ಶ್ರೀಮಂಗಲ, ಸೆ. 20: ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಉಂಟಾಗಿರುವ ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು, ಬಿರುನಾಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹೊರ ಜಿಲ್ಲೆಗಳಿಂದ ನೇಮಿಸಿರುವ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ.

ಗ್ರಾ.ಪಂ ವ್ಯಾಪ್ತಿ ಪೊರಾಡು ಗ್ರಾಮದಲ್ಲಿ ಕಾಫಿ ಫಸಲು ನಷ್ಟದ ಬಗ್ಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕೃಷಿ ಅಧಿಕಾರಿ ಎನ್.ನರಸಿಂಹಯ್ಯ ಅವರ ನೇತೃತ್ವದಲ್ಲಿ ಕಾಫಿ ಸಮೀಕ್ಷೆ ನಡೆಯುತ್ತಿದ್ದು, ಗ್ರಾಮದ ಹಲವು ತೋಟಗಳಿಗೆ ಭೇಟಿ ನೀಡಿ ನಷ್ಟ ಪ್ರಮಾಣದ ಬಗ್ಗೆ ದಾಖಲಿಸಿದರು. ಈ ಸಂದರ್ಭ ಮಾತನಾಡಿದ ಅವರು ಈಗಾಗಲೇ ಗ್ರಾಮದ ಹಲವು ತೊಟಗಳಿಗೆ ಭೇಟಿ ನೀಡಿದ್ದು, ಶೇ. 50 ರಿಂದ 60 ರಷ್ಟು ಬೆಳೆ ನಷ್ಟ ಉಂಟಾಗಿದೆ. ಕೆಲವು ತೋಟಗಳಲ್ಲಿ ಶೇ. 60ಕ್ಕಿಂತ ಹೆಚ್ಚು ಬೆಳೆ ನಷ್ಟ ಉಂಟಾಗಿದೆ. ಈಗಾಗಲೇ ತೋಟಗಾರಿಕೆ ಬೆಳೆ ಹಾಗೂ ಕೃಷಿ ಬೆಳೆಯ ಬಗ್ಗೆ ಸರ್ಕಾರಕ್ಕೆ ಪ್ರತ್ಯೇಕ ತಂಡ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದು, ಬಾಕಿ ಉಳಿದಿರುವ ಕಾಫಿ ಬೆಳೆಯ ನಷ್ಟದ ಸಮೀಕ್ಷೆಯನ್ನು ಸರಕಾರದ ಸೂಚನೆಯಂತೆ ಮಾಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭ ಹುದಿಕೇರಿ ಕಂದಾಯ ಇಲಾಖೆಯ ಲೆಕ್ಕಾಧಿಕಾರಿ ಲೋಹಿತ ಮತ್ತಿತರರು ಹಾಜರಿದ್ದರು.