ಕೂಡಿಗೆ, ಸೆ. 21: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಕೃತಿ ವಿಕೋಪದಿಂದ ಮುಂದೂಡಲ್ಪಟ್ಟಿದ್ದ ವಾರ್ಡ್‍ಸಭೆ ಮತ್ತು ಗ್ರಾಮಸಭೆಯನ್ನು ಮುಂದಿನ ತಿಂಗಳಲ್ಲಿ ನಡೆಸುವಂತೆ ಸದಸ್ಯರು ತೀರ್ಮಾನ ಕೈಗೊಂಡರು. ಮುಖ್ಯಮಂತ್ರಿಯವರ ರೂ. 1 ಕೋಟಿ ಅನುದಾನ ಅನುಮೋದನೆ ಆಗಿ ಬಂದಿದ್ದು, ಕಾಮಗಾರಿಗಳನ್ನು ನಡೆಸುವ ಬಗ್ಗೆ ಚರ್ಚೆ ನಡೆದವು.

14ನೇ ಹಣಕಾಸು ಯೋಜನೆಯಡಿಯಲ್ಲಿ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಈಗಾಗಲೇ ಕೂಡಿಗೆ ಗ್ರಾಮಕ್ಕೆ ಸ್ಮಶಾನ ಜಾಗ ಗುರುತಿಸುವ ಬಗ್ಗೆ ಹಾಗೂ ಪೈಸಾರಿ ಜಾಗ ಇರುವ ಸ್ಥಳಗಳನ್ನು ಗುರುತಿಸಿ, ಸ್ಥಳ ನಿಗದಿ ಮಾಡುವಂತೆ ತಾಲೂಕಿನ ಕಂದಾಯ ಇಲಾಖೆಗೆ ಮತ್ತು ಸರ್ವೇಯವರಿಗೆ ಅರ್ಜಿಯನ್ನು ಕಳುಹಿಸುವದರ ಬಗ್ಗೆ ಚರ್ಚಿಸಿ ಶೀಘ್ರವಾಗಿ ಜಾಗ ಗುರುತಿಸಲು ತೀರ್ಮಾನಿಸಲಾಯಿತು.

ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಮಾಸಿಕ ಸಭೆಯ ತೀರ್ಮಾನದಂತೆ ಮುಂದಿನ ದಿನಗಳಲ್ಲಿ ಸರ್ವ ಸದಸ್ಯರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಆಧ್ಯತೆ ನೀಡಲಾಗುವದು ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಸರ್ಕಾರದ ಮಾಹಿತಿಗಳನ್ನು ಸಭೆಗೆ ಒದಗಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಕೆ.ವೈ. ರವಿ, ಈರಯ್ಯ, ಮೋಹಿನಿ, ಕೆ.ಬಿ. ರಾಮಚಂದ್ರ, ರತ್ನಮ್ಮ, ಹೆಚ್.ಎಸ್. ರವಿ, ಪುಷ್ಪ, ಜಯಶ್ರೀ, ಚಂದ್ರಿಕಾ, ಕಲ್ಪನಾ, ಟಿ.ಕೆ. ವಿಶ್ವನಾಥ್, ಕೆ.ಜೆ. ಮಂಜು, ಕೆ.ಎ. ದಸ್ವಿ ಹಾಗೂ ಕಾರ್ಯದರ್ಶಿ ಶಿಲ್ಪ ಇದ್ದರು.