ಮಡಿಕೇರಿ, ಸೆ. 21: ಮಾನವನ ಬದುಕಿಗೆ ನಮ್ಮೆಲ್ಲರ ಆರಾಧ್ಯ ದೇವನಾದ ಗಣಪತಿಯೇ ಪ್ರೇರಣಾ ಶಕ್ತಿಯಾಗಿದ್ದಾನೆ ಎಂದು ಮಂಗಳೂರು ಏನ್ನಿಬೆಸೆಂಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಸುಲೋಚನ ನಾರಾಯಣ್ ಅಭಿಪ್ರಾಯಪಟ್ಟರು.

ಕುಂಜಿಲಗೇರಿಯ ಶ್ರೀ ಗಣಪತಿ ಸೇವಾ ಸಮಿತಿಯ 22ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿ, ಶ್ರೀ ಗಣಪತಿಯಂತೆ ನಾವು ಸಮಯೋಚಿತ ಬದುಕು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸೂಕ್ಷ್ಮ ಗ್ರಹಿಕೆಯ ಗಣಪ, ಮಾತಾಪಿತರ ಭಕ್ತಿಯಿಂದ ಜಗವನ್ನು ಗೆಲ್ಲುವದರೊಂದಿಗೆ ತನ್ನ ಸೂಕ್ಷ್ಮಮ ತಿಯಿಂದ ದೇವಗಣನಾಯಕನಾಗಿ ಅಗ್ರಪೂಜೆಗೆ ಪಾತ್ರನಾಗಲು ಕಾರಣವನ್ನು ಅವರು ವಿವರಿಸಿದರು. ಅಲ್ಲದೆ ಗಣಪತಿಯ ಪ್ರತಿ ಅಂಗಾಂಗ ಸ್ವರೂಪ ಮನುಷ್ಯನ ಬದುಕಿಗೆ ನೀತಿ ಪಾಠ ಕಲಿಸುವದಾಗಿ ವಿಶ್ಲೇಷಿಸಿದರು.

‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಸಾರ್ವಜನಿಕ ಗಣೇಶೋತ್ಸವದ ಮಹತ್ವದೊಂದಿಗೆ, ಪ್ರಾಕೃತಿಕ ವಿಕೋಪ ಸನ್ನಿವೇಶವನ್ನು ಮೆಲುಕು ಹಾಕಿದರು. ವಿಗ್ರಹ ದಾನಿ ಪಾಲಿ ನಾಣಯ್ಯ, ಗಣಪತಿ ಸೇವಾ ಸಮಿತಿ ಅಧ್ಯಕ್ಷ ಬಿನ್ನು ಮುದ್ದಪ್ಪ, ಮುಕ್ಕಾಟಿರ ಪ್ರವೀಣ್, ಕೂತಂಡ ಸ್ವರೂಪ್, ಕರುಣ್ ದೇವಯ್ಯ ಮೊದಲಾದವರು ಈ ವೇಳೆ ಮಾತನಾಡಿದರು.

ನಿವೃತ್ತ ಪೊಲೀಸ್ ಅಧಿಕಾರಿ ಮುಕ್ಕಾಟಿರ ಅಪ್ಪಯ್ಯ, ನಿವೃತ್ತ ಸೈನ್ಯಾಧಿಕಾರಿ ಅಮ್ಮು ಮುತ್ತಣ್ಣ, ನಿವೃತ್ತ ಶಿಕ್ಷಕ ಶಂಭು, ಸಾಬು ಉತ್ತಪ್ಪ, ಅಪ್ಪುಣು ಪೂವಯ್ಯ, ವಿಲಿನ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉಪನ್ಯಾಸಕಿ ನಿರೀಕ್ಷಾ ಪ್ರಾರ್ಥನೆಯೊಂದಿಗೆ ನಿರೂಪಿಸಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಹಿನ್ನೆಲೆ ಸರಳ ಸಾರ್ವಜನಿಕ ಗಣೇಶೋತ್ಸವದೊಂದಿಗೆ ಅನ್ನದಾನದ ಬಳಿಕ ಸಾಂಪ್ರದಾಯಿಕ ಮೆರವಣಿಗೆ ಯಲ್ಲಿ ಉತ್ಸವ ಮೂರ್ತಿಯ ವಿಸರ್ಜನೆ ನಡೆಯಿತು. ಗೀತಾ ಗಾಯನ ಸ್ಪರ್ಧೆ, ಹಾಸ್ಯ, ರಸಪ್ರಶ್ನೆ ಇತ್ಯಾದಿ ಪೈಪೋಟಿ ಮೂಲಕ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.