*ಗೋಣಿಕೊಪ್ಪಲು, ಸೆ. 21: ಹುದಿಕೇರಿ-ಬೆಳ್ಳೂರು-ಹರಿಹರ ಮಾರ್ಗ ರಸ್ತೆ ಮರು ಡಾಂಬರಿಕರಣ ಕಾಮಗಾರಿಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಇಂಜಿನಿಯರ್‍ಗೆ ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು.

ಕಳೆದ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದ ಶ್ರೀಮಂಗಲ ಮಾರ್ಗದ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ವಾಹನ ಸಂಚಾರಕ್ಕೆ ಬದಲಿ ಮಾರ್ಗವಾಗಿ ಬೆಳ್ಳೂರು-ಹರಿಹರ ಸಂಪರ್ಕ ರಸ್ತೆಯನ್ನು ಅನುವು ಮಾಡಿಕೊಡಲಾಯಿತು.

ಈ ಸಂದರ್ಭ ಈ ಮಾರ್ಗವಾಗಿ ಬಸ್, ಲಾರಿಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟು ಲಘು ವಾಹನ ಸಂಚಾರಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ರಸ್ತೆಗಳು ಹಾಳಾದವು. ಇದನ್ನು ಸ್ಥಳೀಯ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದು ಶೀಘ್ರವೆ ರಸ್ತೆ ಡಾಂಬರಿಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿದ ಶಾಸಕರು ಹದಗೆಟ್ಟ ರಸ್ತೆಯನ್ನು ಪರಿಶೀಲಿಸಿ ಸ್ಥಳದಲ್ಲೆ ಜಿಲ್ಲಾ ಇಂಜಿನಿಯರ್ ವಿಭಾಗ ಅಧಿಕಾರಿಗೆ ದೂರವಾಣಿ ಕರೆ ಮಾಡುವ ಮೂಲಕ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದರು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 5.50 ಕಿ.ಮೀ. ಉದ್ದದ ರಸ್ತೆ ಡಾಂಬರಿಕರಣ ಕಾಮಗಾರಿ ಕಳೆದ 4 ವರ್ಷಗಳ ಹಿಂದೆ ನಡೆದಿತ್ತು. ಗುತ್ತಿಗೆದಾರರ ಕಳೆಪೆ ಮಟ್ಟದ ಕಾಮಗಾರಿಯಿಂದ ರಸ್ತೆ ಪೂರ್ಣ ಹದಗೆಡಲು ಮುಖ್ಯ ಕಾರಣ ಎಂದು ಗ್ರಾಮಸ್ಥ ನೂರೇರ ಮಂಜು, ಆರೋಪಿಸಿದರು. ಈ ಸಂದರ್ಭ ಜಿ.ಪಂ. ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ತಾಲೂಕು ಬಿ.ಜೆ.ಪಿ. ಮಂಡಳ ಅಧ್ಯಕ್ಷ ಅರುಣ್ ಭೀಮಯ್ಯ, ಪೊನ್ನಂಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು, ಫೆಡರೇಶನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.