ವೀರಾಜಪೇಟೆ, ಸೆ.20: ವೀರಾಜಪೇಟೆ ಪಟ್ಟಣದಲ್ಲಿ ಚಿಕನ್ ವ್ಯಾಪಾರಿಗಳ ನಡುವಿನ ಪೈಪೋಟಿಯಿಂದಾಗಿ ಇಲ್ಲಿನ ಚಿಕನ್ ಪ್ರಿಯರಿಗೆ ಅಗ್ಗದ ದರದಲ್ಲಿ ಚಿಕನ್ ದೊರೆಯುತ್ತಿರುವದರಿಂದ ಗ್ರಾಹಕರು ಚಿಕನ್ ಅನ್ನು ಮುಗಿಬಿದ್ದು ಖರೀದಿಸುವಂತಾಗಿದೆ.

ವೀರಾಜಪೇಟೆ ಪಟ್ಟಣದಲ್ಲಿ ಸುಮಾರು 26 ಚಿಕನ್ ಮಾರಾಟದ ಮಳಿಗೆಗಳಿದ್ದು ಕಳೆದ ಎರಡು ತಿಂಗಳುಗಳ ಹಿಂದೆ ಈ ಚಿಕನ್ ಮಾರಾಟ ಮಳಿಗೆಗಳಲ್ಲಿ ಶುಚಿಗೊಳಿಸಿದ ಚಿಕನ್ ಕೆ.ಜಿ.ಗೆ ರೂ. 210ರಿಂದ 230ರವರೆಗೆ ಮಾರಾಟವಾಗುತ್ತಿದ್ದ ಫಾರಂ ಬೆಳವಣಿಗೆಯ ಚಿಕನ್ ಈಗ ಕಳೆದ 5 ದಿನಗಳಿಂದ ವೀರಾಜಪೇಟೆಯ ಎಲ್ಲ ಚಿಕನ್ ಅಂಗಡಿಗಳಲ್ಲಿ ಶುಚಿಗೊಳಿಸಿದ ಚಿಕನ್ ಕೆ.ಜಿ.ಗೆ ರೂ. 80ರಿಂದ 90ರವರೆಗೆ ಮಾರಾಟವಾಗುತ್ತಿದೆ. ಆಯ್ದ ಅಂಗಡಿ ಮಳಿಗೆಗಳಲ್ಲಿರುವ ಜೀವದ ಕೋಳಿಯಂತು ಇನ್ನು ಅಗ್ಗದ ದರದಲ್ಲಿ ದೊರೆಯುತ್ತಿರುವದು ಚಿಕನ್ ಪ್ರಿಯರಿಗೆ ವಿಶೇಷವೆನಿಸಿದೆ.

ಮೈಸೂರು, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ವಿವಿಧೆಡೆಗಳಲ್ಲಿ ಶುಚಿಗೊಳಿಸಿದ ಚಿಕನ್ ಕೆ.ಜಿ.ಗೆ ರೂ 120ರಿಂದ 140ರವರೆಗೆ ಮಾರಾಟ ಮಾಡಲಾಗುತ್ತಿದೆ. ಹೊರ ಊರಿನ ಚಿಕನ್ ಮಾರಾಟವನ್ನು ವೀರಾಜಪೇಟೆ ಪಟ್ಟಣಕ್ಕೆ ಹೋಲಿಸಿದಾಗ ವೀರಾಜಪೇಟೆಯಲ್ಲಿ ಸುಮಾರು ಶೇಕಡ 40ರಷ್ಟು ಕಡಿಮೆ ಬೆಲೆಯಲ್ಲಿ ಚಿಕನ್ ದೊರೆಯುತ್ತಿದೆ.

