂಡಿದ್ದರೂ ವಾಸಕ್ಕೆ ಸಾಧ್ಯವಾಗದು. ತೋಟ - ಗದ್ದೆಗಳು ತಲಾ ಸದ್ಯಕ್ಕೆ ಕನಸಿನ ಮಾತು. ಆದರೂ ಹುಟ್ಟಿ ಬೆಳೆದು ಬದುಕು ಕಂಡ ಸ್ಥಳವನ್ನು ಬಿಡಲಾಗದು ಎನ್ನುತ್ತಾರೆ ಅವರು. ಈ ಮಾರ್ಗದಲ್ಲಿ ಜೀಪ್‍ನಂತಹ ವಾಹನಗಳು ಮಾತ್ರ ಸಂಚರಿಸುವ ಪರಿಸ್ಥಿತಿ ಇದೆ.

ಕಾಂಡನಕೊಲ್ಲಿ ಮಾರ್ಗದಲ್ಲಿ

ಮಕ್ಕಂದೂರು - ಮಾದಾಪುರ ರಸ್ತೆಯಲ್ಲಿ ಭಾರೀ ಭೂ ಕುಸಿತವಾದ ಬಾಲಾಜಿ ಎಸ್ಟೇಟ್‍ನ ಬಳಿ ತ್ವರಿತಗತಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹಲವು ಜೆಸಿಬಿ ಯಂತ್ರಗಳು ಕಾರ್ಯಾಚರಿಸುತ್ತಿದ್ದು, ಜಾಗದ ಮಾಲೀಕರು ಕುಸಿದ ರಸ್ತೆಯ ಮೇಲ್ಭಾಗದ ಜಾಗವನ್ನು ಬಿಟ್ಟು ಕೊಟ್ಟಿದ್ದು, ಇಲ್ಲಿ ರಸ್ತೆ ನಿರ್ಮಾಣ ಕಾರ್ಯ ನಿರೀಕ್ಷೆಗೂ ಮೀರಿ ತ್ವರಿತವಾಗಿ ಪೂರ್ಣಗೊಳ್ಳುವತ್ತ ಸಾಗುತ್ತಿದೆ. ಹಚ್ಚ ಹಸಿರಿನ ಗಿರಿ ಕಂದರಗಳು ನಡು ನಡುವೆ ಧರಾಶಾಹಿಯಾಗಿದ್ದು, ನಂಬಲಸಾದ್ಯರೀತಿಯಲ್ಲಿ ಕಂಡು ಬರುತ್ತಿವೆ.

ಮಡಿಕೇರಿ - ಮೇಕೇರಿ

ಮಡಿಕೇರಿ - ಮೇಕೇರಿ ರಸ್ತೆಯಲ್ಲಿ ಉಂಟಾಗಿರುವ ಭೂಕುಸಿತದ ಸ್ಥಳದಲ್ಲಿ ರಸ್ತೆ ಸಮರ್ಪಕಗೊಳಿಸುವ ಕೆಲಸವೂ ಶೀಘ್ರಗತಿಯಲ್ಲಿ ನಡೆಯುತ್ತಿದೆ.

ಮೇಕೇರಿಯಿಂದ ಮಂಗಳೂರು ಮಾರ್ಗ

ಮೇಕೇರಿಯಿಂದ ಮಂಗಳೂರು ಮಾರ್ಗಕ್ಕೆ ಸೇರುವ ರಸ್ತೆಯ ಬದಿಯ ಭತ್ತದ ಗದ್ದೆಗಳಲ್ಲಿಯೂ ಯಾರೋ ತಂದು ಹಾಕಿದಂತೆ ಮರಳು ತುಂಬಿಕೊಂಡಿರುವ ದೃಶ್ಯ ಕಂಡು ಬರುತ್ತದೆ.

ಸಂಪಾಜೆ ಮಾರ್ಗ

ಮಂಗಳೂರು - ಭಾಗಮಂಡಲ ರಸ್ತೆಯ ಜಂಕ್ಷನ್‍ನಿಂದ ಸಂಪಾಜೆ ಮಾರ್ಗದಲ್ಲಿ ಸಾಗಿದಾಗ ಅನತಿ ದೂರ ಏನೂ ಅರಿವಾಗದು. ಮುಂದೆ ಸಾಗಿದಂತೆ ಬರುವ ಮದೆ, ಜೋಡುಪಾಲ ಮುಖ್ಯರಸ್ತೆ ಎರಡನೇ ಮೊಣ್ಣಂಗೇರಿಯ ದೃಶ್ಯ ಪ್ರಕೃತಿಯ ಭೀಕರತೆಗೆ ಸಾಕ್ಷಿಯಾಗಿದೆ. ನಡು ನಡುವೆ ಗಿರಿ ಕಂದರಗಳು ಕುಸಿದು ಕೆಳಕ್ಕೆ ನೀರು ಹರಿದ ರಭಸಕ್ಕೆ ಅಸಂಖ್ಯ ಮರಗಳು ಕಲ್ಲು ಬಂಡೆಗಳು ಕೊಚ್ಚಿ ಬಂದಿವೆ. ಮದೆನಾಡಿನಿಂದ ಜೋಡು ಪಾಲ ಮಾರ್ಗದಲ್ಲಿ ಹರಿಯುತ್ತಿದ್ದ ಪಯಶ್ವಿನಿ ನದಿಯ ದೃಶ್ಯ ಇಲ್ಲಿ ನದಿ ಹರಿಯುತ್ತಿತ್ತು ಎಂಬದನ್ನೇ ಮರೆ ಮಾಡಿದಂತಿದೆ. ಇಲ್ಲಿ ನೀರಿನ ಬದಲಾಗಿ ಮರಗಳ ಕಲ್ಲು ಬಂಡೆಗಳ ರಾಶಿ ಮಾತ್ರ ಕಂಡು ಬರುತ್ತಿವೆ. ಈ ಮಾರ್ಗದ ಮುಖ್ಯ ರಸ್ತೆಯನ್ನು ಸರಿಪಡಿಸುವ ಕೆಲಸವೂ ಸಮರೋಪಾದಿಯಲ್ಲಿ ಸಾಗುತ್ತಿದ್ದು, ಆದಷ್ಟು ಶೀಘ್ರದಲ್ಲಿ ಮತ್ತೆ ಹಿಂದಿನಂತೆ ರಸ್ತೆಯಾಗುವ ಸಾಧ್ಯತೆಗಳು ಕಂಡು ಬರುತ್ತಿವೆ.

