ಮಡಿಕೇರಿ, ಸೆ. 21: ಕೊಡವ ಮಕ್ಕಡ ಕೂಟದಿಂದ ಹೊರ ತರಲಾಗಿರುವ ಕೊಡವ ಕ್ರೀಡಾ ಕಲಿಗಳು ಮತ್ತು ವಾಲ್ಮೀಕಿ ರಾಮಾಯಣ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ತಾ. 23 ರಂದು ಕೊಡಗು ಪ್ರೆಸ್‍ಕ್ಲಬ್ ಜಂಟಿ ಆಶ್ರಯದಲ್ಲಿ ನಡೆಯಲಿದೆ.

ಆ. 17 ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಹಾಗೂ ಪತ್ರಕರ್ತ ವಿಘ್ನೇಶ್ ಎಂ. ಭೂತನಕಾಡು ಅವರು ಬರೆದಿರುವ ಕೊಡವ ಕ್ರೀಡಾ ಸಾಧಕರ ಮಾಹಿತಿಯನ್ನು ಒಳಗೊಂಡ ‘ಕೊಡವ ಕ್ರೀಡಾ ಕಲಿಗಳು’ ಪುಸ್ತಕವನ್ನು ಅಥ್ಲೀಟ್ ತೀತಮಾಡ ಅರ್ಜುನ್ ದೇವÀಯ್ಯ ಅವರು ಬಿಡುಗಡೆ ಮಾಡಲಿದ್ದಾರೆ.

ಬರಹಗಾರರಾಗಿರುವ ಕೂಪದಿರ ಸುಂದರಿ ಮಾಚಯ್ಯ ಅವರು ಕೊಡವ ಭಾಷೆಯಲ್ಲಿ ಬರೆದಿರುವ ‘ವಾಲ್ಮೀಕಿ ರಾಮಾಯಣ’ ಪುಸ್ತಕವನ್ನು ಸಾಹಿತಿ ನಾಗೇಶ್ ಕಾಲೂರು ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ನಿರ್ದೇಶಕರಾದ ಎಸ್.ಎಂ. ಮುಬಾರಕ್, ಕಿಶೋರ್ ರೈ ಕತ್ತಲೆಕಾಡು ಮತ್ತಿತರರು ಭಾಗವಹಿಸಲಿದ್ದಾರೆ.