ಸೋಮವಾರಪೇಟೆ, ಸೆ. 21: ದಲಿತಪರ ಸಂಘಟನೆಗಳ ಒಕ್ಕೂಟ, ಕೊಡಗು ಜಿಲ್ಲೆ ಇದರ ಹೆಸರನ್ನು ಕೆಲವರು ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರೆ ಎಂದು ಸೋಮ ವಾರಪೇಟೆ ವಿಭಾಗದ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಕಳೆದ ತಾ. 16.4.2015 ರಂದು ಯಡೂರಿನ ಸ್ವೀಕಾರ್ ಎಂಬವರು ಅನುಮಾನಾಸ್ಪದವಾಗಿ ಮೃತಪಟ್ಟ ಸಂದರ್ಭ, ದಲಿತರ ಮೇಲಾಗುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ ಹೋರಾಟ ನಡೆಸಲು ವಿವಿಧ ದಲಿತಪರ ಸಂಘಟನೆಗಳು ಒಗ್ಗೂಡಿ ಒಕ್ಕೂಟವನ್ನು ರಚಿಸಲಾಗಿತ್ತು.
ಆ ನಂತರ ಒಕ್ಕೂಟದಲ್ಲಿ ಕೆಲ ರಾಜಕೀಯ ಮತ್ತು ವ್ಯಕ್ತಿಗಳ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾದ ಸಂದರ್ಭ ಒಕ್ಕೂಟದಿಂದ ಎಲ್ಲರೂ ಹಿಂದೆ ಸರಿದಿದ್ದು, ಒಕ್ಕೂಟವೂ ಮಾನ್ಯತೆ ಕಳೆದುಕೊಂಡಿದೆ. ಆದರೆ ಇಂದಿಗೂ ಕೆಲವರು ತಾನು ಒಕ್ಕೂಟದ ಅಧ್ಯಕ್ಷ ಎಂದು ಹೇಳಿಕೊಂಡು ತಮ್ಮ ವೈಯುಕ್ತಿಕ ಕಾರ್ಯಸಾಧನೆ ಮಾಡುತ್ತಿದ್ದಾರೆ. ಅಸ್ತಿತ್ವ ಕಳೆದುಕೊಂಡ ಒಕ್ಕೂಟದ ಹೆಸರನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರೆ ಎಂದು ಹಿರಿಯ ದಲಿತ ಮುಖಂಡರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂದು ಕೆಲವರು ಹೇಳಿ ಕೊಳ್ಳುತ್ತಿರುವದು ಸರಿಯಲ್ಲ. ಈ ಹೆಸರಿನಲ್ಲಿ ನಡೆಯುವ ಯಾವ ಚಟುವಟಿಕೆಗಳಿಗೂ ನಮಗೂ ಸಂಬಂಧವಿಲ್ಲ ಎಂದು ದಲಿತ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ, ಪ್ರಧಾನ ಕಾರ್ಯದರ್ಶಿ ಜಯೇಂದ್ರ, ಮಂಜುನಾಥ್, ಕೆಐಎಸ್‍ಎಸ್ ಅಧ್ಯಕ್ಷ ಹೊನ್ನಪ್ಪ, ಇಂದಿರಾಗಾಂಧಿ ಅಭಿಮಾನಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಕಾರ್ಮಿಕ ಸಂಘಟನೆಯ ಹೆಚ್.ಇ. ಸಣ್ಣಪ್ಪ, ಕರ್ನಾಟಕ ರೈತ ಸಂಘದ ಅಧ್ಯಕ್ಷ ಎಸ್.ಆರ್. ಮಂಜುನಾಥ್ ಅವರುಗಳು ಹೇಳಿಕೆ ನೀಡಿದ್ದಾರೆ.