ಬೆಂಗಳೂರು, ಸೆ. 20: ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಟ್ಟರೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ರಾಜ್ಯದ ಜನರಿಗೆ ಕರೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಸನದಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಡಾಲರ್ಸ್ ಕಾಲನಿಯ ನಿವಾಸದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಎಸ್‍ವೈ ನಿವಾಸದ ಬಳಿ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಜೈಲು ನಾಯಕ, ಆಪರೇಷನ್ ಕಮಲ ರೂವಾರಿ, ಅನೈತಿಕ ರಾಜಕಾರಣ ಮಾಡುತ್ತಿರುವ ರಾಜಕಾರಣಿ ಎಂದು ಯಡಿಯೂರಪ್ಪ ಅವರ ವಿರುದ್ಧ ಧಿಕ್ಕಾರ ಕೂಗಿದರು.

ಈ ಸಂದರ್ಭ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು, ರೇಣುಕಾಚಾರ್ಯ ಅವರ ಮೇಲೆ ಕಾಂಗ್ರೆಸ್‍ನ ಮನೋಹರ ಮತ್ತಿತರರು ಕೈ ಮಾಡಿದ್ದಾರೆ. ಪ್ರತಿರೋಧವಾಗಿ ಕೈ ಕಾರ್ಯಕರ್ತರನ್ನು ಯಡಿಯೂರಪ್ಪ ನಿವಾಸದಿಂದ ಮುಖ್ಯ ರಸ್ತೆಯವರೆಗೆ ತಳ್ಳಿಕೊಂಡು ಶಾಸಕ ರೇಣುಕಾಚಾರ್ಯ ಮತ್ತು ವಿಶ್ವನಾಥ್ ಬಂದಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಅಸಹಾಯಕರಾಗಿ ನಿಂತಿದ್ದರು.

ಘಟನೆಯ ಹಿನ್ನೆಲೆ : ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಹಾಸನದಲ್ಲಿ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಮುಂದುವರೆಸಿದರೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ರಾಜ್ಯದ ಜನತೆಗೆ ನಾನೇ ಕರೆ ನೀಡುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರು. 20 ಶಾಸಕರನ್ನು “ಆಪರೇಷನ್ ಕಮಲಕ್ಕೆ”ಮುಂಬೈಗೆ ಕರೆದೊಯ್ಯಲಾಗಿದೆ ಎಂಬ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದ್ದರು. ಬಳಿಕ ಬೆಂಗಳೂರಿನಲ್ಲಿಯೂ ಮಾತನಾಡಿದ ಸಿ.ಎಂ. ಕುಮಾರಸ್ವಾಮಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.” ಗಾಜಿನ ಮನೆಯಲ್ಲಿ ಕೂತಿದ್ದೀರಿ.. ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಿ.. ಇದು ನಮ್ಮದೇ ಸರ್ಕಾರ, ಒಂದೇ ದಿನದಲ್ಲಿ ಏನು ಬೇಕಾದರೂ ಆಗಬಹುದು” ಎಂದು ಗುಡುಗಿದರು.

ಕಾಂಗ್ರೆಸ್ ಧಾಳಿ ಕುರಿತು ಡಾಲರ್ಸ್ ಕಾಲನಿಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ ಗೂಂಡಾಗಿರಿ ಇದು. ಅಮಾಯಕರನ್ನು ಕರೆತಂದು ಪ್ರತಿಭಟನೆ ನಡೆಸಲಾಗುತ್ತಿದೆ. ಬಿಜೆಪಿ ನಾಯಕರು ಹೇಡಿಗಳಲ್ಲ. ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ. ನಾವೂ ತಾಯಿ ಎದೆ ಹಾಲು ಕುಡಿದಿದ್ದೀವಿ ಎಂದು ಕಿಡಿಕಾರಿದರು.

ಗೂಂಡಾಗಿರಿಗೆಲ್ಲ ನಾವು ಬಗ್ಗಲ್ಲ. ನಮಗೂ ಗೂಂಡಾಗಿರಿ ಮಾಡಲು ಬರುತ್ತದೆ. ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ಗೊತ್ತು. ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾದ್ರೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಮಾಡಾಳು ವಿರೂಪಾಕ್ಷಪ್ಪ ಹೇಳಿದರು. ಬಿಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಮಾತಿಗೆ ತಿರುಗೇಟು ನೀಡಿ “ನಮ್ಮದೂ ಕೇಂದ್ರದಲ್ಲಿ ಸರಕಾರವಿದೆ, ನಾವೂ ಏನು ಬೇಕಾದರೂ ಮಾಡಬಹುದು” ಎಂದು ಎಚ್ಚರಿಸಿದ್ದಾರೆ. ಗೂಂಡಾಗಿರಿಗೆ ಹೆದರುವದಿಲ್ಲ ಎಂದಿದ್ದಾರೆ.

ಇಂದು 20 ಶಾಸಕರು ಮುಂಬೈಗೆ ತೆರಳಿದ್ದಾರೆನ್ನುವ ಹಿನ್ನೆಲೆಯಲ್ಲಿ ಈ ಮಾತಿನ ಚಕಮಕಿ, ಮಾರಾಮಾರಿ ನಡೆದಿದೆ.