ಸಿದ್ದಾಪುರ, ಸೆ. 21: ಮೂಲಭೂತ ಸೌಕರ್ಯವಾದ ರಸ್ತೆಯಿಂದ ವಂಚಿತರಾದ ಒಂದು ಗ್ರಾಮಕ್ಕೆ ಇದೀಗ ನ್ಯಾಯಾಲಯವು ರಸ್ತೆ ಒದಗಿಸಬೇಕೆಂಬ ಆದೇಶ ನೀಡಿದ್ದು, ದಶಕಗಳ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ.

ಸಮೀಪದ ಗುಹ್ಯ ಗ್ರಾಮದ ಕಕ್ಕಟ್ಟುಕಾಡು ಎಂಬ ಪ್ರದೇಶದಲ್ಲಿ ಸುಮಾರು 35 ಕುಟುಂಬಗಳು ವಾಸವಾಗಿದ್ದು, ವಾಹನ ಸಂಚಾರಕ್ಕೆ ರಸ್ತೆ ಇಲ್ಲದೇ ಹಲವು ವರ್ಷಗಳಿಂದ ಸಂಕಷ್ಟ ಎದುರಿಸುತ್ತಿದ್ದರು. ಕಕ್ಕಟ್ಟುಕಾಡುವಿನಿಂದ ಗುಹ್ಯ ಅಗಸ್ತ್ಯೇಶ್ವರ ದೇವಾಲಯದವರೆಗೂ ಸುಮಾರು 1 ಕಿ.ಮೀ ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲೇ ಸಾಗಬೇಕಾಗಿದ್ದು, ವಿದ್ಯಾರ್ಥಿಗಳು, ವೃದ್ಧರೂ ಸೇರಿದಂತೆ ಸಾರ್ವಜನಿಕರು ಹಲವು ವರ್ಷಗಳಿಂದ ನರಕ ವೇದನೆಯನ್ನು ಅನುಭವಿಸುತ್ತಿದ್ದಾರೆ. ಅನಾರೋಗ್ಯ ಸೇರಿದಂತೆ ತುರ್ತು ಅಗತ್ಯಗಳ ಸಂದರ್ಭ ನಾಲ್ಕು ಅಡಿಯ ಕಾಲುದಾರಿಯಲ್ಲೇ ಸಂಚರಿಸಬೇಕಾಗಿದ್ದು, ಈ ಹಿಂದೆ ಗರ್ಭಿಣಿ ಮಹಿಳೆಯ ಪ್ರಸವದ ಸಂದರ್ಭ ವಾಹನ ಸಂಚಾರವಿಲ್ಲದ ಕಾರಣ ರಸ್ತೆ ಮಧ್ಯೆ ಗರ್ಭಿಣಿ ಮಹಿಳೆ ಹಾಗೂ ಮಗು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಮಾತ್ರವಲ್ಲದೇ ನದಿಯಲ್ಲಿ ಬಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಕಾಲು ದಾರಿಯಲ್ಲಿ ವಿಳಂಬವಾದ ಕಾರಣ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಳು. ಈ ಭಾಗದಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ವಿದ್ಯಾರ್ಥಿಗಳು ಕೂಡ ಭಯದಿಂದಲೇ ಶಾಲೆಗಳಿಗೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಇಷ್ಟೆಲ್ಲಾ ನರಕ ಯಾತನೆ ಅನುಭವಿಸಿದ ಗ್ರಾಮಸ್ಥರ ಪರವಾಗಿ ನ್ಯಾಯಾಲಯವು ತೀರ್ಪನ್ನು ನೀಡಿದ್ದು, ಗ್ರಾಮ ನಕಾಶೆಯಲ್ಲಿರುವ ರಸ್ತೆಯಲ್ಲಿ 10 ಅಡಿ ಅಗಲದ ರಸ್ತೆಯನ್ನು ನೀಡಬೇಕೆಂದು ಆದೇಶಿಸಿದೆ. ದಶಕಗಳಿಂದ ಅನುಭವಿಸುತ್ತಿದ್ದ ಕಷ್ಟಗಳಿಗೆ ಮುಕ್ತಿ ದೊರಕಲಿದೆ ಎಂಬ ಸಂತೋಷದಲ್ಲಿ ಗ್ರಾಮಸ್ಥರಿದ್ದಾರೆ. ಗ್ರಾಮಸ್ಥರು ತಮ್ಮ ಸಮಸ್ಯೆಯ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಬಾಗಿಲು ತಟ್ಟುತ್ತಿದ್ದರೂ, ಈವರೆಗೂ ನ್ಯಾಯ ದೊರಕಿರಲಿಲ್ಲ.

ಗ್ರಾ.ಪಂ ಬೆಂಬಲ

ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದ ಗುಹ್ಯ ಗ್ರಾಮದ ಕಕ್ಕಟ್ಟುಕಾಡು ನಿವಾಸಿಗಳ ಪರ ಸಿದ್ದಾಪುರ ಗ್ರಾ.ಪಂ ಕೂಡ ನಿಂತಿದ್ದು, ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಗ್ರಾ.ಪಂ ಅಧ್ಯಕ್ಷ ಎಂ.ಕೆ ಮಣಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಕಕ್ಕಟ್ಟುಕಾಡು ನಿವಾಸಿಗಳ ದಶಕಗಳ ಸಮಸ್ಯೆಯ ಬಗ್ಗೆ ಸುದೀರ್ಘ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿತ್ತು.