ಗೋಣಿಕೊಪ್ಪ ವರದಿ, ಸೆ. 21 : ಭೂಕುಸಿತಕ್ಕೆ ಒಳಗಾದ ಬಲಿಜ ಜನಾಂಗದ ಸಂತ್ರಸ್ತರಿಗೆ ನೆರವಾಗಲು ಕೊಡಗು ಬಲಿಜ ಸಮಾಜದಿಂದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ತಾ. 22 ರಿಂದ ನಡೆಸಲಾಗುವದು ಎಂದು ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ. ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.

ಇಲ್ಲಿವರೆಗೆ ಎಲ್ಲಾ ಜನಾಂಗದ ಸಂತ್ರಸ್ತರಿಗೆ ನೆರವು ನೀಡಲಾಗಿದೆ. ಇದರಂತೆ ಬಲಿಜ ಸಮಾಜದ ಸಂತ್ರಸ್ತರನ್ನು ಗುರುತಿಸಿ ಅವರ ಬದುಕಿಗೆ ಬೆನ್ನೆಲುಬಾಗಿ ನಿಲ್ಲಲು ಸಮಾಜ ನಿರ್ಧರಿಸಿದೆ. ಇದರಂತೆ ಜಿಲ್ಲೆಯ ಸುಮಾರು 200 ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ ಮಾಡಲಾಗವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾ. 22ರಂದು ಗೋಣಿಕೊಪ್ಪ ಆರ್‍ಎಂಸಿ ಸಭಾಂಗಣದಲ್ಲಿ ಬೆ. 11ಕ್ಕೆ ವಿತರಣೆ ಮಾಡಲಾಗುವದು. ವೀರಾಜಪೇಟೆ ತಾಲೂಕಿನ 75, ಮಡಿಕೇರಿ ತಾಲೂಕಿನ 50, ಸೋಮವಾರಪೇಟೆ ತಾಲೂ ಕಿನ 60 ಕುಟುಂಬಗಳಿಗೆ ವಿತರಣೆ ಮಾಡಲಾಗುವದು. ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್, ಆರ್‍ಎಂಸಿ ಆಡಳಿತ ಮಂಡಳಿ ಅಧ್ಯಕ್ಷ ಸುವಿನ್ ಗಣಪತಿ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಕ್ಕೆ ಮಡಿಕೇರಿ ತಾಲೂಕಿನ ಬಲಿಜ ಬಾಂಧವರಿಗೆ ಮೂರ್ನಾಡುವಿನಲ್ಲಿ ವಿತರಣೆ ಮಾಡಲಾಗವದು ಎಂದರು.

ಆಹಾರ ಸಾಮಗ್ರಿ ವಿತರಣೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ರಾಜ್ಯ ಬಲಿಜ ಸಮಾಜದ ಅಧ್ಯಕ್ಷ ಡಾ. ಟಿ. ವೇಣುಗೋಪಾಲ್ ದಾನದ ರೂಪದಲ್ಲಿ ಇವನ್ನು ನೀಡುತ್ತಿದ್ದಾರೆ ಎಂದರು.

ತಾಲೂಕು ಗೌ. ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು ಮಾತನಾಡಿ, ಬಲಿಜ ಸಮಾಜದ ಹಿರಿಯ ಕೈವಾರ ತಾತಯ್ಯ ಅವರ ಜನ್ಮದಿನಾಚರಣೆಯನ್ನು ಸರ್ಕಾರ ಆಚರಿಸುವಂತಾಗಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಪ್ರ. ಕಾರ್ಯದರ್ಶಿ ಗೀತಾ ನಾಯ್ಡು, ಉಪಾಧ್ಯಕ್ಷ ಎಸ್. ಕೆ. ಯತಿರಾಜ್, ಬಲಿಜ ಕ್ರೀಡೋತ್ಸವ ಸಮಿತಿ ಗೌ. ಕಾರ್ಯದರ್ಶಿ ಟಿ. ಆರ್. ಗಣೇಶ್ ಉಪಸ್ಥಿತರಿದ್ದರು.