ಮಡಿಕೇರಿ, ಸೆ. 21: 2018-19ನೇ ಸಾಲಿನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜಿ ನಲ್ಲಿ ಚಾಲನೆ ನೀಡಲಾಯಿತು. ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರ ಹಾಗೂ ವಿಶ್ವವಿದ್ಯಾ ನಿಲಯ ವಾಲಿಬಾಲ್ ಪಟು ಟಿ.ಡಿ. ರಮಾನಂದ ಕ್ರೀಡಾಕೂಟವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಪಠ್ಯದ ಅಧ್ಯಯನದೊಂದಿಗೆ ಕ್ರೀಡೆಯಲ್ಲಿಯೂ ಕೂಡ ತಮ್ಮನ್ನು ಸದಾ ತೊಡಗಿಸಿಕೊಳ್ಳಬೇಕು. ಕ್ರೀಡೆ ಜನರಲ್ಲಿ ಗೆಳೆತನ, ಸೌಹಾರ್ದತೆ, ಸಹಕಾರ ಹಾಗೂ ಉದಾತ್ತ ಮನೋಭಾವನೆಯನ್ನು ಬೆಳೆಸುತ್ತದೆ. ಆಧುನಿಕ ಕಾಲದಲ್ಲಿ ಯುವಕರು ಸಾಮಾಜಿಕ ಜಾಲತಾಣಗಳ ಬಲೆಯಲ್ಲಿ ಸಿಲುಕಿ ಕ್ರೀಡೆಯನ್ನು ನಿರ್ಲಕ್ಷಿಸುತ್ತಿದ್ದಾರೆ.

ಈ ರೀತಿಯ ಚಿಂತನೆಯಿಂದ ಹೊರಬಂದು ಶ್ರದ್ಧೆಯಿಂದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಸಾಧನೆಯ ಶಿಖರವನ್ನು ಏರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕ್ರೀಡಾಕೂಟದ ಉದ್ಘಾಟನೆಯ ಅಂಗವಾಗಿ ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜು, ಕಾಪ್ಸ್ ವಿದ್ಯಾ ಸಂಸ್ಥೆ, ಗುಡ್ ಶೆಫರ್ಡ್ ವಿದ್ಯಾ ಸಂಸ್ಥೆ. ಬಿ.ಜೆ.ವಿ.ಎಸ್. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನವನ್ನು ನಡೆಸಲಾಯಿತು. ಮೊದಲ ದಿನ ನಡೆದ ಬಾಲಕರ ಹಾಗೂ ಬಾಲಕಿಯರ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿಯಲ್ಲಿ ಕ್ರಮವಾಗಿ ಕಾವೇರಿ ಕಾಲೇಜು, ಗೋಣಿಕೊಪ್ಪಲು, ಸರ್ವದೈವತಾ ಕಾಲೇಜು, ಪೊನ್ನಂಪೇಟೆ ಹಾಗೂ ಕಾಪ್ಸ್ ಕಾಲೇಜು ತಂಡಗಳು ವಿಜೇತರಾದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ. ಕೆಂಚಪ್ಪ, ಪ್ರಾಚಾರ್ಯರಾದ ಡಾ|| ಕೆ. ಎಂ. ಭವಾನಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪಿ. ಪಿ. ಬೋಪಣ್ಣ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ವಿಜೇತರಿಗೆ ಪುತ್ತೂರಿನ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯವರು ಟ್ರೋಫಿಯನ್ನು ನೀಡಿದರು.