ವೀರಾಜಪೇಟೆಯಲ್ಲಿ ಬುಧವಾರ ಸಂತೆ ದಿನ. ಯಾವದೇ ಚಿಕನ್ ಅಂಗಡಿಗಳಲ್ಲಿ ನೋಡಿದರೂ ಗ್ರಾಹಕರು ಮುಗಿ ಬಿದ್ದು ಚಿಕನ್ ಖರೀದಿಸುತ್ತಿದ್ದು ಕಂಡು ಬಂತು. ರೂ. 100 ರ ಹಾಗೂ ರೂ 200ರ ನೋಟು ಹೊಂದಿದ್ದ ಗ್ರಾಹಕರು ಮಾರಾಟ ಮಳಿಗೆಯವನೊಂದಿಗೆ ಚಿಲ್ಲರೆಯನ್ನೇ ಕೇಳದೆ ಪೂರ್ತಿ ನಗದು ಹಣಕ್ಕೂ ಚಿಕನ್ ತೂಕ ಮಾಡಿ ಎಂಬದಾಗಿ ಹೇಳುತ್ತಿದ್ದುದು ಕೇಳಿ ಬಂತು. ಮದುವೆ ಇತರ ಸಮಾರಂಭಗಳಿಗೂ ಚಿಕನ್‍ನ ಸಗಟು ಉದ್ಯಮಿಗಳು ಶುದ್ಧೀಕರಿಸಿದ ಚಿಕನ್‍ಗೆ ಕೆ.ಜಿ.ಗೆ ರೂ 80ರಂತೆ ಮಾರಾಟ ಮಾಡುತ್ತಿದ್ದಾರೆ. ಇಷ್ಟು ಅಗ್ಗದ ದರದಲ್ಲಿಯೂ ಗುಣಮಟ್ಟದ ಚಿಕನ್ ಮಾರಾಟವಾಗುತ್ತಿದೆ ಎಂದರೆ ಹೊರಗಿನ ಚಿಕನ್ ಪ್ರಿಯರು ನಂಬುತ್ತಲೇ ಇಲ್ಲ. ಮದುವೆ, ಗೃಹ ಪ್ರವೇಶ ಇತರ ಮಾಂಸಹಾರಿ ಸಮಾರಂಭಗಳಲ್ಲಂತೂ ಕುರಿ ಮಾಂಸಕ್ಕಿಂತಲೂ ಚಿಕನ್ ಖಾದ್ಯವೇ ಅಧಿಕವಾಗಿರುತ್ತದೆ ಎಂದು ಅನುಭವಿಗಳು ತಿಳಿಸುತ್ತಾರೆ.

ವೀರಾಜಪೇಟೆ ಪಟ್ಟಣದ ಚಿಕನ್ ಚಿಲ್ಲರೆ ವ್ಯಾಪಾರಿಗಳು ಹಾಗೂ ಸಗಟು ವ್ಯಾಪಾರಿಗಳ ನಡುವೆ ನಡೆದ ಪೈಪೋಟಿಯೇ ಈ ಅಗ್ಗದ ದರದಲ್ಲಿ ಗ್ರಾಹಕರಿಗೆ ಚಿಕನ್ ದೊರೆಯಲು ಕಾರಣವಾಗಿದೆ. ಇದರ ಲಾಭ ಅನಿರೀಕ್ಷಿತವಾಗಿ ಈಗ ಗ್ರಾಹಕರಿಗೆ ದೊರೆಯುವಂತಾಗಿದೆ. ಕೆಲವು ವ್ಯಾಪಾರಿಗಳಂತೂ ಮೈಸೂರು, ಹುಣಸೂರಿನಲ್ಲಿ ಚಿಕನ್‍ನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡಿದರೂ ಇಲ್ಲಿ ಪೈಪೋಟಿಯ ಅಗ್ಗದ ದರದಲ್ಲಿಯೇ ಚಿಕನ್ ಮಾರಾಟ ಮಾಡಬೇಕಾಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಎಲ್ಲೆಂದರಲ್ಲಿ ಚಿಕನ್ ಮಾರಾಟಕ್ಕೆ ಪರವಾನಗಿ ನೀಡುತ್ತಿರುವದರಿಂದ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ.

-ಡಿ.ಎಂ.ಆರ್