ಗೋಣಿಕೊಪ್ಪಲು, ಸೆ. 20: ಗೋಣಿಕೊಪ್ಪಲು ಪೊಲೀಸ್ ಠಾಣೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ “ಯುವ ಜನಾಂಗದ ಮೇಲೆ ಮಾದಕ ವಸ್ತುಗಳ ವ್ಯಸನದ ಪರಿಣಾಮಗಳು” ಎಂಬ ಮಾದಕ ವಸ್ತು ವ್ಯಸನದ ಕುರಿತ ವಿಶೇಷ ಅರಿವು ಕಾರ್ಯಕ್ರಮವನ್ನು ಆಯೋಜಿ ಸಲಾಗಿತ್ತು. ಈ ಕಾರ್ಯಕ್ರಮವನ್ನು ಗೋಣಿಕೊಪ್ಪಲು ವೃತ್ತ ನಿರೀಕ್ಷಕ ದಿವಾಕರ್ ಉದ್ಘಾಟಿಸಿ ಮಾತನಾಡಿ” ಇಂದಿನ ಯುವ ಜನಾಂಗ ಕುತೂಹಲಕ್ಕಾಗಿ ಕೆಲವೊಮ್ಮೆ ಮಾದಕ ವಸ್ತು ಸೇವನೆ ಮಾಡಿ ನಂತರ ಮಾದಕವಸ್ತು ಸೇವನೆಯನ್ನು ಚಟವಾಗಿಸಿಕೊಂಡು ತಮ್ಮ ಅಮೂಲ್ಯವಾದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಇಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವದು ಗಮನಕ್ಕೆ ಬಂದಿದ್ದು, ಮಾದಕ ವಸ್ತುಗಳನ್ನು ಬಳಸುವವರು ಹಾಗೂ ಮಾರಾಟ ಮಾಡುವವರನ್ನು ಕಂಡು ಹಿಡಿದು ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುವದು ಎಂದರು.

ಕುಟ್ಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಅರ್ಜನ್ ತಿಮ್ಮಯ್ಯ ಮಾದಕ ವಸ್ತು ಸೇವನೆಯಿಂದ ಆಗುವ ದೈಹಿಕ ಹಾಗೂ ಮಾನಸಿಕ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು.

ಪೊನ್ನಂಪೇಟೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಹೇಶ್ ಮಾದಕ ವಸ್ತು ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಿ ಎಂದರು.

ಗೋಣಿಕೊಪ್ಪಲು ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಶ್ರೀಧರ್ ಮಾತನಾಡಿ” ಮಾದಕ ವಸ್ತು ಮಾರಾಟ ಮಾಡುವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದರೆ ನಾವು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ಸಂದರ್ಭ ಗೋಣಿಕೊಪ್ಪಲು ಪಟ್ಟಣದ ಕೆಲವು ಟೀ ಸ್ಟಾಲ್ ಹಾಗೂ ಜ್ಯೂಸ್ ಸೆಂಟರ್‍ಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಧೂಮಪಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂಬ ಬಗ್ಗೆ ಗಮನ ಸೆಳೆದಾಗ ಸಾರ್ವಜನಿಕರಿಂದ ದೂರು ಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು” ಎಂದರು. ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆಯಿಂದಾಗುವ ಪರಿಣಾಮದ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ಪ್ರಾಂಶುಪಾಲರಾದ ಎಸ್.ಎಸ್. ಮಾದಯ್ಯ ನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಎಸ್.ಆರ್. ತಿರುಮಲಯ್ಯ ಹಾಗೂ ಕನ್ನಡ ಉಪನ್ಯಾಸಕ ಅಕ್ರಂ, ಪೊಲೀಸ್ ಸಿಬಂಧಿಗಳಾದ ಮಂಜುನಾಥ್ ಹಾಗೂ ಮಹಮ್ಮದ್ ಆಲಿ ಉಪಸ್ಥಿತರಿದ್ದರು.