ಕೂಡಿಗೆ, ಸೆ. 21: ಜಿಲ್ಲೆಯಲ್ಲಿ ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಮಕ್ಕಂದೂರು ಗ್ರಾಮದ ನಿವಾಸಿಗಳು ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದು, ಕುಟುಂಬಸ್ಥರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದ ಕುಟುಂಬವನ್ನು ಗುರುತಿಸಿದ ಹುದಗೂರು ಉಮಾಮಹೇಶ್ವರಿ ದೇವಾಲಯ ಸಮಿತಿ, ಕಾಳಿಕಾಂಬ ಯುವಕ ಸಂಘ ಹಾಗೂ ಸ್ಥಳೀಯ ಗ್ರಾಮಸ್ಥರು ರೂ. 35 ಸಾವಿರ ನಗದನ್ನು ನೀಡಿದ್ದಾರೆ.

ಮಕ್ಕಂದೂರಿನ ಸಬ್ಬಂಡ್ರ ರಾಜ ಜಯಪ್ಪ ಕುಟುಂಬವು ನೆರೆ ಪ್ರವಾಹದಲ್ಲಿ ತಮ್ಮ ಮನೆ-ಮಠ ಕುಸಿಯುತ್ತಿದ್ದುದ್ದನ್ನು ಕಣ್ಣಾರೆ ನೋಡುತ್ತಿದ್ದಂತೆ ಅಲ್ಲಿನ ಯುವಕರ ಸಹಕಾರದೊಂದಿಗೆ ಅಲ್ಲಿಂದ ತಮ್ಮ ಪ್ರಾಣವನ್ನು ಉಳಿಸಿಕೊಂಡು ಬಂದಿದ್ದು, ಯಾವದೇ ನಿರಾಶ್ರಿತರ ಕೇಂದ್ರಕ್ಕೆ ತೆರಳದೇ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹುದಗೂರು ಗ್ರಾಮದಲ್ಲಿರುವ ಮಗಳ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದರು. ರಾಜ ಅವರು ಕಾಫಿ ಬೆಳೆಗಾರರಾಗಿದ್ದು, ಇವರ ಹದಿಮೂರು ಎಕರೆ ಜಮೀನು ಹಾಗೂ ಮನೆ ನೆರೆಯಿಂದ ನೆಲಸಮವಾಗಿದೆ.

ಇವರಂತೆ ಮಕ್ಕಂದೂರು, ಮುಕ್ಕೋಡ್ಲು, ತಂತಿಪಾಲ ಸೇರಿದಂತೆ ಹಲವು ಗ್ರಾಮದಲ್ಲಿರುವ ಗ್ರಾಮಸ್ಥರು ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ದಿಕ್ಕು ತೋಚದೇ ನಿರಾಶ್ರಿತರ ಕೇಂದ್ರ ಹಾಗೂ ಮುಂತಾದ ಕಡೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಅಲ್ಲದೇ ನೆರೆ ಪ್ರವಾಹದಲ್ಲಿ ಸಿಲುಕಿದ ಹಲವು ಕುಟುಂಬಗಳು ನಿರಾಶ್ರಿತರ ಕೇಂದ್ರಕ್ಕೆ ತೆರಳದೇ ತಮ್ಮ ತಮ್ಮ ಕುಟುಂಬಸ್ಥರ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ನೆರವಾಗುವ ಉದ್ದೇಶವಿರುವ ಅದೆಷ್ಟೋ ದಾನಿಗಳು ಸಂತ್ರಸ್ತರಿಗೆ ಬೇಕಾದ ಆಹಾರ ಸಾಮಗ್ರಿಗಳಾಗಲಿ, ದೈನಂದಿನ ಬಳಕೆಯ ವಸ್ತುಗಳು ಮುಂತಾದವುಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಹುದಗೂರಿನ ಉಮಾಮಹೇಶ್ವರ ದೇವಾಲಯ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ದು ತಮ್ಮಿಂದಾದ ಸಹಾಯವನ್ನು ಮಾಡುವ ಮೂಲಕ ಬೇರೆಯವರಿಗೆ ಪ್ರೇರಣೆಯಾಗಿದ್ದಾರೆ.

- ನಾಗರಾಜ್ ಶೆಟ್ಟಿ.