ಜೋಡುಪಾಲದಿಂದ ಬಸ್ ವ್ಯವಸ್ಥೆ

ಸದ್ಯದ ಮಟ್ಟಿಗೆ ಮಡಿಕೇರಿಯಿಂದ ಮೇಕೇರಿ ಮಾರ್ಗವಾಗಿ ಕೆಎಸ್‍ಆರ್‍ಟಿಸಿ ಮಿನಿ ಬಸ್‍ಗಳು ಮಾತ್ರ ಜೋಡುಪಾಲದ ತನಕ ಸಂಚರಿಸುತ್ತಿವೆ. ಜೋಡುಪಾಲದಿಂದ ಕೆಎಸ್‍ಆರ್‍ಟಿಸಿ ಬಸ್‍ಗಳು ಮಂಗಳೂರಿನತ್ತ ತೆರಳಲು ಅವಕಾಶವಿದೆ. ಲಘು ವಾಹನಗಳು ಮಡಿಕೇರಿಯತ್ತ ಸಂಚರಿಸುತ್ತಿವೆ.

ಸಂಕಷ್ಟದ ನಡುವೆಯೂ ಎದ್ದು ಬರುತ್ತಿದೆ ಕೊಡಗು

ಪ್ರಾಕೃತಿಕ ವಿಕೋಪದಿಂದಾಗಿ ಹಲವಾರು ಸಮಸ್ಯೆಗಳು ಬಗೆ ಬಗೆಯ ರೀತಿಯಲ್ಲಿ ಸೃಷ್ಟಿಯಾಗಿವೆ. ಇದು ಆಸ್ತಿ-ಪಾಸ್ತಿ ಹಾನಿಯಿಂದ, ಮನೆ - ಮಠಗಳು ಕಳೆದು ಹೋದ್ದರಿಂದ ಕೃಷಿ ಫಸಲಿಗೆ ಸಂಚಕಾರ ವೈಯಕ್ತಿಕವಾಗಿ ಈ ರೀತಿಯಲ್ಲೂ ಇವೆ. ಇದರೊಂದಿಗೆ ಮುಖ್ಯವಾಗಿ ಸಾರ್ವಜನಿಕ ಅಗತ್ಯತೆಗಳಿಗೂ ಧಕ್ಕೆಯಾಗಿವೆ. ಮುಖ್ಯವಾಗಿ ಹಲವು ಪ್ರಮುಖ ರಸ್ತೆಗಳು ಸಂಪರ್ಕ ಕಡಿತಗೊಂಡು ಕೊಡಗು ದ್ವೀಪದಂತಾಗಿತ್ತು. ಇದರಿಂದಾಗಿ ಬಹುತೇಕ ವಾಣಿಜ್ಯ - ವಹಿವಾಟುಗಳೂ ಕ್ಷೀಣಗೊಂಡಿದ್ದವು. ಇದೀಗ ಆದ್ಯತೆಯ ಮೇರೆಗೆ ಸಂಪರ್ಕ ಕಡಿತಗೊಂಡಿದ್ದ ಪ್ರಮುಖ ರಸ್ತೆಗಳನ್ನು ಸರಿಪಡಿಸುವ ಕೆಲಸ ಜನಪ್ರತಿನಿಧಿಗಳು, ಅಧಿಕಾರಿಗಳ ಪ್ರಯತ್ನದ ಫಲವಾಗಿ ಕ್ಷಿಪ್ರಗತಿಯಲ್ಲಿ ಸಾಗುತ್ತಿವೆ. ಮೆಲ್ಲ ಮೆಲ್ಲನೆ ಪ್ರಮುಖ ರಸ್ತೆಗಳು ಸಮರ್ಪಕಗೊಳ್ಳುತ್ತಿದ್ದು, ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿತವಾಗುತ್ತಿವೆ. ದಾನಿಗಳು, ಸರಕಾರ, ಸಂಘ - ಸಂಸ್ಥೆಗಳು ಒದಗಿಸುತ್ತಿರುವ ಪರಿಹಾರವೂ ಒಂದಷ್ಟು ನೆರವಾಗುತ್ತಿದ್ದರೆ, ಬುಡ ಮೇಲಾದಂತಿದ್ದ ಪ್ರಮುಖ ವ್ಯವಸ್ಥೆಗಳು ತ್ವರಿತಗತಿಯ ಕೆಲಸದ ಮೂಲಕ ಸಾಗುತ್ತಿದ್ದು, ಸಂಕಷ್ಟದ ನಡುವಿನಿಂದ ಕೊಡಗು ಮೇಲೆದ್ದು ಬರುತ್ತಿದೆ.